ರಾಷ್ಟ್ರೀಯ

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಪೋಟಕ್ಕೆ ಓರ್ವ ಬಲಿ; 32 ಮಂದಿ ಗಾಯ

Pinterest LinkedIn Tumblr

ಜಮ್ಮು-ಕಾಶ್ಮೀರ: ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಮೃತಪಟ್ಟಿದಾನೆ ಎಂಬುದು ತಿಳಿದುಬಂದಿದೆ.

ನಗರದ ಜನದಟ್ಟಣೆಯ ಬಸ್ ನಿಲ್ದಾಣದಲ್ಲಿ ಶಂಕಿತ ಉಗ್ರರು ನಡೆಸಿದ ಗ್ರೆನೇಡ್ ಸ್ಪೋಟದಿಂದಾಗಿ 32 ಜನರು ಗಾಯಗೊಂಡಿದ್ದು, ಈ ಪೈಕಿ ಮೂವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಮೇನಿಂದಾಚೆಗೆ ಜಮ್ಮು ಬಸ್ ನಿಲ್ದಾಣದಲ್ಲಿ ಉಗ್ರರು ನಡೆಸಿರುವ ಮೂರನೇಯ ಗ್ರೆನೇಡ್ ಸ್ಪೋಟ ಇದಾಗಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತರುವಂತಹ ನಿಟ್ಟಿನಲ್ಲಿ ಈ ಸ್ಪೋಟ ನಡೆಸಿರುವ ಸಾಧ್ಯತೆ ಎಂಬುದು ತಿಳಿದುಬಂದಿದೆ.

ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಯ ಪ್ರಿನ್ಸಿಪಾಲ್ ಸುನಂದಾ ರೈನಾ ಹೇಳಿದ್ದಾರೆ.

ಇಂದು ಮಧ್ಯಾಹ್ನ ಕೆಲವರು ಗ್ರೆನೇಡ್ ಸ್ಪೋಟ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಪೋಟ ಸಂಭವಿಸಿದ ಬಿ ಸಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಗ್ರೆನೇಡ್ ಎಸೆದವರ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹಾನಿಯಾಗಿದ್ದು, ರಾಜ್ಯಾದ್ಯಂತ ಹೈ ಆಲರ್ಟ್ ಘೋಷಿಸಲಾಗಿದೆ. ತಪಾಸಣೆ ಕಾರ್ಯವನ್ನು ಚುರುಕುಗೊಳಿಸಲಾಗಿದೆ ಎಂದು ಐಜಿಪಿ ಹೇಳಿದ್ದಾರೆ.

ಕೋಮು ಸೌಹಾರ್ದತೆ ಹಾಗೂ ಶಾಂತಿಗೆ ಭಂಗ ತರುವಂತಹ ನಿಟ್ಟಿನಲ್ಲಿ ಈ ಸ್ಪೋಟ ನಡೆದಿದ್ದು, ಜನರು ಶಾಂತಿ ಕಾಪಾಡುವಂತೆ ತಿಳಿಸಲಾಗಿದೆ. ಪೊಲೀಸರು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ದಾಳಿ ಕೋರರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸ್ಪೋಟ ಸಂಭವಿಸಿದ ಕೂಡಲೇ ಜನರು ಪ್ರಾಣಪಾಯದಿಂದ ಓಡಿದ್ದರಿಂದ ಆತಂಕದ ವಾತವಾರಣ ಸೃಷ್ಟಿಯಾಗಿತ್ತು. ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಜಿಪಿ ಹೇಳಿದ್ದಾರೆ.

Comments are closed.