ರಾಷ್ಟ್ರೀಯ

‘ಈಗ ಖುಷಿಯಾಗುತ್ತಿದೆ…’ ಅಭಿನಂದನ್ ಮೊದಲ ಮಾತು

Pinterest LinkedIn Tumblr


ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್‌ರನ್ನ ಪಾಕಿಸ್ತಾನ ಸೇನೆ ಭಾರತಕ್ಕೆ ಹಸ್ತಾಂತರಿಸಿದೆ. ಮಧ್ಯಾಹ್ನ 3 ಗಂಟೆಗೆ ವಾಘಾ ಗಡಿಯ ಮೂಲಕ ಹಸ್ತಾಂತರಿಸುವುದಾಗಿ ತಿಳಿಸಿದ್ದ ಪಾಕ್​ ರಾತ್ರಿ 9 ಗಂಟೆಯ ನಂತರ ಅಭಿನಂದನ್​ರನ್ನು ಬಿಡುಗಡೆ ಮಾಡಿದ್ದರು. ಕೆಲ ದಾಖಲೆಗಳ ಹಸ್ತಾಂತರ ಹಾಗೂ ನೀತಿ ನಿಯಮಗಳ ಕಾರಣದಿಂದ ಬಿಡುಗಡೆ ಪ್ರಕ್ರಿಯೆ ವಿಳಂಬವಾಗಲು ಮುಖ್ಯ ಕಾರಣ ಎನ್ನಲಾಗಿದೆ.

ರಾತ್ರಿ 9.20 ಕ್ಕೆ ಅಭಿನಂದನ್​ ಅವರನ್ನು ಪಾಕ್ ಸೇನಾಧಿಕಾರಿಗಳು ಸಹಿ ಹಾಕಿಸಿಕೊಳ್ಳುವ ಮೂಲಕ ಬಿಎಸ್​ಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಮೂಲಕ ಕೆಲ ಹೊತ್ತಿನವರೆಗಿದ್ದ ಅನುಮಾನಗಳಿಗೆ ತೆರೆ ಎಳೆಯಲಾಯಿತು. ಅಟಾರಿ-ವಾಘಾ ಗಡಿಯ ಮೂಲಕ ತಾಯ್ನಾಡಿಗೆ ಮರಳಿದ ಅಭಿನಂದನ್ ಹೇಳಿದ ಮೊದಲ ಮಾತು ಈಗ ಖುಷಿಯಾಗುತ್ತಿದೆ ಎಂಬುದಾಗಿತ್ತು.

ಅಭಿನಂದನ್ ಅವರನ್ನು ಭಾರತಕ್ಕೆ ಮರಳಿಸುವ ನಿರ್ಧಾರವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಪಾಳಯದಲ್ಲಿ ಖುಷಿ, ಆತಂಕ, ಅನುಮಾನ ಭಾವನೆಗಳು ಮನೆಮಾಡಿದ್ದವು. ಏಕೆಂದರೆ ಅಭಿನಂದನ್ ಅವರನ್ನು ಯಾವ ರೀತಿಯಲ್ಲಿ ಭಾರತಕ್ಕೆ ಹಸ್ತಾಂತರಿಸಬೇಕೆಂಬುದನ್ನು ಪಾಕಿಸ್ತಾನ ಶುಕ್ರವಾರ ಬೆಳಗ್ಗಿನವರೆಗೂ ನಿರ್ಧಸಿರಲಿಲ್ಲ.

ಭಾರತೀಯ ವಾಯುಪಡೆಯ ನಿಯೋಗಕ್ಕೆ ನೇರವಾಗಿ ಹಸ್ತಾಂತರಿಸಬೇಕೋ ಅಥವಾ ಅಂತಾರಾಷ್ಟ್ರೀಯ ರೆಡ್ ಕ್ರಾಸ್​ನಂತಹ ತೃತೀಯ ಪಕ್ಷದ ಮೂಲಕ ಕಳುಹಿಸಬೇಕೋ ಎಂಬುದನ್ನು ಪಾಕಿಸ್ತಾನ ನಿರ್ಧರಿಸಿರಲಿಲ್ಲ. ಹಾಗೆಯೇ, ವಾಘಾ ಗಡಿಯ ಬದಲು ವಿಮಾನದ ಮೂಲಕ ಅಭಿನಂದನ್ ಅವರನ್ನು ಸಾಗಿಸಬೇಕೆಂಬ ಭಾರತದ ಒತ್ತಾಯವನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ಇದರಿಂದ ಪಾಕಿಸ್ತಾನ ಕುತಂತ್ರ ಬುದ್ಧಿಯನ್ನು ತೋರಿಸಲಿದೆಯೇ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು.

ಆದರೆ ಅಂತರಾಷ್ಟ್ರೀಯ ಮಟ್ಟದ ಒತ್ತಡ ಮತ್ತು ಜಿನಿವಾ ಒಪ್ಪಂದದ ಪ್ರಕಾರ ಅಭಿನಂದನ್​ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸುವುದು ಪಾಕ್​ಗೆ ಅನಿವಾರ್ಯವಾಗಿತ್ತು. ಅದರಂತೆ ಪಾಕ್ ಸೇನೆಯು ಅಭಿನಂದನ್ ಅವರ ಹೇಳಿಕೆಗಳನ್ನು ವಿಡಿಯೋ ಮಾಡುವ ಮೂಲಕ ಹಲವು ವಿಷಯಗಳನ್ನು ದಾಖಲಿಸಿಕೊಂಡಿದೆ. ಈ ವಿಡಿಯೋದಲ್ಲಿ ಪಾಕ್ ಸೇನೆಯು ಅಭಿನಂದನ್​ ಅವರನ್ನು ಹೇಗೆ ನಡೆಸಿಕೊಂಡಿದೆ, ಪಾಕ್ ಗಡಿಯನ್ನು ಭಾರತೀಯ ಯೋಧ ಹೇಗೆ ದಾಟಿದ ಮುಂತಾದ ಅಂಶಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಹಸ್ತಾಂತರ ಪ್ರಕ್ರಿಯೆಯ ಬಳಿಕ ವಿಂಗ್ ಕಮಾಂಡರನ್ನು ದೆಹಲಿಯಿಂದ ಅಮೃತಸರಕ್ಕೆ ಕರೆ ತರಲಾಯಿತು. ಕೆಲ ಮೂಲಗಳ ಪ್ರಕಾರ, ಅವರನ್ನು ದೆಹಲಿಯ ಆರ್​ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ, ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅಭಿನಂದನ್​ ಅವರನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಶುಕ್ರವಾರ ಕೆಚ್ಚೆದೆಯ ಯೋಧನ ಆಗಮನವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸಿತು.
ತಾಯ್ನಾಡಿಗೆ ನಿಮಗೆ ಸ್ವಾಗತ ಅಭಿನಂದನ್​.ನಿಮ್ಮ ಕೆಚ್ಚೆದೆಯ ಧೈರ್ಯಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ನೀವು ವಾಪಾಸಾಗಿರುವುದು ನಮಗೆಲ್ಲ ಸಂತಸ ತಂದಿದೆ. ನಮ್ಮ ಸೇನಾಪಡೆ 130 ಕೋಟಿ ಭಾರತೀಯರಿಗೆ ಸ್ಫೂರ್ತಿ ನೀಡುವ ಕೆಲಸ ಮಾಡಿದೆ.ವಂದೇ ಮಾತರಂ! ಎಂದು ವೀರಯೋಧನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸ್ವಾಗತ ಕೋರಿದ್ದಾರೆ.​

Comments are closed.