ಕರ್ನಾಟಕ

ಟ್ವಿಟ್ಟರ್​ನಲ್ಲಿ ಫೇಕ್​ ವಿಡಿಯೋ ಹಾಕಿದ ಪಾಕ್ ಯುವಕ; ಪಾಕಿಸ್ತಾನದಿಂದ ಟ್ರೆಂಡ್​ ಆಯ್ತು ಕನ್ನಡ

Pinterest LinkedIn Tumblr


ಬೆಂಗಳೂರು: ಭಾರತ ಮತ್ತು ನೆರೆಯ ರಾಷ್ಟ್ರ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಗಡಿಭಾಗದಲ್ಲಿ ಬಿಗುವಿನ ವಾತಾರವಣ ನಿರ್ಮಾಣವಾಗಿದೆ. ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್​ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದ ಭಾರತಕ್ಕೆ ತಿರುಗೇಟು ನೀಡಿದ್ದ ಪಾಕಿಸ್ತಾನ ಭಾರತೀಯ ವಾಯುಸೇನೆಯ ಪೈಲಟ್​ ಅನ್ನು ಜೀವಂತವಾಗಿ ಹಿಡಿದು ಬಂಧಿಸಿದ್ದೇವೆ ಎಂದು ಹೇಳಿಕೆ ನೀಡಿತ್ತು.

ಇದೀಗ ಪಾಕಿಸ್ತಾನದ ಅನೇಕ ಟ್ವಿಟ್ಟಿಗರು ವಿಡಿಯೋವೊಂದನ್ನು ಶೇರ್​ ಮಾಡುತ್ತಿದ್ದು, ಕೆಳಗೆ ಬಿದ್ದಿರುವ ಪೈಲಟ್​ ಅನ್ನು ನೋಡಲು ಸುತ್ತಲೂ ಜನರು ಜಮಾಯಿಸಿರುವ ವಿಡಿಯೋ ತುಣುಕು ಇದಾಗಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಪಾಕಿಸ್ತಾನಿಯರ ಟ್ವೀಟ್​ಗಳು ಇದೀಗ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆಗಿದೆ. ಅಂದಹಾಗೆ, ಆ ವಿಡಿಯೋವನ್ನು ಭಾರತೀಯರೇ ಹೆಚ್ಚು ರೀಟ್ವೀಟ್​ ಮಾಡುತ್ತಿದ್ದಾರೆ.

ಇದೇನಿದು? ನಮ್ಮ ದೇಶದ ಪೈಲಟ್​ ಪಾಕಿಸ್ತಾನಿಯರ ವಶದಲ್ಲಿರುವ ಸುದ್ದಿಯನ್ನು ಭಾರತೀಯರೇ ಯಾಕೆ ಶೇರ್​ ಮಾಡುತ್ತಿದ್ದಾರೆ? ಎಂದು ನಿಮಗೆ ಆಶ್ಚರ್ಯವಾಗಬಹುದು. ಇದೀಗ ಟ್ವಿಟ್ಟರ್​ನಲ್ಲಿ ಓಡಾಡುತ್ತಿರುವ ಆ ವಿಡಿಯೋ ಫೇಕ್​ ಆಗಿರುವುದರಿಂದ ಭಾರತೀಯರ ಆ ಟ್ವೀಟ್​ ಅನ್ನು ಶೇರ್​ ಮಾಡಿಕೊಂಡು ವಾಸ್ತವ ಏನೆಂದು ತಿಳಿಸುತ್ತಿದ್ದಾರೆ.

ಪಾಕಿಸ್ತಾನದ ಟ್ವಿಟ್ಟಿಗರು ಶೇರ್​ ಮಾಡಿರುವ ಆ ವಿಡಿಯೋದಲ್ಲಿ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರನ್ನು ಸುತ್ತುವರಿದಿರುವ ಜನರು ಕನ್ನಡದಲ್ಲಿ ನೀರು ಬೇಕಾ ಸರ್​? ಎಂದು ಕೇಳುತ್ತಿದ್ದಾರೆ. ಪಾಕಿಸ್ತಾನಿಯರಿಗೆ ಕನ್ನಡ ಎಂಬ ಭಾಷೆಯಿದೆ ಎಂಬುದು ಗೊತ್ತಿರುವುದೇ ಅನುಮಾನ. ಹೀಗಿರುವಾಗ ಕನ್ನಡದಲ್ಲಿ ಮಾತನಾಡಲು ಹೇಗೆ ಸಾಧ್ಯ? ಎಂದು ಟ್ವಿಟ್ಟಿಗರು ಗೇಲಿ ಮಾಡಿ ವಿಡಿಯೋವನ್ನು ಶೇರ್​ ಮಾಡುತ್ತಿದ್ದಾರೆ.

ಇಸ್ಲಮಾಬಾದ್​ನ ವಾಖರ್​ ರಿಜ್ವಿ ಎಂಬಾತ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ‘ಭಾರತೀಯ ಪೈಲಟ್​ ಅನ್ನು ಪಾಕಿಸ್ತಾನ ಜೀವಂತವಾಗಿ ಸೆರೆಹಿಡಿದಿದೆ. ಅದಕ್ಕೆ ಸಾಕ್ಷಿ ಈ ವಿಡಿಯೋ. ಇದು ಟ್ರೈಲರ್​ ಅಷ್ಟೇ’ ಎಂದು ಟ್ವೀಟ್​ ಮಾಡಿದ್ದರು. ಆ ಟ್ವೀಟ್​ ಅನ್ನು ಶೇರ್​ ಮಾಡಿರುವ ಭಾರತೀಯರು ‘ನಿಮ್ಮ ದೇಶದಲ್ಲಿ ಯಾವಾಗಿಂದ ಕನ್ನಡ ಮಾತನಾಡಲು ಕಲಿತರು?’ ಎಂದು ಪ್ರಶ್ನಿಸಿದ್ದಾರೆ.

ಅಂದಹಾಗೆ, ಈ ವಿಡಿಯೋ ಯಲಹಂಕದ ವಾಯುನೆಲೆಯಲ್ಲಿ ಅವಘಡ ಸಂಭವಿಸಿದಾಗ ನಡೆದ ಘಟನೆಯಾಗಿದ್ದು, ತಾಲೀಮಿನಲ್ಲಿ ತೊಡಗಿದ್ದ ಸೂರ್ಯಕಿರಣ್​ ಯುದ್ಧ ವಿಮಾನ ಪತನವಾಗಿ ಓರ್ವ ಪೈಲಟ್​ ಸಾವನ್ನಪ್ಪಿದ್ದರು. ಕೆಳಗೆ ಬಿದ್ದ ಪೈಲಟ್​ಗಳಾದ ತೇಜೇಶ್ವರ್​ ಸಿಂಗ್​ ಮತ್ತು ವಿಜಯ್​ ಶೆಲ್ಕೆ ಅವರನ್ನು ಅಲ್ಲಿನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ನಂತರ ವಿಜಯ್​ ಶೆಲ್ಕೆ ತನ್ನನ್ನು ರಕ್ಷಿಸಿದ ಯುವಕರನ್ನು ಆಸ್ಪತ್ರೆಗೆ ಕರೆಸಿಕೊಂಡು ಧನ್ಯವಾದ ತಿಳಿಸಿದ್ದರು. ಅದೇ ವಿಜಯ್​ ಶೆಲ್ಕೆಯನ್ನು ಯುವಕರು ರಕ್ಷಿಸುತ್ತಿರುವ ವಿಡಿಯೋವನ್ನು ಪಾಕಿಸ್ತಾನಿ ಯುವಕ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ್ದಾರೆ. ಆ ವಿಡಿಯೋದಲ್ಲಿದ್ದ ಪೈಲಟ್​ ಅನ್ನೇ ಪಾಕಿಸ್ತಾನ ಬಂಧಿಸಿದೆ ಎಂದು ಅಲ್ಲಿನವರು ಬಿಂಬಿಸುತ್ತಿದ್ದಾರೆ.

Comments are closed.