ರಾಷ್ಟ್ರೀಯ

ಅಭಿನಂದನ್ ಜೊತೆ ಕಾಣಿಸಿಕೊಂಡ ಆ ಮಹಿಳೆ ಯಾರು?

Pinterest LinkedIn Tumblr


ಲಾಹೋರ್: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಶುಕ್ರವಾರ ರಾತ್ರಿ ವಾಘಾ ಬಾರ್ಡರ್ ಮೂಲಕ ಭಾರತಕ್ಕೆ ಮರಳಿದ್ದಾರೆ. ಅಭಿನಂದನ್ ತಯ್ನಾಡಿಗೆ ಮರಳುತ್ತಿರುವ ದೃಶ್ಯಗಳು ಪ್ರತಿಯೊಬ್ಬರ ಮನದಲ್ಲೂ ದೀರ್ಘ ಕಾಲದವರೆಗೆ ಉಳಿದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಈ ನಡುವೆ ಅಭಿನಂದನ್ ವಾಘಾ ಬಾರ್ಡರ್ ನಿಂದ ಹಿಂತಿರುಗುತ್ತಿದ್ದಾಗ ಅವರೊಂದಿಗಿದ್ದ ಮಹಿಳೆ ಯಾರು ಎಂಬ ಪ್ರಶ್ನೆ ಬಹುತೇಕ ಎಲ್ಲರ ಮನದಲ್ಲೂ ಮೂಡಿದೆ.

ವಾಸ್ತವವಾಗಿ ಅವರು ಅಭಿನಂದನ್ ಪತ್ನಿ ಅಥವಾ ಕುಟುಂಬ ಸದಸ್ಯರಲ್ಲ. ಬದಲಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಭಾರತೀಯ ವ್ಯವಹಾರಗಳ ಇಲಾಖೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಫಾರಿಹಾ ಬುಗತಿ ಆಗಿದ್ದರು. ಫಾರಿಹಾ ಓರ್ವ FSP ಅಧಿಕಾರಿಯಾಗಿದ್ದಾರೆ, ಅವರು ಭಾರತದ IFS ಗ್ರೇಡ್ ನಲ್ಲಿ ಕಾರ್ಯ ನಿರ್ವಹಿಸುತ್ತಾರ. ವಿದೇಶಾಂಗ ಸಚಿವಾಲಯದಲ್ಲಿ ಫಾರಿಹಾ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳ ಉಸ್ತುವಾರಿಯಾಗಿದ್ದಾರೆ.

ಫಾರಿಹಾ ಬುಗತಿ ಪಾಕಿಸ್ತಾನ ಸೇನೆಯ ಜೈಲಿನಲ್ಲಿ ಬಂಧಿಯಾಗಿರುವ ಕುಲಭೂಷಣ್ ಜಾಧವ್ ಪ್ರಕರಣವನ್ನು ನಿರ್ವಹಿಸುತ್ತಿರುವ ಪಾಕಿಸ್ತಾನದ ಪ್ರಮುಖ ಅಧಿಕಾರಿಯೂ ಹೌದು. ಕಳೆದ ವರ್ಷ ಇಸ್ಲಮಾಬಾದ್ ನಲ್ಲಿ ಜಾಧವ್ ತನ್ನ ತಾಯಿ ಹಾಗೂ ಹೆಂಡತಿಯನ್ನು ಭೇಟಿಯಾದ ಸಂದರ್ಭದಲ್ಲಿ ಫಾರಿಹಾ ಅಲ್ಲೇ ಇದ್ದರು. ಇದೇ ರೀತಿ ನಿನ್ನೆ ಮಾ. 01ರಂದು ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವಾಘಾ ಬಾರ್ಡರ್ ದಾಟುತ್ತಿದ್ದ ಸಂದರ್ಭದಲ್ಲೂ ಬುಗತಿ ಉಪಸ್ಥಿತರಿದ್ದರು.

ಗುರುವಾರ ಭಾರತದ ಮೇಲೆ ದಾಳಿಗೆ ಆಗಮಿಸಿದ್ದ ಮೂರು ಎಫ್‌ 16 ವಿಮಾನಗಳನ್ನು, ಭಾರತದ ಮಿಗ್‌ ವಿಮಾನಗಳು ಓಡಿಸಿದ್ದವು. ಈ ವೇಳೆ ಒಂದು ಎಫ್‌ 16 ವಿಮಾನವನ್ನು ಸ್ವತಃ ಅಭಿನಂದನ್‌ ಹೊಡೆದುರುಳಿಸಿದ್ದರು. ಈ ವಿಮಾನ ಪಾಕ್‌ ಆಕ್ರಮಿತ ಕಾಶ್ಮೀರದ ಲಾಮ್‌ ಕಣಿವೆಯಲ್ಲಿ ಬಿದ್ದಿತ್ತು. ಅದೇ ವೇಳೆ ಪಾಕ್‌ ಪಡೆಗಳ ದಾಳಿ ವೇಳೆ ಅಭಿ ಹಾರಿಸುತ್ತಿದ್ದ ವಿಮಾನ ಕೂಡಾ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉರುಳಿ ಬಿದ್ದಿತ್ತು. ಅಭಿನಂದನ್‌ ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರಾದರೂ, ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಪಾಕಿಸ್ತಾನ ಸೇನೆ ಅವರನ್ನು ಬಂಧಿಸಿತ್ತು.

ಆದರೆ ಭಾರತ ತೀವ್ರ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರವು ಅಭಿನಂದನ್ ರನ್ನು ಬಿಡುಗಡೆಗೊಳಿಸಲು ನಿರ್ಧರಿಸಿತ್ತು. ಈ ವಿಚಾರವನ್ನು ಸಂಸತ್ ನಲ್ಲಿ ಘೋಷಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶಾಂತಿಯ ಸಂಕೇತವಾಗಿ ನಾವು ಭಾರತೀಯ ಪೈಲಟ್ ಅಭಿನಂದನ್ ರನ್ನು ಬಿಡುಗಡೆಗೊಳಿಸುವುದಾಗಿ ಹೇಳಿದ್ದರು. ಆದರೆ ಜಿನೆವಾ ಒಪ್ಪಂದದ ಅನ್ವಯ ಅಭಿನಂದನ್ ರನ್ನು ಬಿಡುಗಡೆಗೊಳಿಸುವುದನ್ನು ಬಿಟ್ಟರೆ ಪಾಕ್ ಗೆ ಬೇರಾವ ದಾರಿ ಇರಲಿಲ್ಲ.

Comments are closed.