ಕರ್ನಾಟಕ

ಮುಖ್ಯಮಂತ್ರಿಯಿಂದ ರಾಜ್ಯದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ತಲುಪಿಲ್ಲ: ಮೋದಿ

Pinterest LinkedIn Tumblr


ಕಲಬುರಗಿ: ದೇಶದ ಹಲವು ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲ ದೊರೆತಿದ್ದರೆ, ರಾಜ್ಯದ ಅರ್ಹ ಫಲಾನುಭವಿ ರೈತರ ಪಟ್ಟಿ ಕೇಂದ್ರ ಸರ್ಕಾರಕ್ಕೆ ಇನ್ನೂ ಸಿಕ್ಕಿಲ್ಲ. ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಲೋಕಾರ್ಪಣೆಗೊಳಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ತಮ್ಮ ಸರ್ಕಾರ ಕೃಷಿ, ಕಾರ್ಮಿಕ, ಆರೋಗ್ಯ ಕ್ಷೇತ್ರಗಳಿಗೆ ನೀಡಿರುವ ಯೋಜನೆ, ಕೊಡುಗೆಗಳನ್ನು ಜನತೆಗೆ ವಿವರಿಸಿದ್ದಾರೆ. ಜೊತೆ ಜೊತೆಗೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ.
“ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡಬೇಕಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ರೈತರ ಪಟ್ಟಿ ಇನ್ನೂ ಸಿಕ್ಕಿಲ್ಲ. ಹಲವು ರಾಜ್ಯಗಳ ರೈತರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಯ ಹಣ ತಲುಪಿದೆ. ಆದರೆ ರಾಜ್ಯದ ರೈತರಿಗೆ ಇನ್ನೂ ಸಿಕ್ಕಿಲ್ಲ. ಇದಕ್ಕೆಲ್ಲಾ ಕಾರಣ ರಾಜ್ಯದಲ್ಲಿರುವ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಹಾಗೂ ಅಧಿಕಾರ ದಾಹ ಹೊಂದಿರುವ ಕಾಂಗ್ರೆಸ್” ಎಂದು ಮೋದಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಕೇಂದ್ರ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ಹಾಕಲಿದೆ. ಅರ್ಹಫಲಾನುಭವಿಗಳನ್ನು ಗುರುತಿಸುವುದು ಮಾತ್ರ ರಾಜ್ಯ ಸರ್ಕಾರದ ಕೆಲಸ. ಕೆಂದ್ರ ಸರ್ಕಾರವೇ ಹಣ ನೀಡಿದರೂ ಅದನ್ನು ಫಲಾನುಭವಿಗಳಿಗೆ ತಲುಪಿಸಲು ನಿಮಗೇಕೆ ಇಷ್ಟು ಹೊಟ್ಟೆ ಉರಿ” ಎಂದು ಮೋದಿ ಸಮ್ಮಿಶ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನಮ್ಮ ಸರ್ಕಾರದ ಯೋಜನೆಗೆಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಎಲ್ಲವೂ ಅರ್ಹಫಲಾನುಭವಿಗಳ ಖಾತೆಗೇ ನೇರವಾಗಿ ಜಮಾವಣೆಯಾಗುತ್ತದೆ. ಕಾಂಗ್ರೆಸ್ ಹಾಗೂ ಮಹಾಘಟಬಂಧನದಲ್ಲಿರುವವರ ಚಿಂತೆಯೂ ಇದೆ ಆಗಿದೆ. ಎಲ್ಲವೂ ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳನ್ನು ತಲುಪಿದರೆ 5 ರೂಪಾಯಿಯನ್ನೂ ಎಗರಿಸಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ ಎಂಬುದೇ ಇವರ ಚಿಂತೆ” ಎಂದು ಮೋದಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಕರ್ನಾಟಕದ ರೈತ ವಿರೋಧಿಗಳು ಸಮ್ಮಿಶ್ರ ಸರ್ಕಾರದ ರೂಪದಲ್ಲಿ ಕುಳಿತಿದ್ದಾರೆ. ಅಧಿಕಾರದ ದಾಹ ಇರುವ ಕಾಂಗ್ರೆಸ್ ಹಾಗೂ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಿಂದಾಗಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಸಾಲ ಮನ್ನ ಹೆಸರಿನಲ್ಲಿ ಸುಳ್ಳು ಭರವಸೆ ನೀಡಿ ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ. ಜನತೆ ಕಣ್ಣಿಗೆ ಮಣ್ಣೆರಚಿದ್ದಾರೆ. ಅವರು ಬೇರೆಯವರು ಅಭಿವೃದ್ಧಿ ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಸಣ್ಣ ತಪ್ಪಿನಿಂದಾಗಿ ಅಭಿವೃದ್ಧಿ ಸ್ಥಗಿತಗೊಂಡಿದೆ. ದೇಶಕ್ಕೂ ಇದೇ ಸ್ಥಿತಿ ಬರಬೇಕಾ? ಎಂದು ಮೋದಿ ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ಪಾರದರ್ಶಕತೆಯಿಂದ ಭ್ರಷ್ಟಾಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದೇ ವಿಪಕ್ಷಗಳ ಆಕ್ರೋಶಕ್ಕೆ ಕಾರಣ. ಕಳ್ಳರ ಅಂಗಡಿ ಬಂದ್ ಆಗಿದೆ. ಅವರು ನನ್ನನ್ನು ವಿರೋಧಿಸಲು ಇರುವುದೂ ಇದೇ ಕಾರಣಕ್ಕೆ, ನನಗೆ ದೇಶದ ಜನತೆಯ ಬೆಂಬಲವಿದೆ. ನಾನು ಯಾರಿಗೂ ಹೆದರಬೇಕಿಲ್ಲ, ಇದೆಲ್ಲವೂ ನನ್ನ ಸಾಮರ್ಥ್ಯ ಅಲ್ಲ ದೇಶದ ಜನತೆಯ ಸಾಮರ್ಥ್ಯ ಎಂದು ಪ್ರಧಾನಿ ಹೇಳಿದ್ದಾರೆ.

Comments are closed.