ಕರ್ನಾಟಕ

ಜೆಡಿಎಸ್ ನಾಯಕರು ಮಂಡ್ಯದ ಜನತೆಯ ಅಭಿಪ್ರಾಯ ಪರಿಗಣಿಸಿ ನನಗೆ ಟಿಕೆಟ್ ನೀಡಿದ್ದಾರೆ: ನಿಖಿಲ್ ಕುಮಾರಸ್ವಾಮಿ

Pinterest LinkedIn Tumblr

ಶೃಂಗೇರಿ: ಮಂಡ್ಯ ಜನತೆ ನಾಡಿಮಿಡಿತ ಅರಿತು ನನಗೆ ಲೋಕಸಭೆಗೆ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ನಿಡಲಾಗುತ್ತಿದೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಕುಟುಂಬ ಸದಸ್ಯರೊಡನೆ ಶೃಂಗೇರಿಗೆ ಆಗಮಿಸಿರುವ ನಿಖಿಲ್ ಶಾರದಾಂಬೆಯ ದರ್ಶನ, ಗುರುಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಈ ಬಳಿಕ ಮಾದ್ಯಮದವರೊಡನೆ ಮಾತನಾಡಿದ ನಿಖಿಲ್ “ಜೆಡಿಎಸ್ ನಾಯಕರು ಮಂಡ್ಯದ ಜನತೆಯ ಅಭಿಪ್ರಾಯ ಪರಿಗಣಿಸಿ ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ” ಎಂದರು.

“ನಾನು ಈ ದಿನದಿಂದಲೇ ಮಂಡ್ಯದ ಜನತೆಯ ಕಾಳಜಿ ವಹಿಸಲಿದ್ದೇನೆ. ಶೃಂಗೇರಿ ಗುರುಗಳ ಆಶೀರ್ವಾದ ಪಡೆದು ಇಂದಿನಿಂದ ನಾನು ಜನಸೇವೆಗೆ ನಿಲ್ಲುತ್ತೇನೆ. ಮಂಡ್ಯದ ಜನರ ನಾಡಿಮಿಡಿತ ಅರಿತು ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ” ಅವರು ಹೇಳಿದ್ದಾರೆ.

ಗೋ ಬ್ಯಾಕ್ ನಿಖಿಲ್ ಅಭಿಯಾನ
ಈ ನಡುವೆ ಸಾಮಾಜಿಕ ತಾಣಗಳಲ್ಲಿ ಜೆಡಿಎಸ್ ನಾಯಕರ ಕುಟುಂಬ ರಾಜಕಾರಣದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೆ ಮಂಡ್ಯದಲ್ಲಿ ಲೋಕಕಣಕ್ಕಿಳಿಯಲಿರುವ ಸಿಎಂ ಪುತ್ರ ನಿಖಿಲ್ ವಿರುದ್ಧ ಸಹ ಆಕ್ರೋಶ ವ್ಯಕತವಾಗಿದೆ. “ಗೋ ಬ್ಯಾಕ್ ನಿಖಿಲ್” ಎಂಬ ಹೊಸ ಅಭಿಯಾನವೊಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಆರಂಭವಾಗಿದೆ.
ಶೃಂಗೇರಿಯಲ್ಲಿ ಈ ಸಂಬಂಧ ಮಾತನಾಡಿದ ನಿಖಿಲ್ ನಾನು ಇಂತಹಾ ಅಭಿಯಾನದ ಕುರಿತು ಏನನ್ನೂ ಹೇಳಲಾರೆ, ಆದರೆ ಮಂಡ್ಯ ಜನರು ನನ್ನ ಬೆಂಬಲಕ್ಕಿದ್ದಾರೆ ಎಂದು ಪ್ರತಿಕ್ರಯಿಸಿದ್ದಾರೆ.

ಇದರ ನಡುವೆಯೇ ನಿಖಿಲ್ ಸ್ಪರ್ಧೆ ಕುರಿತು ಜೆಡಿಎಸ್ ಪಕ್ಷದ ನಾಯಕರ ನಡುವೆ ಉಂಟಾಗಬಹುದಾದ ಭಿನ್ನಮತ ಶಮನಕ್ಕೆ ಇಂದು ರಾತ್ರಿ ಮುಖ್ಯಮಂತ್ರಿಗಳು ತಮ್ಮ ಪಕ್ಷದ ನಾಯಕರಿಗೆ ಡಿನ್ನರ್ ಪಾರ್ಟಿ (ಭೋಜನಕೂಟ) ಆಯೋಜನೆ ಮಾಡಿದ್ದಾರೆ.

Comments are closed.