ಕರ್ನಾಟಕ

ರಾಜಕಾರಣಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಬಯಸಿದ್ದ ಸುಮಲತಾ ಒಂಟಿ?

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯ ಕ್ಷೇತ್ರ ಮೈತ್ರಿಗೆ ಕಬ್ಬಿಣದ ಕಡಲೆಯಾಗಿತ್ತು. ಇಂದು ಕಾಂಗ್ರೆಸ್ ಶಾಸಕಾಂಗದ ನಾಯಕ ಸಿದ್ದರಾಮಯ್ಯನವರು, ಮಂಡ್ಯ ಜೆಡಿಎಸ್ ಗೆ ಬಿಟ್ಟುಕೊಡಲಾಗಿದ್ದು, ಸುಮಲತಾರಿಗೆ ಟಿಕೆಟ್ ನೀಡಲ್ಲ ಎಂದು ಹೇಳಿದರು. ಇತ್ತ ರಾಜಕಾರಣಕ್ಕೆ ಗ್ರ್ಯಾಂಡ್ ಎಂಟ್ರಿ ನಿರೀಕ್ಷೆಯಲ್ಲಿದ್ದ ಸುಮಲತಾ ಅಂಬರೀಶ್ ಒಂಟಿಯಾದ್ರಾ ಎಂಬ ಮಾತುಗಳು ಕೈ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ನಟ, ರಾಜಕಾರಣಿ ಅಂಬರೀಶ್ ನಿಧನದ ಬಳಿಕ ಪತ್ನಿ ಸುಮಲತಾರಿಗೆ ಕಾಂಗ್ರೆಸ್ ಕೆಲ ಕಾರ್ಯಕರ್ತರು ಸೇರಿದಂತೆ ಅಂಬಿ ಅಭಿಮಾನಿಗಳು ರಾಜಕಾರಣಕ್ಕೆ ಬರಬೇಕೆಂದು ಮನವಿ ಮಾಡಿಕೊಂದ್ದರು. ಅಭಿಮಾನಿಗಳ ಮನವಿಯಂತೆ ರಾಜಕಾರಣಕ್ಕೆ ಎಂಟ್ರಿ ನೀಡಿದ್ದ ಸುಮಲತಾ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದರು. ಇದೀಗ ಅದೇ ಕಾಂಗ್ರೆಸ್ ನಾಯಕರು ಟಿಕೆಟ್ ನೀಡಲ್ಲ ಎಂದು ಹೇಳಿದ್ದು, ಈ ಹಿಂದೆ ಬೆಂಬಲ ನೀಡಿದ್ದ ಕೆಲ ಕಾಂಗ್ರೆಸ್ ನಾಯಕರು ಸುಮಲತಾರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಬುದ್ಧಿವಾದ:
ಮಾಜಿ ಸಚಿವರಾದ ನರೇಂದ್ರಸ್ವಾಮಿ, ಚಲುವರಾಯಸ್ವಾಮಿ ಇಬ್ಬರು ಪರೋಕ್ಷವಾಗಿ ಸುಮಲತಾರಿಗೆ ಬೆಂಬಲ ನೀಡಿದ್ದರು. ಕೆಲ ಕಾರ್ಯಕರ್ತರು ಸುಮಲತಾ ಯಾವುದೇ ಪಕ್ಷ ಅಥವಾ ಪಕ್ಷೇತರರಾಗಿ ನಿಂತ್ರೆ ಪ್ರಚಾರಮಾಡಲು ಸಿದ್ಧ ಎಂದಿದ್ದರು. ಇಬ್ಬರು ಮಾಜಿ ಸಚಿವರನ್ನು ಕರೆಸಿಕೊಂಡು ಮಾತನಾಡಿರುವ ಸಿದ್ದರಾಮಯ್ಯ, ಏ….ಹೇಳ್ತೀನಿ ಕೇಳ್ರಿ….ಯಾವುದೇ ಕಾರಣಕ್ಕೂ ಸುಮಲತಾ ಪರ ನಿಲ್ಲಬೇಡಿ. ನಿಮ್ಮ ಪೊಲಿಟಿಕಲ್ ಕೆರಿಯರ್ ಹಾಳು ಮಾಡಿಕೊಳ್ಳಬೇಡಿ. ಮಂಡ್ಯ ಕ್ಷೇತ್ರ ಜೆಡಿಎಸ್ ಗೆ ಅಂತಾ ಹೈಕಮಾಂಡ್ ಈಗಾಗಲೇ ಹೇಳಿದೆ. ನೀವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸುಮಲತಾ ಪರ ಕೆಲಸ ಮಾಡಬೇಡಿ.
ಜೆಡಿಎಸ್ ಮೇಲಿನ ಕೋಪಕ್ಕೆ ನಿಮ್ಮ ರಾಜಕೀಯ ಬದುಕು ಹಾಳು ಮಾಡಿಕೊಳ್ಳಬೇಡಿ. ಹೈಕಮಾಂಡ್ ಏನಾದರೂ ಕ್ರಮ ಕೈಗೊಂಡರೆ ನಾನು ಜವಾಬ್ದಾರನಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಟಿಕೆಟ್ ತಪ್ಪಿದ್ಯಾಕೆ?:
ವಿಧಾನಸಭಾ ಚುನಾವಣೆಯಲ್ಲಿ ಅಂಬರಿಶ್ ಟಿಕೆಟ್ ಬೇಡ ಅಂದಿದ್ದರು. ಚುನಾವಣೆ ಸಮಯದಲ್ಲಿ ಅಂಬರೀಶ್ ಹಣ ಖರ್ಚು ಮಾಡುತ್ತಿರಲಿಲ್ಲ. ಇನ್ನು ಸುಮಲತಾ ಎಲ್ಲಿಂದ ಹಣ ಖರ್ಚು ಮಾಡುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿಯೇ ಕೇಳಿ ಬಂದಿವೆ.

ಅಂಬರೀಶ್ ನಿಮಗೆ ಹೇಗೆ ಸ್ನೇಹಿತರೋ, ನನಗೂ ಒಳ್ಳೆಯ ಹಿತೈಷಿಯಾಗಿದ್ದರು. ಸ್ನೇಹಿತನ ಪತ್ನಿ ಎಂದು ಚುನಾವಣೆ ಸಮಯದಲ್ಲಿ ಸುಮಲತಾರಿಗೆ ಹಣಕಾಸಿನ ನೆರವು ನೀಡಬೇಡಿ. ಒಂದು ವೇಳೆ ನಿಮ್ಮ `ಸಹಕಾರ’ದ ವಿಚಾರ ಗೊತ್ತಾದರೆ ಹೈಕಮಾಂಡ್ ಕ್ರಮ ಕೈಗೊಳ್ಳಬಹುದು. ಹಾಗಾಗಿ ಯಾವುದೇ ಹೇಳಿಕೆಗಳನ್ನು ನೀಡದೇ ಚುನಾವಣೆ ಮುಗಿಯವರೆಗೂ ತಟಸ್ಥರಾಗಿರಿ ಎಂದು ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಕೆ.ಜೆ. ಜಾರ್ಜ್ ಅವರಿಗೆ ಸಿದ್ದರಾಮಯ್ಯನವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಏಕಾಂಗಿಯಾದ್ರಾ ಸುಮಲತಾ?
ಸಿದ್ದರಾಮಯ್ಯರ ಸೂಚನೆಯಂತೆ ಕೈ ನಾಯಕರು ಯಾವುದೇ ಹೇಳಿಕೆ ನೀಡದೇ ಸುಮಲತಾರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರಂತೆ. ರಾಜಕಾರಣಕ್ಕೆ ಗ್ರ್ಯಾಂಡ್ ಎಂಟ್ರಿಯ ನಿರೀಕ್ಷೆಯಲ್ಲಿದ್ದ ಸುಮಲತಾ ಏಕಾಂಗಿಯಾದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇತ್ತ ಮಾಜಿ ಶಾಸಕರಾದ ನರೇಂದ್ರಸ್ವಾಮಿ ಮತ್ತು ಚಲುವರಾಯಸ್ವಾಮಿಯವರ ನಡೆಯ ಮೇಲೆ ನಿಗಾ ಇಡಿ ಎಂದು ಸಚಿವ ಜಮೀರ್ ಅಹ್ಮದ್‍ಗೆ ಸಿದ್ದರಾಮಯ್ಯನವರು ಸೂಚಿಸಿದ್ದಾರಂತೆ.

Comments are closed.