ಕರ್ನಾಟಕ

ಮಂಡ್ಯ ಕ್ಷೇತ್ರಕ್ಕಾಗಿ ಪಟ್ಟು ಬಿಡದ ಸುಮಲತಾ

Pinterest LinkedIn Tumblr


ಮಂಡ್ಯ: ಲೋಕಸಭಾ ಚುನಾವಣಾ ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್​ ನಡುವೆ ರಾಜಕೀಯ ತಾರಕಕ್ಕೇರಿದೆ. ಸ್ವತಂತ್ರ ಅಭ್ಯರ್ಥಿಯಾದರೂ ಸರಿ ಮಂಡ್ಯದಿಂದಲೇ ಚುನಾವಣೆಗೆ ನಿಲ್ಲುತ್ತೇನೆ ಎಂದವರು ಸ್ಪಷ್ಟಪಡಿಸಿದ್ದಾರೆ. ಸುಮಲತಾ ಅವರ ದೃಢ ನಿರ್ಧಾರದಿಂದ ಕಂಗಾಲಾಗಿರುವ ಜೆಡಿಎಸ್​ ಈಗ ಕ್ಷೇತ್ರವನ್ನು ಬಿಟ್ಟುಕೊಡಲು ಸಜ್ಜಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆ ಕಾರಣ ಜಿ.ಟಿ ದೇವೇಗೌಡ ಹಾಗೂ ನಿಖಿಲ್​ ಕುಮಾರಸ್ವಾಮಿ ಅವರ ಮಾತುಗಳು.

ಅಭಿಮಾನಿಗಳ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ ಮಾಡಿದ ನಟಿ ಸುಮಲತಾ ಅಂಬರೀಷ್​ ಇದಕ್ಕಾಗಿ ಕಾಂಗ್ರೆಸ್​ ನಾಯಕರ ಸಲಹೆ ಪಡೆದಿದ್ದಾರೆ. ಎರಡು ಬಾರಿ ಕಾಂಗ್ರೆಸ್​ನಿಂದ ಅಂಬರೀಷ್​ ಸಚಿವರಾದ ಹಿನ್ನೆಲೆ ಕೈ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಆದರೆ, ಮೈತ್ರಿಗೆ ಕಟ್ಟುಬಿದ್ದ ನಾಯಕರು, “ಆ ಕ್ಷೇತ್ರವನ್ನು ಈಗಾಗಲೇ ಜೆಡಿಎಸ್​ಗೆ ಬಿಟ್ಟಕೊಡಬೇಕೆಂಬ ಮಾತಾಗಿದೆ. ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರವನ್ನಾದರೂ ಕೇಳಿ. ಬೇಕಾದಲ್ಲಿ ನೇರವಾಗಿ ದೊಡ್ಡ ಹುದ್ದೆಯನ್ನೇ ನೀಡುತ್ತೇವೆ. ಮಂಡ್ಯ ಕ್ಷೇತ್ರವನ್ನು ಬಿಟ್ಟು ಬಿಡಿ” ಎಂಬ ಸಲಹೆ ನೀಡಿದ್ದರು. ಇದರಿಂದಾಗಿ ಸುಮಲತಾ ಸಹ ಈಗ ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜಕೀಯಕ್ಕೆ ಬಂದು ಏನೋ ಸಾಧನೆ ಮಾಡುವ ದುರಾಸೆ ನನಗೆ ಇಲ್ಲ. ಜನರ ಒತ್ತಾಯದ ಮೇರೆಗೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿರುವುದು. ಮಂಡ್ಯ ಜನರು ತೋರಿದ ಪ್ರೀತಿ, ಕಾಳಜಿಗೆ ಅವರ ಋಣ ತೀರಿಸುವ ಇಚ್ಛೆಯಿಂದಾಗಿ ನಾನು ಸ್ಪರ್ಧಿಸುತ್ತಿದ್ದೇನೆ’ ಎಂದಿದ್ದಾರೆ ಸುಮಲತಾ.

ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ ಎನ್ನುವ ಮೂಲಕ ಚುನಾವಣೆಗೆ ನಿಂತರೆ ಮಂಡ್ಯದಿಂದಲೇ ಎಂದು ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಸುಮಲತಾ ಸೂಚನೆ ನೀಡಿದ್ದಾರೆ. ಅದಕ್ಕಾಗಿ ಈಗಾಗಲೇ ಮಂಡ್ಯ ಪ್ರವಾಸ ಮಾಡುತ್ತಾ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಹಿಂದೆ ಸರಿಯಿತಾ ಜೆಡಿಎಸ್​?

ಮಂಡ್ಯದಲ್ಲಿ ಸುಲಭವಾಗಿ ಗೆಲ್ಲುವ ಸಾಧ್ಯತೆ ಇರುವುದರಿಂದಾಗಿ ಈ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಬೇಕು ಎಂದು ಆರಂಭದಿಂದಲೂ ಜೆಡಿಎಸ್​ ಪಟ್ಟು ಹಿಡಿದಿದೆ. ಅಲ್ಲದೇ, ಉಪಚುನಾವಣೆಯಲ್ಲಿ ಕೂಡ ಈ ಕ್ಷೇತ್ರವನ್ನು ನಮಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್​ ಈಗ ಕೂಡ ಮೈತ್ರಿ ಧರ್ಮ ಪಾಲಿಸಬೇಕು. ನಮಗೆ ಬೆಂಬಲ ನೀಡಬೇಕು ಎಂದು ಕಾಂಗ್ರೆಸ್​ ನಾಯಕರನ್ನು ಇಕ್ಕಟಿಗೆ ಸಿಲುಕಿಸಿದೆ.

ಮಂಡ್ಯದ ಮೂಲಕ ನಿಖಿಲ್​ ಕುಮಾರಸ್ವಾಮಿ ಕಣಕ್ಕಿಳಿಸಿ, ಅವರ ರಾಜಕೀಯ ಪ್ರವೇಶ ಮಾಡಬೇಕು ಎಂದು ಕನಸು ಕಾಣುತ್ತಿದ್ದ ಜೆಡಿಎಸ್​ಗೆ ಈಗ ಕ್ಷೇತ್ರ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕಾಂಗ್ರೆಸ್​ ಬೆಂಬಲವಿಲ್ಲದೆಯೂ ಸುಮಲತಾ ಚುನಾವಣೆಯಲ್ಲಿ ನಿಂತು ಗೆಲ್ಲುವುದು ತೀರಾ ಕಷ್ಟವಲ್ಲ ಎನ್ನುವ ಸತ್ಯ ಅರಿತ ಜೆಡಿಎಸ್​ಗೆ ಈಗ ಸಂಕಷ್ಟ ಎದುರಾಗಿದೆ. ಸುಮಲತಾಗೆ ಇರುವ ಅನುಕಂಪದ ಅಲೆಯ ಮುಂದೆ ತಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾ ಎಂಬ ಪ್ರಶ್ನೆ ಮೂಡಿದೆ. ಮಂಡ್ಯದಲ್ಲಿ ಸ್ಪರ್ಧಿಸಲು ಜೆಡಿಎಸ್​ನ ಸ್ಥಳೀಯ ನಾಯಕರು ಕೂಡ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ನಿಖಿಲ್​ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರ ಬದಲಿಸುವ ತೀರ್ಮಾನ ಮಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.

ಮಂಡ್ಯ ಜೆಡಿಎಸ್​ಗೆ ಆದರೆ, ಮೈಸೂರನ್ನು ಕಾಂಗ್ರೆಸ್​ಗೆ ನೀಡಬೇಕು ಎಂದು ಮೈತ್ರಿ ನಾಯಕರು ಪಟ್ಟು ಹಿಡಿದಿದ್ದರು. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿರುವ ಸಿದ್ದರಾಮಯ್ಯ ಲೋಕಸಭಾ ಚುನಾವಣೆ ಮೂಲಕ ತಮ್ಮ ಕ್ಷೇತ್ರದಲ್ಲಿ ವರ್ಚಸ್ಸನ್ನು ಮತ್ತೆ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತ ವಿಜಯ್​ ಶಂಕರ್​ ಕಾಂಗ್ರೆಸ್​ ಆಕಾಂಕ್ಷಿಯಾಗಿದ್ದು, ಅವರಿಗಾಗಿ ಮೈಸೂರನ್ನ ತಮಗೆ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಆದರೆ, ಬದಲಾದ ಸಂದರ್ಭದಲ್ಲಿ ಈಗ ಜೆಡಿಎಸ್​ ಮತ್ತೆ ಮೈಸೂರಿನ ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಸಚಿವ ಜಿ.ಟಿ. ದೇವೇಗೌಡ ಸಹ ಬೆಂಬಲವಾಗಿದ್ದಾರೆ.

ಶುಕ್ರವಾರ ಮೈಸೂರಿನ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್​, ‘ರಾಜಕೀಯ ಕುಟುಂಬದ ಹಿನ್ನಲೆ ಹೊಂದಿದ್ದು, ನನಗೂ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ಧ’ ಎಂದಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಜಿ.ಟಿ ದೇವೇಗೌಡ ಅವರು ಕೂಡ ನಿಖಿಲ್ ಮೈಸೂರಿನಿಂದ ಸ್ಪರ್ಧೆ ಮಾಡಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಘೋಷಿಸಿದ್ದರು. ನಿಖಿಲ್ ಮಂಡ್ಯದಿಂದ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ನಾವು ಅವರನ್ನು ಮೈಸೂರಿನಿಂದ ಕಣಕ್ಕಿಳಿಯುವಂತೆ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ. ಅವರ ಈ ಹೇಳಿಕೆ ಮೂಲಕ ನಿಖಿಲ್​ಗೆ ಮೈಸೂರು ವೇದಿಕೆಯಾಗಲಿದೆ ಎಂದು ಸುಳಿವು ನೀಡಿದ್ದಾರೆ.

ಒಟ್ಟಾರೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೈತ್ರಿಯಿಂದಾಗಿ ಮೈಡೂರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರ ಸದ್ಯ ಸ್ಥಳೀಯವಾಗಿಯೇ ಯುದ್ಧರಂಗವಾಗಿ ಬದಲಾಗಿದೆ. ಈ ಅಂತರ್ಯುದ್ಧದಲ್ಲಿ ಗೌಡತಿ ಸುಮಲತಾ ಜಯಸಾಧಿಸುತ್ತಾರಾ ಅಥವಾ ಅದೃಷ್ಟ ನಿಖಿಲ್​ ಕೈ ಹಿಡಿಯುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

Comments are closed.