ಕರ್ನಾಟಕ

ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಮತ್ತೊಬ್ಬರಿಲ್ಲ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಹೆಚ್ಚು ಸುಳ್ಳು ಹೇಳುತ್ತಿದ್ದಾರೆ. ಇಷ್ಟೊಂದು ಹಸಿ ಸುಳ್ಳು ಹೇಳುವ ಪ್ರಧಾನಿ ದೇಶದಲ್ಲಿ ಮತ್ತೊಬ್ಬರು ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಹೇಳಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ರಾಜ್ಯದ ಬಗ್ಗೆ ಭಯ ಇದೆ. ಅದಕ್ಕಾಗಿ ಹೀಗೆಲ್ಲಾ ಟೀಕೆ ಮಾಡಿದ್ದಾರೆ. ತಾವು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಆಗಿದ್ದರೂ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ತಾವು ಮಾಡಿರುವ ಸಾಧನೆ ಬಗ್ಗೆ ಅವರಿಂದ ಪ್ರಮಾಣ ಪತ್ರ ಪಡೆಯುವ ಅಗತ್ಯ ಇಲ್ಲ ಎಂದರು.
ಪ್ರಧಾನಿ ಅವರಿಗಿಂತಲೂ ದೊಡ್ಡಮಟ್ಟದಲ್ಲಿ ನಾಡಿನ ರಕ್ಷಣೆ ಮಾಡುವಲ್ಲಿ ನಾವು ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ. ದೇಶದ ಪ್ರಧಾನಿಯಾಗಿದ್ದರೂ ಅವರಿಗೆ ರಾಜ್ಯದ ಬಗ್ಗೆ ಮಾಹಿತಿ ಕೊರತೆ ಇದೆ. ರೈತರ ಸಾಲಮನ್ನಾ ವಿಚಾರದಲ್ಲಿ ಪ್ರಧಾನಿ ಅವರು ಹುಡುಗಾಟದ ಮಾತುಗಳನ್ನು ಆಡಬಾರದು ಎಂದು ಎಚ್ಚರಿಕೆ ನೀಡಿದರು.
ಸಹಕಾರಿ ವಲಯದ ಬ್ಯಾಂಕ್ ಗಳ 7 ಲಕ್ಷ ರೈತರಿಗೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ 6.40 ಲಕ್ಷ ರೈತರ ಸಾಲದ ಹಣ ಬಿಡುಗಡೆ ಮಾಡಿದ್ದೇವೆ. ಸಾಲಮನ್ನಾಗೆ 11,170 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ರಾಜ್ಯದ 15 ಲಕ್ಷ ರೈತರಿಗೆ ಸಾಲಮನ್ನಾ ಹಣ ದೊರಕಿದೆ. ಪ್ರಧಾನಿ ಅವರಿಗೆ ಮಾಹಿತಿ ಕೊರತೆ ಇದ್ದರೆ ಅಧಿಕಾರಿಗಳನ್ನು ಕಳುಹಿಸಿ ಕೊಟ್ಟು ಮಾಹಿತಿಯನ್ನು ಅವರಿಗೆ ಒದಗಿಸಲು ತಾವು ಸಿದ್ದ ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದ್ದಾರೆ.
ದೇಶದ ಪ್ರಧಾನಿಯಾಗಿ ಮೋದಿ ಅತ್ಯಂತ ಹೆಚ್ಚು ಸುಳ್ಳು ಹೇಳುತ್ತಿದ್ದಾರೆ. ಇಷ್ಟೊಂದು ಹಸಿ ಸುಳ್ಳು ಹೇಳುವ ಪ್ರಧಾನಿ ದೇಶದಲ್ಲಿ ಮತ್ತೊಬ್ಬರು ಸಿಗುವುದಿಲ್ಲ. ಸುಳ್ಳು ಹೇಳುವವರಿಂದ ತಾವು ಬುದ್ದಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಇದೇ ವೇಳೆ, ರೈತರ ಖಾತೆಗೆ 2 ಸಾವಿರ ರೂ ಹಣ ಜಮಾ ಮಾಡುವುದಕ್ಕಾಗಿ ಮುಖ್ಯಮಂತ್ರಿ ಅಂಕಿ-ಅಂಶ ನೀಡುತ್ತಿಲ್ಲ ಎಂಬ ಪ್ರಧಾನಿ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ತಮ್ಮ ಬಳಿ ರೈತರ ಸಂಪೂರ್ಣ ಮಾಹಿತಿ ಇದೆ. ಸರ್ಕಾರ ಮಾಹಿತಿ ನೀಡಿದರೂ ಹಣ ಕೊಡಲಿಕ್ಕೆ ಅವರಿಗೆ ಸಾಧ್ಯವಿಲ್ಲ. ಯಾಕೆಂದರೆ ಕೇಂದ್ರ ಸರ್ಕಾರದ ಬಳಿ ಹಣ ಇಲ್ಲ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಹೊಸ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಉದ್ಯೋಗ ಖಾತರಿ ಯೋಜನೆಯ ಹಣ 2100 ಕೋಟಿ ರೂ ಮೊತ್ತದ ಬಾಕಿಯನ್ನು ರಾಜ್ಯಕ್ಕೆ ಪ್ರಧಾನಿ ನೀಡಿಲ್ಲ. ಕಾರ್ಮಿಕರ ಕೂಲಿ ಹಣವನ್ನು ರಾಜ್ಯ ಸರ್ಕಾರದಿಂದಲೇ ಕೊಡುತ್ತಿದ್ದೇವೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಆದರೆ ಕರ್ನಾಟಕ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

Comments are closed.