ರಾಷ್ಟ್ರೀಯ

8 ಹಂತಗಳಲ್ಲಿ ಲೋಕಸಭೆ ಚುನಾವಣೆ?: ಈ ವಾರಾಂತ್ಯ ಅಥವಾ ಮುಂದಿನ ವಾರ ಚುನಾವಣಾ ದಿನಾಂಕ ಘೋಷಣೆ

Pinterest LinkedIn Tumblr


ನವದೆಹಲಿ: ಇಡೀ ದೇಶವೇ ಎದುರು ನೋಡುತ್ತಿರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಈ ಚುನಾವಣೆಯನ್ನು 7-8 ಹಂತಗಳಲ್ಲಿ ನಡೆಸಲು ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಚುನಾವಣಾ ಆಯೋಗವು ಈ ವಾರಾಂತ್ಯದಲ್ಲಿ ಅಥವಾ ಮುಂದಿನ ವಾರದಂದು ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಮಂಗಳವಾರದೊಳಗೆ ಘೋಷಣೆಯಾಗಬಹುದು. ಚುನಾವಣೆ ಆಯೋಜನೆಗೆ ಬೇಕಾದ ಎಲ್ಲಾ ರೀತಿಯ ತಯಾರಿ ಬಹುತೇಕ ಮುಕ್ತಾಯವಾಗಿದೆ ಎನ್ನಲಾಗಿದೆ. ಚುನಾವಣಾ ಸಮಿತಿಯು ಈ ತಯಾರಿಯ ಮೇಲ್ವಿಚಾರಣೆ ನಡೆಸುತ್ತಿದೆ.

ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಮ್ ಮತ್ತು ಅರುಣಾಚಲಪ್ರದೇಶದ ವಿಧಾನಸಭೆ ಚುನಾವಣೆಗಳೂ ಒಟ್ಟಿಗೆ ನಡೆಯಲಿದೆ. ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜನೆಗೊಂಡಿರುವ ಜಮ್ಮು-ಕಾಶ್ಮೀರದ ಚುನಾವಣೆಯೂ ಕೂಡ ಇದೇ ವೇಳೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಚುನಾವಣೆ ಸಮಿತಿಯು ಕಳೆದ ಕೆಲ ವಾರಗಳ ಹಲವು ಪರಿಶೀಲನಾ ಸಭೆಗಳನ್ನು ನಡೆಸಿ ಸಜ್ಜುಗೊಳಿಸುತ್ತಿದೆ. ದೇಶಾದ್ಯಂತ 10 ಲಕ್ಷದಷ್ಟು ಮತಗಟ್ಟೆಗಳಿಗೆ ಬೇಕಾದ ಇವಿಎಂಗಳು ಹಾಗೂ ಪೇಪರ್ ಟ್ರೇಲ್ ಮೆಷೀನ್​ಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ.

ಕಳೆದ ಬಾರಿಯ ಲೋಕಸಭೆ ಚುನಾವಣೆಯು 9 ಹಂತಗಳಲ್ಲಿ ನಡೆದಿತ್ತು. 2004 ಮತ್ತು 2009ರಲ್ಲಿ 4 ಹಾಗೂ 5 ಹಂತಗಳಲ್ಲಿ ಚುನಾವಣೆಗಳು ನಡೆದಿದ್ದವು. ಈ ಬಾರಿ 7 ಅಥವಾ 8 ಹಂತಗಳಲ್ಲಿ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.

Comments are closed.