ನವದೆಹಲಿ: ಬಾಲಾಕೋಟ್ ಮೇಲೆ ಯಶಸ್ವಿಯಾಗಿ ವೈಮಾನಿಕ ದಾಳಿ ನಡೆಸಿದ ನಂತರ ಭಾರತ ಹೊಸ ಆತ್ಮವಿಶ್ವಾಸದಿಂದಿದೆ. ಪುಲ್ವಾಮ ಉಗ್ರ ದಾಳಿ ಘಟನೆಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಬಾಲಾಕೋಟ್ನಲ್ಲಿ ಜೈಷ್ ಶಿಬಿರದ ಮೇಲೆ ದಾಳಿ ನಡೆಸಿತ್ತು. ಇದೀಗ ಪಾಕಿಸ್ತಾನದ ಉಗ್ರರು ಭಾರತದಲ್ಲಿ ಮತ್ತೊಮ್ಮೆ ದಾಳಿ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ ಭಾರತ ಯಾವ ಹಂತಕ್ಕೆ ಬೇಕಾದರೂ ಹೋಗಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ನಿಶ್ಚಯಿಸಿದೆ. ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ಭಾರತದ ಬಳಿ ಈಗ ಎಲ್ಲಾ ಆಯ್ಕೆಗಳು ಲಭ್ಯವಿವೆ. ಯಾವುದನ್ನೂ ಬೇಕಾದರೂ ಆಯ್ಕೆ ಮಾಡಿಕೊಂಡು ಕಾರ್ಯಗತಗೊಳಿಸಲು ಭಾರತ ಸಮರ್ಥವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆಯು ಪಶ್ಚಿಮ ವಲಯದಲ್ಲಿರುವ ತನ್ನೆಲ್ಲಾ ನೆಲೆಗಳಿಗೆ ಎಂಥದ್ದೇ ಸ್ಥಿತಿಗೂ ಸಜ್ಜಾಗಿರುವಂತೆ ಸೂಚಿಸಿದೆ ಎನ್ನಲಾಗಿದೆ. ರಜೆಯ ಮೇಲೆ ತೆರಳಿರುವ ಎಲ್ಲಾ ಯೋಧರನ್ನೂ ತುರ್ತಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ವಾಪಸ್ ಕರೆಸಿಕೊಳ್ಳಲಾಗಿದೆ.
ಇದೇ ವೇಳೆ, ಬಾಲಾಕೋಟ್ ದಾಳಿ ನಂತರ ಭಾರತ ಮತ್ತು ಪಾಕ್ ಮಧ್ಯೆ ನಡೆದ ವೈಮಾನಿಕ ಸಂಘರ್ಷದಲ್ಲಿ ಪಾಕಿಸ್ತಾನವು ಅಮೆರಿಕದ ಎಫ್-16 ಯುದ್ಧವಿಮಾನದ ಬಳಕೆ ಮಾಡಿತ್ತು. ಆದರೆ, ತಾನು ಬಳಸಿದ್ದು ಎಫ್-16 ಅಲ್ಲ, ಚೀನೀ ನಿರ್ಮಿತ ಜೆಎಫ್-17 ಯುದ್ಧ ವಿಮಾನ ಎಂಬುದು ಪಾಕಿಸ್ತಾನದ ಸ್ಪಷ್ಟನೆ. ಆದರೆ, ಅಮೆರಿಕದ ಎಫ್-16 ಯುದ್ಧ ವಿಮಾನ ಬಳಕೆ ಮಾಡಿರುವುದಕ್ಕೆ ಸಾಕ್ಷ್ಯವನ್ನು ಭಾರತ ಈಗಾಗಲೇ ಅಮೆರಿಕಕ್ಕೆ ನೀಡಿದೆ. ಅಮೆರಿಕ ಇದನ್ನು ಗಂಭಿರವಾಗಿ ಪರಿಗಣಿಸಿ ತನಿಖೆ ನಡೆಸುವ ವಿಶ್ವಾಸ ಭಾರತಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಬಾಲಾಕೋಟ್ ಮೇಲೆ ತಾನು ನಡೆಸಿದ ವೈಮಾನಿಕ ದಾಳಿಯು ಉಗ್ರರ ಮೇಲಿನ ದಾಳಿಯೇ ಹೊರತು ಪಾಕಿಸ್ತಾನದ ಮೇಲಲ್ಲ ಎಂದು ಭಾರತವು ಪಾಕಿಸ್ತಾನಕ್ಕೆ ಹಾಗೂ ವಿಶ್ವ ಸಮುದಾಯಕ್ಕೆ ತಿಳಿಸಲು ಯತ್ನಿಸುತ್ತಿದೆ. ಭಾರತದ ಮೇಲೆ ದಾಳಿಯ ಸಂಚು ರೂಪಿಸುತ್ತಿರುವ ಭಯೋತ್ಪಾದಕರು ಪಾಕಿಸ್ತಾನದಲ್ಲೇ ಅಡಗಿಕೊಂಡಿದ್ದಾರೆ. ಪುಲ್ವಾಮ ದಾಳಿ ನಡೆಸಿದ್ದು ತಾನೇ ಎಂದು ಹೇಳಿಕೊಂಡಿರುವ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ತನ್ನ ದೇಶದಲ್ಲೇ ಇದ್ದಾರೆ ಎಂದು ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿದೆ.
ಪಾಕಿಸ್ತಾನವು ಈ ಭಯೋತ್ಪಾದಕರಿಗೆ ಅಂಕೆ ಹಾಕುತ್ತಿಲ್ಲ ಎಂಬುದು ಭಾರತದ ಆರೋಪ. ಜೈಷ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ನಿಷೇಧಿಸುವಂತೆ ವಿಶ್ವಸಂಸ್ಥೆಯ ಮೇಲೆ ಭಾರತ ಸತತವಾಗಿ ಒತ್ತಡ ಹೇರುತ್ತಿದೆ. ಒಂದು ವೇಳೆ ಈತ ನಿಷೇಧಿತಗೊಂಡರೆ ಪಾಕಿಸ್ತಾನಕ್ಕೆ ಮುಜುಗರ ಉಂಟಾಗಬಹುದು.
Comments are closed.