ರಾಷ್ಟ್ರೀಯ

ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಅಸಾದುದ್ದೀನ್ ಓವೈಸಿ ವಿರುದ್ಧ ಮಾಜಿ ಕ್ರಿಕೆಟಿಗ ಅಜರುದ್ದೀನ್ ಸ್ಪರ್ಧೆ

Pinterest LinkedIn Tumblr


ಹೈದರಾಬಾದ್: ತೆಲಂಗಾಣದಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಬಲ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದರಲ್ಲಿ ನಿರತವಾಗಿದೆ.

ತೆಲಂಗಾಣ ಕಾಂಗ್ರೆಸ್ ಸಮಿತಿಯು ಅಭ್ಯರ್ಥಿಗಳ ಹೆಸರುಗಳನ್ನು ಆಯ್ಕೆ ಮಾಡಿದ್ದು, ಅಂತಿಮಗೊಳಿಸಲು ಎಐಸಿಸಿ ಸ್ಕ್ರೀನಿಂಗ್ ಸಮಿತಿಗೆ ಪಟ್ಟಿಯನ್ನು ಸಲ್ಲಿಸಲಿದೆ. ಪ್ರತಿ ಲೋಕಭಾ ಕ್ಷೇತ್ರಕ್ಕೆ ಎರಡರಿಂದ ಐದು ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ.

ಅದರಂತೆ ಹೈದರಾಬಾದ್​ ಲೋಕಸಭಾ ಕ್ಷೇತ್ರದಿಂದ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಿರುದ್ಧ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಮೊಹಮ್ಮದ್​ ಅಜರುದ್ದೀನ್ ಮತ್ತು ಇತರ ಇಬ್ಬರ ಹೆಸರನ್ನು ಸೂಚಿಸಿದೆ. ಅಜರುದ್ದೀನ್ ಅವರು ಅಭ್ಯರ್ಥಿಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ.

ತೆಲಂಗಾಣದ ಆಡಳಿತಾರೂಢ ಪಕ್ಷವಾದ ತೆಲಂಗಾಣ ರಾಷ್ಟ್ರೀಯ ಸಮಿತಿಯು ಎಐಎಂಐಎಂ ಮಿತ್ರ ಪಕ್ಷವಾಗಿರುವುದರಿಂದ ಹೈದರಾಬಾದ್​​ನಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಹೀಗಾಗಿ ಅಜರುದ್ದಿನ್ ಮತ್ತು ಅಸಾದುದ್ದೀನ್ ನಡುವೆ ಹೋರಾಟ ಏರ್ಪಡಲಿದೆ. 56 ವರ್ಷ ವಯಸ್ಸಿನ ಅಜರುದ್ದೀನ್ 2009 ರಲ್ಲಿ ಉತ್ತರ ಪ್ರದೇಶದ ಮರಾಠಾಬಾದ್​ನಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ 2014 ರಲ್ಲಿ ರಾಜಸ್ಥಾನದ ಟೋಂಕ್-ಸವಾಯಿ ಮಾಧೋಪುರ್​​ನಿಂದ ಸೋತಿದ್ದರು.

ಅಜರುದ್ದಿನ್ ಅವರು ತೆಲಂಗಾಣ ರಾಜಕೀಯದಲ್ಲಿ ಸಕ್ರಿಯರಾಗಿದ್ದು, 2018 ರ ನವೆಂಬರ್​​ನಲ್ಲಿ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಮಾಜಿ ಕೇಂದ್ರ ಸಚಿವೆ ರೇಣುಕಾ ಚೌಧರಿ ಅವರು ಖಮ್ಮಮ್ ಹಾಗೂ ಪೊಂಗುಲೆಟಿ ಸುಧಾಕರ್ ರೆಡ್ಡಿ ಹಾಗೂ ವಿ. ಹನುಮಂತ್ ರಾವ್ ಅವರ ಹೆಸರನ್ನು ಸೂಚಿಸಿದ್ದಾರೆ.

ನಿಜಾಮಾಬಾದ್ ಮತ್ತು ಭೋಂಗೀರ್ ಕ್ಷೇತ್ರಗಳಿಗೆಎಐಸಿಸಿ ವಕ್ತಾರ ಮಧುಯಾಶ್ಕಿ ಗೌಡ್ ಹೆಸರು ಪ್ರಸ್ತಾಪಿಸಲಾಗಿದೆ. ನಲ್ಗೊಂಡ್​ಕ್ಕೆ ಕೊಮಟ್ ರೆಡ್ಡಿ, ವೆಂಕಟ್ ರೆಡ್ಡಿ, ಕರಿಂನಗರ್​ಕ್ಕೆ ಪೊನ್ನಮ್ ಪ್ರಭಾಕರ್, ಸಿಕಂದರಾಬಾದ್​ಗೆ ಮಾಜಿ ಸಚಿವ ಅಂಜನ್ ಕುಮಾರ್ ಯಾದವ್ ಅವರಂತಹ ಹಿರಿಯ ನಾಯಕರನ್ನು ಟಿಪಿಸಿಸಿ ಶಿಫಾರಸು ಮಾಡಿದೆ ಎನ್ನಲಾಗಿದೆ.

Comments are closed.