ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾವಹಿಸಲು ರಾಜ್ಯದ ಐದು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಭಯೋತ್ಪಾದನೆ ನಿಗ್ರಹ ಪಡೆ ರಚಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸದ್ಯದಲ್ಲೇ ತಲಾ ಒಂದೊಂದು ಭಯೋತ್ಪಾದನೆ ನಿಗ್ರಹ ದಳವನ್ನು ರಚಿಸಲಾಗುತ್ತಿದೆ.
ಶೀಘ್ರದಲ್ಲಿಯೇ ಎಟಿಎಸ್ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕಿ ನೀಲ್ ಮಣಿ ಎನ್ ರಾಜು, ಪೊಲೀಸ್ ಕಮೀಷನರೇಟ್ ಗಳಿಗೆ ಆದೇಶ ಹೊರಡಿಸಿದ್ದಾರೆ.
ಎಲ್ಲಾ ತಂಡಕ್ಕೂ ಅಗತ್ಯ ಸಂಖ್ಯೆಯ ಸಿಬ್ಬಂದಿ ಒದಗಿಸುವಂತೆ ಹಾಗೂ ಸಹಾಯಕ ಪೊಲೀಸ್ ಕಮೀಷನರ್ ರಾಂಕಿಗಿಂತ ಕಡಿಮೆ ಇಲ್ಲದ ಅಧಿಕಾರಿಗಳನ್ನು ಇದರ ಮುಖ್ಯಸ್ಥರನ್ನಾಗಿ ನೇಮಿಸುವಂತೆ ಅವರು ನಿರ್ದೇಶಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕರ ಆದೇಶದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದು, ಈ ಮಾಸಾಂತ್ಯದೊಳಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.
ಗುಪ್ತಚರ ಮಾಹಿತಿ ಹಾಗೂ ಕಾರ್ಯಾಚರಣೆ ಎಟಿಎಸ್ ನ ಪ್ರಮುಖ ಅಂಶಗಳಾಗಿವೆ. ಇವುಗಳು ರಾಜ್ಯ ಗುಪ್ತಚರ ಮತ್ತು ಆಂತರಿಕ ಭದ್ರತಾ ವಿಭಾಗದೊಂದಿಗೆ ನಿತ್ಯ ಮಾಹಿತಿ ವಿನಿಮಯ ಮಾಡಿಕೊಳ್ಳಲಿವೆ.
ಬೆಂಗಳೂರಿನಲ್ಲಿ ಸಿಸಿಬಿಯ ಅಧೀನದಲ್ಲಿ ಎಟಿಎಸ್ ಗಳು ಕಾರ್ಯಾಚರಣೆ ನಡೆಸಲಿವೆ. ಸಿಸಿಬಿಯ ಎಸಿಪಿಯೊಬ್ಬರ ಅಡಿಯಲ್ಲಿ ಎಟಿಎಸ್ ಕಾರ್ಯಾಚರಣೆ ನಡೆಸುವಂತೆ ಚರ್ಚಿಸಲಾಗಿದೆ.
ಒಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ನೊಳ್ಳಗೊಂಡ 8ರಿಂದ 10 ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.
Comments are closed.