ಕರ್ನಾಟಕ

ರಫೇಲ್​ ಹಗರಣದ ದಾಖಲೆಗಳು ಕಳ್ಳತನದ ಬಗ್ಗೆ ನಟ ಜಗ್ಗೇಶ್ ‘ವಿಚಿತ್ರ’ ಟ್ವೀಟ್ ವೈರಲ್! ಖಾತೆ ನಕಲು ಮಾಡಿ ತೇಜೋವಧೆ ಮಾಡಿದ್ದಾರೆ ಎಂದ ಜಗ್ಗೇಶ್

Pinterest LinkedIn Tumblr

ಬೆಂಗಳೂರು: “ರಫೇಲ್​ ಹಗರಣದ ದಾಖಲೆಗಳು ಕಳ್ಳತನವಾಗಿದೆ ಎಂದು ಸರ್ಕಾರ ಹೇಳಿದೆ. ರಾಜ್ಯ ಮೈತ್ರಿ ಸರ್ಕಾರಕ್ಕೆ ಒಂದು ದಾಖಲೆಯನ್ನು ರಕ್ಷಿಸಲು ಸಾಧ್ಯವಿಲ್ಲದಿದ್ದರೆ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ?” ಎಂಬ ಟ್ವಿಟರ್ ಪೋಸ್ಟಿನ ಚಿತ್ರ ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಈ ಟ್ವೀಟ್​ ಬಿಜೆಪಿ ನಾಯಕ ಹಾಗೂ ನವರಸ ನಾಯಕ ಜಗ್ಗೇಶ್​ ಅವರ ಖಾತೆಯಿಂದ ಟ್ವೀಟ್​ ಆಗಿತ್ತು. ಆನಂತರ ಹತ್ತು ನಿಮಿಷದಲ್ಲೇ ಈ ಟ್ವೀಟ್​ ಡಿಲಿಟ್​ ಆಗಿತ್ತು. ಇದನ್ನು ಸ್ಕ್ರೀನ್​ ಶಾಟ್​ ತೆಗೆದುಕೊಂಡು ಎಲ್ಲೆಡೆ ವೈರಲ್​ ಮಾಡಿದ್ದರು. ಇದನ್ನು ನೋಡಿದವರು, ಜಗ್ಗೇಶ್​ ಒಬ್ಬ ಅತ್ಯುತ್ತಮ ಕಾಮಿಡಿಯನ್​ ಎಂಬುದನ್ನು ಮತ್ತೊಮ್ಮೆ ರುಜುವಾತು ಮಾಡಿದ್ದಾರೆ ಎಂಬಂತಹ ವ್ಯಂಗ್ಯದ ಪ್ರತಿಕ್ರಿಯೆಗಳು ಹರಿದಾಡತೊಡಗಿದವು.

ಬಿಜೆಪಿ ಮುಖಂಡನೊಬ್ಬನಿಗೆ ಕೇಂದ್ರ ಸರ್ಕಾರ ಯಾವುದು ರಾಜ್ಯ ಸರ್ಕಾರ ಯಾವುದು ಎಂಬುದು ಗೊತ್ತಿಲ್ಲವೇ ಎಂಬ ಜಿಜ್ಞಾಸೆಯ ಪ್ರಶ್ನೆಗಳು ಎದ್ದಿದ್ದವು. ಎಲ್ಲ ವಿಚಾರದಲ್ಲೂ ಪ್ರಬುದ್ಧವಾಗಿ ಮಾತನಾಡುವ ಜಗ್ಗೇಶ್​ ಅವರು ಹೀಗೆ ಅಸಂಬದ್ಧವಾಗಿ ಟ್ವೀಟ್​ ಮಾಡಲು ಸಾಧ್ಯವೇ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.

ಇದೇ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿರುವ ನವರಸ ನಾಯಕ ಜಗ್ಗೇಶ್​, ಕಿಡಿಗೇಡಿಗಳು ಫೋಟೋಶಾಪ್​ ಮೂಲಕ ನನ್ನ ಖಾತೆ ತರಹವೇ ನಕಲಿ ಖಾತೆಯನ್ನು ಸೃಷ್ಟಿಸಿ, ನನ್ನ ತೇಜೋವಧೆ ಮಾಡಲು ಇಂತಹ ಸಂದೇಶವನ್ನು ಹರಿಬಿಟ್ಟಿದ್ದಾರೆ. ನನ್ನ 38 ವರ್ಷದಿಂದ ಈ ತರಹದ ಪ್ರವೃತ್ತಿಯನ್ನು ನೋಡುತ್ತ ಬಂದಿದ್ದೇನೆ. ಇದರಿಂದ ನಾನೇನು ಹೆದರಿ ಕುಳಿತುಕೊಳ್ಳುವವನು ನಾನಲ್ಲ. ಯಾರು ಇಂತಹ ತಲೆ ಮಾಸಿದ ಕೆಲಸ ಮಾಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೆ ಬೇರೆ ವಿಧಿ ಇಲ್ಲ. ಇಂದು ಮಲ್ಲೇಶ್ವರಂ ಪೊಲೀಸ್​ ಠಾಣೆ ಹಾಗೂ ಸೈಬರ್​ ಕ್ರೈಂ ಬ್ರಾಂಚ್​ಗೆ ದೂರು ನೀಡಿದ್ದೇನೆ. ನನ್ನ ಪ್ರೀತಿ ಮಾಡುವ ಜನರು, ಇಂತಹದ್ದನ್ನು ಕಂಡ ತಕ್ಷಣ ನನ್ನನ್ನು ಟ್ಯಾಗ್​ ಮಾಡಿ, ಗಮನಕ್ಕೆ ತನ್ನಿ. ಇಂತಹ ದುಷ್ಕೃತ್ಯಗಳನ್ನು ಹಾಗೆ ಬಿಟ್ಟುಬಿಡಬಾರದು. ಇದಕ್ಕೆ ಸರಿಯಾದ ಪಾಠ ಕಲಿಸಬೇಕು, ಎಂದು ಹೇಳಿದ್ದಾರೆ.

Comments are closed.