ಕರ್ನಾಟಕ

ರಾಜ್ ಕುಮಾರ್ ಇಲ್ಲದೆ ಅನಾಥಳಾಗಿದ್ದೇನೆ- ವಿಜಯಲಕ್ಷ್ಮಿ

Pinterest LinkedIn Tumblr


ಬೆಂಗಳೂರು: ಸದ್ಯಕ್ಕೆ ನಾನು ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದೇನೆ. ಔಷಧಿ ಬದಲಾಯಿಸಿದ್ದರಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಆದ್ರೆ ಈ ಸಮಯದಲ್ಲಿ ನಾನು ರಾಜ್‍ಕುಮಾರ್ ಮತ್ತು ಪಾರ್ವತಮ್ಮ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಷ್ಟೊಂದು ನೋವು ಅನುಭವಿಸಲು ಅವರಿಬ್ಬರು ಬಿಡುತ್ತಿರಲಿಲ್ಲ. ಅವರಿಲ್ಲದೆ ನಾನು ಅನಾಥೆಯಾಗಿದ್ದೇನೆ ಎಂದು ನಟಿ ವಿಜಯಲಕ್ಷ್ಮಿ ಮತ್ತೆ ಕಣ್ಣೀರು ಹಾಕಿದ್ದಾರೆ.

ಇಂಡಸ್ಟ್ರಿಯಲ್ಲಿ ಸುದೀಪ್ ಸರ್ ಬಿಟ್ಟು ಬೇರೆ ಯಾರಿಗೂ ಯಾಕೆ ಕರುಣೆ ಬಂದಿಲ್ಲ. ನಾನು ಏನ್ ತಪ್ಪು ಮಾಡಿದ್ದೀನಿ, ಯಾಕೆ ಎಷ್ಟು ಶಿಕ್ಷೆ ಕೊಡುತ್ತಿದ್ದೀರಿ ಎಂದು ವಿಡಿಯೋ ಮಾಡಿ ನಟಿ ವಿಜಯಲಕ್ಷ್ಮಿ ತನ್ನ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

ಈ ಮಧ್ಯೆ ನನ್ನ ಮನಸ್ಸಿನಲ್ಲಿ ಒಂದು ಚಿಕ್ಕ ಕೊರಗು ಇದೆ. ನಾನಿರುವ ಪರಿಸ್ಥಿತಿಯಲ್ಲಿ ಶೀಘ್ರವೇ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ನನ್ನ ಬಳಿ ಇರುವುದಕ್ಕೆ ಮನೆಯಿಲ್ಲ. ಬಾಡಿಗೆ ಮನೆಗೆ ಹೋಗೋಣ ಎಂದರೆ ಅಡ್ವಾನ್ಸ್ ಕೊಡುವುದಕ್ಕೂ ಹಣ ಇಲ್ಲ. ಈ ಬಗ್ಗೆ ನಾನು ಮೂರು ತಿಂಗಳಿಂದ ಹೇಳುತ್ತಿದ್ದೇನೆ. ಆದ್ರೆ ಯಾರ ಬಳಿ ಹೇಳಿದರೂ ಮೊದಲಿಗೆ ಮಾತನಾಡುತ್ತಾರೆ. ನಂತರ ಅವರು ನನ್ನ ಫೋನ್ ರಿಸೀವ್ ಮಾಡುವುದಿಲ್ಲ. ಮನೆ ಇಲ್ಲದ ಕಾರಣ ನಾನು ಮನೆ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನನ್ನ ಆರೋಗ್ಯ ಹದಗೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದೀಪ್ ಸರ್ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಸಹಾಯ ಮಾಡುತ್ತಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ರಾಜ್‍ಕುಮಾರ್ ಮತ್ತು ಪಾರ್ವತಮ್ಮ ಅವರು ಇರುತ್ತಿದ್ದರೆ ನಾನು ಇಷ್ಟೊಂದು ನೋವು ಅನುಭವಿಸಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸುದೀಪ್ ಸರ್ ಬಿಟ್ಟರೆ ಶಿವಣ್ಣ, ರಾಘಣ್ಣ, ಪುನೀತ್, ಯಶ್, ದರ್ಶನ್ ತುಂಬಾ ಜನರು ಇದ್ದಾರೆ. ಆದರೆ ಯಾರು ನನ್ನ ಬಳಿ ಮಾತನಾಡುತ್ತಿಲ್ಲ. ಶೀಘ್ರದಲ್ಲೇ ನಾನು ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಸುದೀಪ್ ಕೊಟ್ಟ ಒಂದು ಲಕ್ಷವನ್ನು ಆಸ್ಪತ್ರೆಗೆ ಕೊಟ್ಟಿದ್ದೇನೆ. ನಾನು ಮನೆಗೆ ಹೋಗಬೇಕು. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ವಿಜಯಲಕ್ಷ್ಮಿ ಅವರು ತೀವ್ರ ಜ್ವರ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯ ಖರ್ಚು ಭರಿಸುವ ಹಣವಿಲ್ಲದೆ ವಿಜಯಲಕ್ಷ್ಮಿ ಅವರ ಸಹೋದರಿ ಚಿತ್ರರಂಗದ ಸಹಾಯ ಕೋರಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯಿಂದ ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಆಗಮಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು.

Comments are closed.