ಕರ್ನಾಟಕ

ದಲಿತ ಎನ್ನುವ ಕಾರಣಕ್ಕೆ ಮೂರು ಬಾರಿ ಸಿಎಂ ಸ್ಥಾನ ಕೈ ತಪ್ಪಿತ್ತು; ಪರಮೇಶ್ವರ್​​!

Pinterest LinkedIn Tumblr


ದಾವಣಗೆರೆ: ನಾನು ದಲಿತ ಸಮುದಾಯದವನು ಎನ್ನುವ ಕಾರಣಕ್ಕೆ ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿದೆ ಎನ್ನುವ ಮೂಲಕ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಹೊಸ ಬಾಂಬ್​ ಸಿಡಿಸಿದ್ದಾರೆ. ಈ ಹೇಳಿಕೆಯ ಮೂಲಕ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾದ ವಿರುದ್ಧ ನೇರವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ದಾವಣಗೆರೆಯಲ್ಲಿ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪರಮೇಶ್ವರ್ ಈ ಹೇಳಿಕೆ ನೀಡಿದ್ದಾರೆ. “ಈ ಹಿಂದೆ ಕೆ.ಎಚ್. ರಂಗನಾಥ ಅವರಿಗೂ ಸಿಎಂ ಆಗುವ ಅವಕಾಶ ತಪ್ಪುವ ರೀತಿ ಆಯಿತು. ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಒಂದು ಕಾಲು ಮುಂದೆ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ದಲಿತರನ್ನು ತುಳಿಯುತ್ತಾ ಇದ್ದಾರೆ ಹಾಗೂ ನಾವುಗಳು ತುಳಿಸಿಕೊಳ್ಳುತ್ತಿದ್ದೆವೆ,” ಎಂದು ಬೇಸರ ವ್ಯಕ್ತಪಡಿಸಿದರು ಅವರು.

ದಲಿತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಆರೋಪ ಮಾಡಿರುವ ಪರಮೇಶ್ವರ್​​, “ಬೇಕೋ ಬೇಡವೋ ಎನ್ನುವ ಅನುಮಾದಿಂದಲೇ ನನಗೆ ಡಿಸಿಎಂ ಸ್ಥಾನ ನೀಡಲಾಗಿದೆ. ನಾನು ದಲಿತ ಎನ್ನುವ ಕಾರಣಕ್ಕೆ ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿದೆ. ನಮಗೆ ಯಾವ ದೇವರು ಇಲ್ಲ. ಅಂಬೇಡ್ಕರ್ ಒಬ್ಬರೇ ನಮ್ಮ ದೇವರು. ನಾವೂ ಸಂಘಟಿತರಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾಗಿದೆ,” ಎಂದು ಕರೆ ನೀಡಿದರು ಪರಮೇಶ್ವರ್​.

ಈ ಹೇಳಿಕೆ ಕಾಂಗ್ರೆಸ್​ ನಾಯಕರ ಕಣ್ಣು ಕೆಂಪಾಗಿಸಿದೆ. “ದಲಿತರ ರಕ್ಷಣೆಗೆ ಕಾಂಗ್ರೆಸ್​ ಪಕ್ಷ ಸದಾ ಸಿದ್ಧವಿರುತ್ತದೆ. ಹೀಗಿದ್ದರೂ ಪರಮೇಶ್ವರ್​ ಅವರು ಯಾಕೆ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳುವುದು ಉತ್ತಮ,” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Comments are closed.