ಕರ್ನಾಟಕ

ಬಿಜೆಪಿಗೆ ಲೋಕಸಭೆ ಚುನಾವಣೆ ಗೆಲ್ಲಲು ಪಾಕ್​ ಜೊತೆಗಿನ ಯುದ್ಧ ಅನುಕೂಲ: ಯಡಿಯೂರಪ್ಪ

Pinterest LinkedIn Tumblr


ಚಿತ್ರದುರ್ಗ: ಉಗ್ರರ ವಿರುದ್ಧ ಭಾರತ ತಾಳಿದ ಕಠಿಣ ನಿಲುವಿಗೆ ಇಡೀ ದೇಶವೇ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಇದರ ಪ್ರಭಾವ ಉಂಟಾಗಲಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕ್​ ಉಗ್ರರ ದಮನಕ್ಕೆ ನಾವು ಕೈಗೊಂಡ ಕ್ರಮದಿಂದಾಗಿ ಮೋದಿ ಪರವಾಗಿ ಅಲೆ ಸೃಷ್ಟಿಯಾಗಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಭವಿಷ್ಯ ನುಡಿದರು.

“ನಾವು ಪಾಕ್​ ಪ್ರದೇಶಕ್ಕೆ ಕಾಲಿಟ್ಟು ಅಲ್ಲಿರುವ ಉಗ್ರರ ಶಿಬಿರ ನಾಶ ಮಾಡಿದ್ದೇವೆ. ಇದರಿಂದ ದೇಶದಲ್ಲಿ ಪ್ರಧಾನಿ ಪರವಾಗಿ ಅಲೆ ಸೃಷ್ಟಿಯಾಗಿದೆ. ಇದರ ಪ್ರಭಾವವನ್ನು ನೀವು ಲೋಕಸಭಾ ಚುನಾವಣೆಯಲ್ಲಿ ಕಾಣುತ್ತೀರಿ,” ಎಂದು ಯಡಿಯೂರಪ್ಪ ಹೇಳಿದರು.

“ಸರ್ಕಾರ ತೆಗೆದುಕೊಂಡ ಈ ಕ್ರಮ ಯುವಕರಲ್ಲಿ ಹೊಸ ಉತ್ಸಾಹ ಹುಟ್ಟಿಸಿದೆ. ಇದರಿಂದ 28 ಲೋಕಸಭಾ ಕ್ಷೇತ್ರಗಳ ಪೈಕಿ 22ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿ ಪಾಲಾಗಲಿವೆ,” ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

“ಪುಲ್ವಾಮಾದಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಬೆಂಬಲ ನೀಡಿದ ಪಾಕಿಸ್ತಾನದ ವಿರುದ್ಧ ಮೋದಿ ಪ್ರತೀಕಾರ ತೀರಿಸಿಕೊಳ್ಳುವುದರ ಜೊತೆಗೆ ಒಂದೊಳ್ಳೆಯ ಪಾಠ ಕಲಿಸಿದ್ದಾರೆ. ಸೈನಿಕರ ಪ್ರಾಣ ತ್ಯಾಗ ನಿರುಪಯುಕ್ತವಾಗಲು ಬಿಡೆನು ಎಂದು ಪ್ರಧಾನಿ ಹೇಳಿದ್ದರು. ಅದರಂತೆ ಅವರು ನಡೆದುಕೊಂಡಿದ್ದಾರೆ. ಎಲ್ಲರೂ ಇದನ್ನೂ ಸ್ವಾಗತಿಸಿದ್ದಾರೆ. ವಿಶೇಷ ಎಂದರೆ, ವಿಪಕ್ಷಗಳೂ ಮೋದಿ ನಿರ್ಧಾಕ್ಕೆ ಬೆಂಬಲ ಸೂಚಿಸಿವೆ,” ಎಂದರು ಯಡಿಯೂರಪ್ಪ.

ಇದೇ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಯಡಿಯೂರಪ್ಪ, “ಪುಣ್ಯಾತ್ಮ ಸಿಎಂ ಕುಮಾರಸ್ವಾಮಿ ಏಳು ತಿಂಗಳಿಂದ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ನಿಲ್ಲಿಸಿ ರಾಜ್ಯದ ಖಜಾನೆ ಲೂಟಿ ಮಾಡುತ್ತಿದ್ದಾರೆ. ಕೇಂದ್ರದಿಂದ 900 ಕೋಟಿ ರೂ. ಹಣ ಕೊಟ್ಟರೂ ‌ಖರ್ಚು ಮಾಡಿಲ್ಲ. ಸಫಾಯಿ ಕರ್ಮಚಾರಿಗಳ ಪಾದ ತೊಳೆದು ಮೋದಿ ಯಾರು ಮಾಡದ ಕೆಲಸ ಮಾಡಿದ್ದಾರೆ,” ಎಂದು ಸಂತಸ ವ್ಯಕ್ತಪಡಿಸಿದರು.

ಈ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ. “ಹುತಾತ್ಮರಾದ ವೀರಯೋಧರ ಶವಗಳನ್ನು ಮುಂದಿಟ್ಟುಕೊಂಡು ಚುನಾವಣಾ ಲಾಭದ ಕನಸು ಕಾಣುತ್ತಿರುವ ಯಡಿಯೂರಪ್ಪ ಅವರ ರಾಜಕೀಯ ದುರಾಸೆಯ ಹೇಳಿಕೆಯನ್ನು ಖಂಡಿಸುತ್ತೇನೆ. ಮಡಿದ ಸೈನಿಕರ ಕುಟುಂಬದವರ ಕಣ್ಣೀರು ಇನ್ನೂ ನಿಂತಿಲ್ಲ, ಆಗಲೇ ಸೀಟುಗಳ ಲೆಕ್ಕಾಚಾರ,” ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Comments are closed.