ರಾಷ್ಟ್ರೀಯ

ಬಾಲಾಕೋಟ್​ ಏರ್​ ಸ್ಟ್ರೈಕ್​ನಲ್ಲಿ ಸತ್ತವರ ಸಂಖ್ಯೆಯನ್ನು ನಾವು ಲೆಕ್ಕ ಹಾಕುವುದಿಲ್ಲ: ಏರ್​ಫೋರ್ಸ್​ ಮುಖ್ಯಸ್ಥ ಧನೋವಾ

Pinterest LinkedIn Tumblr

ನವದೆಹಲಿ: ಪಾಕಿಸ್ತಾನ ಮತ್ತು ಭಾರತ ನಡುವಿನ ಉಂಟಾಗಿದ್ದ ಬಿಗುವಿನ ವಾತಾವರಣ ಮತ್ತು ನಂತರದಲ್ಲಿ ನಡೆದ ರಾಜಕೀಯ ಮೇಲಾಟಗಳ ನಡುವೆಯೇ ಭಾರತ ವಾಯುಸೇನೆ ಮುಖ್ಯಸ್ಥ ಬಿಎಸ್​ ಧನೋವಾ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ಏರ್​ ಚೀಫ್​ ಮಾರ್ಷಲ್​ ಧನೋವಾ ಅವರು, ಬಾಲಾಕೋಟ್​ ಏರ್​ ಸ್ಟ್ರೈಕ್​ನಲ್ಲಿ ಎಷ್ಟು ಮಂದಿ ಸತ್ತಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. “ಸತ್ತವರ ಸಂಖ್ಯೆಯನ್ನು ನಾವು ಲೆಕ್ಕ ಹಾಕುವುದಿಲ್ಲ,” ಎಂದು ಧನೋವಾ ಹೇಳಿದ್ದಾರೆ.

ತಮಿಳುನಾಡಿನ ಕೊಯಿಂಬತ್ತೂರಿನಲ್ಲಿ ಧನೋವಾ ಮಾತನಾಡಿದ್ದಾರೆ. ಜೈಷ್​ – ಎ -ಮೊಹಮ್ಮದ್​ ಸಂಘಟನೆಯ ಕ್ಯಾಂಪ್​ ಎನ್ನಲಾದ ಬಾಲಾಕೋಟ್​ ಪ್ರದೇಶದ ಮೇಲೆ ಭಾರತ ವಾಯುಸೇನೆ ಫೆಬ್ರವರಿ 26ನೇ ತಾರೀಖು ಮುಂಜಾನೆ ದಾಳಿ ಮಾಡಿತ್ತು. ದಾಳಿಯಲ್ಲಿ ಉಗ್ರರು ಮೃತಪಟ್ಟಿದ್ದಾರೆ ಎಂದು ಭಾರತ ಹೇಳಿಕೊಂಡಿದ್ದರೆ, ಯಾರಿಗೂ ಏನೂ ಆಗಿಲ್ಲ ಎಂದು ಪಾಕಿಸ್ತಾನ ಸಮಜಾಯಿಷಿ ನೀಡಿತ್ತು. ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವ ಸಾಧ್ಯತೆಯನ್ನು ಧನೋವಾ ಪತ್ರಿಕಾಗೋಷ್ಠಿ ಸೃಷ್ಟಿಸಿತ್ತಾದರೂ ತಾರ್ಕಿಕ ಅಂತ್ಯ ನೀಡಿಲ್ಲ.

ಬಾಲಾಕೋಟ್​ನಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿಯನ್ನು ಸರ್ಕಾರ ನೀಡಲಿದೆ ಎಂದು ಧನೋವಾ ಹೇಳಿದ್ದಾರೆ.

“ಬಾಲಾಕೋಟ್​ ವೈಮಾನಿಕ ದಾಳಿಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸ್ಥಿತಿಯಲ್ಲಿ ವಾಯುಸೇನೆ ಇಲ್ಲ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ. ನಾವು ಮೃತದೇಹಗಳನ್ನು ಲೆಕ್ಕಹಾಕುವುದಿಲ್ಲ. ನಮ್ಮ ಟಾರ್ಗೆಟ್​ ಮುಟ್ಟಲು ನಮಗೆ ಸಾಧ್ಯವಾಯಿತಾ ಇಲ್ಲವಾ ಎಂಬುದಷ್ಟೇ ನಮಗೆ ಮುಖ್ಯ,” ಎಂದು ಧನೋವಾ ಹೇಳಿದ್ದಾರೆ.

ಫೆಬ್ರವರಿ 14ರಂದು ಜೈಷ್​ ಉಗ್ರ ಸಂಘಟನೆಯ ಸದಸ್ಯ ಆದಿಲ್​ ಅಹ್ಮದ್​ ದಾರ್​ ಎಂಬ ಯುವಕ ಪುಲ್ವಾಮದಲ್ಲಿ ಸಿಆರ್​ಪಿಎಫ್​ ವಾಹನಗಳ ಮೇಲೆ ಆತ್ಮಾಹುತಿ ದಾಳಿ ಮಾಡಿದ್ದ. ಇದರ ಪರಿಣಾಮದಿಂದ ಭಾರತದ 40 ಸಿಆರ್​ಪಿಎಫ್​ ಸೈನಿಕರು ಸಾವನ್ನಪ್ಪಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26ರಂದು ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ವೈಮಾನಿಕ ದಾಳಿ ಮಾಡಿತ್ತು. ಆದರೆ ದಾಳಿಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

Comments are closed.