ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವಾಗಲೂ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರು ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು 21 ವಿರೋಧ ಪಕ್ಷಗಳು ಬುಧವಾರ ವಿಷಾದ ವ್ಯಕ್ತಪಡಿಸಿವೆ.
ಇಂದು ಬೆಳಗ್ಗೆ ಭಾರತದ ಮಿಗ್ 21 ವಿಮಾನ ಪತನಗೊಂಡು ಪೈಲಟ್ ಕಣ್ಮರೆ ಆಗಿರುವುದನ್ನು ವಿದೇಶಾಂಗ ಸಚಿವಾಲಯ ಒಪ್ಪಿಕೊಂಡಿದೆ. ಇದಕ್ಕೂ ಮೊದಲು ಭಾರತದ ವಾಯುನೆಲೆಯನ್ನು ಉಲ್ಲಂಘಿಸಿದ ಪಾಕಿಸ್ತಾನದ ಎಫ್-16 ಜೆಟ್ಅನ್ನು ಭಾರತ ನಾಶ ಮಾಡಿದೆ. ಭಾರತದ ವಾಯುನೆಲೆಯನ್ನು ಪ್ರವೇಶಿಸಿ, ಬಾಂಬ್ ಹಾಕಿದ್ದಾಗಿ ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಸಭೆ ನಡೆಸಿದ 21 ವಿರೋಧ ಪಕ್ಷಗಳು ಸಭೆ ನಂತರ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದವು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪಾಕಿಸ್ತಾನ ಬೆಂಬಲಿತ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಪುಲ್ವಾಮ ದಾಳಿಗೆ ವಿಷಾದ ವ್ಯಕ್ತಪಡಿಸಿದರು. ಮತ್ತು ಇದಕ್ಕೆ ಪ್ರತ್ಯುತ್ತರವಾಗಿ ಭಾರತ ನೆನ್ನೆ ಬಾಲ್ಕೋಟ್ನಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರರಿದ್ದ ಶಿಬಿರದ ಮೇಲೆ ವಾಯುದಾಳಿ ನಡೆಸಿದ್ದನ್ನು ಶ್ಲಾಘಿಸಿದರು. ಸೈನಿಕರ ತ್ಯಾಗವನ್ನು ಆಡಳಿತ ಪಕ್ಷ ರಾಜಕೀಯಗೊಳಿಸುತ್ತಿರುವುದಕ್ಕೆ ಎಲ್ಲ 21 ಪಕ್ಷಗಳು ತೀವ್ರ ವಿಷಾದ ವ್ಯಕ್ತಪಡಿಸಿವೆ ಎಂದು ಹೇಳಿದರು.
ರಾಷ್ಟ್ರೀಯ ಭದ್ರತೆ ರಾಜಕೀಯವನ್ನೂ ಮೀರಿದ್ದು. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಎಲ್ಲ ಪಕ್ಷಗಳ ಸಭೆ ಕರೆದು ಸಲಹೆ ಪಡೆದುಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣ ಎಂದು ಹೇಳಿದರು.
ನಮ್ಮ ವಾಯುಸೇನೆಯ ಪೈಲಟ್ ಕಣ್ಮರೆಯಾಗಿರುವುದಕ್ಕೆ ಕ್ಷಮಾಪಣೆ ಕೇಳುತ್ತೇನೆ. ಆದಷ್ಟು ಶೀಘ್ರದಲ್ಲೇ ಅವರು ತವರು ನೆಲಕ್ಕೆ ವಾಪಸ್ಸಾಗುವ ವಿಶ್ವಾಸವಿದೆ. ಇಂತಹ ವಿಷಮ ಪರಿಸ್ಥಿತಿ ವೇಳೆ ನಾವು ಸೈನಿಕರ ಪರವಾಗಿ ನಿಂತುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.
ತುರ್ತು ರಕ್ಷಣಾ ಪರಿಸ್ಥಿತಿ ಬಗ್ಗೆ ಕಾಳಜಿ ಇದೆ. ಈಗಾಗಲೇ ನಮ್ಮ ಒಂದು ಯುದ್ಧ ವಿಮಾನವನ್ನು ನಾವು ಕಳೆದುಕೊಂಡಿದ್ದೇವೆ. ಒಬ್ಬ ಪೈಲಟ್ ಕಣ್ಮರೆಯಾಗಿರುವುದಾಗಿ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಪಾಕಿಸ್ತಾನ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ಕಣ್ಮರೆಯಾಗಿರುವ ಪೈಲಟ್ ಸುರಕ್ಷಿತವಾಗಿ ವಾಪಸ್ ಕರೆತರಬೇಕಿದೆ ಎಂದು ಹೇಳಿದರು.
ದೇಶದ ರಕ್ಷಣೆಗೆ ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾಯಕರು ಒತ್ತಾಯಿಸುತ್ತೇವೆ. ಈ ಮೂಲಕ ದೇಶದ ಏಕತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಸಿಪಿ (ಎಂ) ನಾಯಕ ಸೀತಾರಾಮ್ ಯೆಚೂರಿ ಹೇಳಿದರು.
Comments are closed.