ಕರ್ನಾಟಕ

ಲೋಕಸಭಾ ಚುನಾವಣೆ ನಂತರ ಬಸ್ ಪ್ರಯಾಣಿಕರಿಗೆ ಶಾಕ್!

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಲೋಕಸಭೆ ಚುನಾವಣೆ ಬಳಿಕ ಬಸ್ ಟಿಕೆಟ್ ದರ ಹೆಚ್ಚಳ ಕುರಿತು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಚುನಾವಣೆ ಮುಗಿಯುವವರೆಗೂ ಪ್ರಯಾಣ ದರ ಏರಿಕೆ ಬೇಡ ಎಂದು ಸಿಎಂ ಹೇಳಿದ್ದಾರೆ ಎಂದರು. ಈ ಮೂಲಕ ಲೋಕಸಭೆ ಚುನಾವಣೆ ಬಳಿಕ ಬಸ್ ಪ್ರಯಾಣ ದರ ಹೆಚ್ಚಳ ಖಚಿತ ಎಂಬ ಸುಳಿವನ್ನು ನೀಡಿದರು.

ಇದೇ ವೇಳೆ ಬಾಡಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ ಪ್ರಸ್ತಾಪ ಕೈ ಬಿಟ್ಟಿರುವುದಾಗಿ ಸ್ಪಷ್ಟನೆ ನೀಡಿದರು. ಎಲೆಕ್ಟ್ರಿಕ್ ಬಸ್ ಖರೀದಿಗೆ ಸರ್ಕಾರ ಅನುಮತಿಯೇ ಕೊಟ್ಟಿರಲಿಲ್ಲ. ಹಿಂದಿನ ಸರ್ಕಾರದ ಅಧಿಕಾರಿಗಳು ಎಲೆಕ್ಟ್ರಿಕ್ ಬಸ್ ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಬಾಡಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಗೆ ನನ್ನ ವಿರೋಧ ಇತ್ತು. ನಾನು ಸ್ವತಃ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ನಾವೇ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಿದರೆ ನಮಗೆ ಹೆಚ್ಚು ಅನುಕೂಲ ಆಗುತ್ತೆ ಈ ಪ್ರಸ್ತಾಪ ಕೈ ಬಿಟ್ಟಿದ್ದೇವೆ. ನಾವೇ 80 ಬಸ್ ಖರೀದಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇಲಾಖೆಯಲ್ಲಿ ಇರುವ ಹಳೆ ಬಸ್ ಬದಲಾವಣೆ ಮಾಡಲು ಹೊಸ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. 3 ಸಾವಿರ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಖರೀದಿ ಮಾಡುತ್ತಿದ್ದೇವೆ. 7 ಲಕ್ಷ ಕಿಲೋಮೀಟರ್ ಓಡಿರುವ ಬಸ್ ಗಳನ್ನ ಬದಲಾವಣೆ ಮಾಡಲಾಗುತ್ತೆ. ಹಳೆ ಬಸ್ ಗಳ ಬದಲಾವಣೆ ಮಾಡಿ ಮತ್ತಷ್ಟು ಸುಸ್ಥಿತಿಯಲ್ಲಿ ಬಸ್ ಸೇವೆ ಸಾರ್ವಜನಿಕರಿಗೆ ಒದಗಿಸುತ್ತೇವೆ ಎಂದರು. ಅಲ್ಲದೇ ಆರ್ ಟಿಓ ಹುದ್ದೆಗಳು ಖಾಲಿ ಇದ್ದು, ಹೊಸ ನೇಮಕಾತಿಗೆ ಕೇಂದ್ರ ಸರ್ಕಾರದ ಕಾಯ್ದೆ ಅಡ್ಡಿ ಇದೆ. ಚುನಾವಣೆ ಆದ ಬಳಿಕ ಕಾಯ್ದೆಗೆ ಒಂದಿಷ್ಟು ಬದಲಾವಣೆ ತಂದು ನಮ್ಮ ಇಲಾಖೆಯೆ ಆರ್ ಟಿಓ ನೇಮಕಾತಿ ಮಾಡಿಕೊಳ್ಳುತ್ತೆ ಎಂದು ಸ್ಪಷ್ಟನೆ ನೀಡಿದರು.

Comments are closed.