ಕರ್ನಾಟಕ

ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಹಾಕಿ ಸುಮ್ಮನಿರುವುದು ಸರಿಯಲ್ಲ – ಚೆಕ್ ಮುಖಾಂತರ ಪರಿಹಾರ ನೀಡಿದ ಬಿಗ್ ಬಾಸ್ ಸ್ಪರ್ಧಿ ಭುವನ್

Pinterest LinkedIn Tumblr

ಮಂಡ್ಯ: ಆವಂತಿಪುರದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಗೆ ಮಂಡ್ಯದ ಯೋಧ ಗುರು ಅವರು ಹುತಾತ್ಮರಾಗಿದ್ದು, ಬಿಗ್ ಬಾಸ್ ಸ್ಪರ್ಧಿ ಭುವನ್ ಅವರು ಗುರು ಕುಟುಂಬಕ್ಕೆ ಒಂದು ಲಕ್ಷ ರೂ. ಚೆಕ್ ನೀಡಿ ಸಾಂತ್ವನ ಹೇಳಿದ್ದಾರೆ.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಭುವನ್, “ನಾವು ನಟರಾಗಿ ಅಥವಾ ಸಮಾಜದಲ್ಲಿ ಒಂದು ಹೆಸರು ಮಾಡಿದ ಮೇಲೆ ಇದು ನಮ್ಮ ಜವಾಬ್ದಾರಿ ಎಂದು ನನಗೆ ಅನಿಸುತ್ತೆ. ನಮ್ಮ ಕರ್ನಾಟಕದಲ್ಲಿ ಅಥವಾ ನಮ್ಮ ನಾಡಿನಲ್ಲಿ ಏನಾದರೂ ತೊಂದರೆ ಆದಾಗ ನಾವು ನಿಲ್ಲಬೇಕು. ನಾವು ಕೋಟಿಗಟ್ಟಲೆ ಸಂಭಾವನೆ ತೆಗೆದುಕೊಳ್ಳುತ್ತೇವೆ. ಆದರೆ ಏನಾದರೂ ತೊಂದರೆಯಾದಾಗ ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಂನಲ್ಲಿ ಬೆಂಬಲ ನೀಡಿ ಎಂದು ಹಾಕಿ ಬಿಡುತ್ತೇವೆ. ಯಾರೂ ಕೂಡ ಅಲ್ಲಿ ಹೋಗಿ ಅಲ್ಲಿನ ಪರಿಸ್ಥಿತಿ ಏನಿದೆ ಎಂದು ನೋಡಿ ಸಾಂತ್ವನ ಹೇಳುವುದು ಕಡಿಮೆ” ಎಂದು ಹೇಳಿದ್ದಾರೆ.

ನಾನು ಮೊನ್ನೆಯಿಂದ ನೋಡುತ್ತಿದೆ. ಎಲ್ಲರೂ ಕ್ಯಾಂಡಲ್ ಹಚ್ಚಿ ದೊಡ್ಡ ದೊಡ್ಡ ಮೆಸೇಜ್ ಹಾಕುತ್ತಿದ್ದಾರೆ. ಆದರೆ ಯಾರೂ ಕೂಡ ಇಲ್ಲಿ ಬಂದು ಭೇಟಿ ಮಾಡಿ ಸಾಂತ್ವನ ಹೇಳಿ ಅವರಿಗೆ ಕೈಯಲ್ಲಿ ಆದಷ್ಟು ಸಹಾಯವನ್ನು ಯಾರೂ ಮಾಡಿಲ್ಲ. ಅದು ನನಗೆ ಬೇಸರವಾಯಿತು. ಹಾಗಾಗಿ ನಾನು ಇಲ್ಲಿ ಬಂದೆ. ಇವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದೇನೆ ಎಂದರು.

ಅಲ್ಲದೇ ನಾನು ಕೊಡಗಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಕೊಡಗು ಯೋಧರ ನಾಡು. ನಮ್ಮ ಸಂಸಾರದಲ್ಲಿ ಸುಮಾರು ಜನ ಯೋಧರು ಇದ್ದಾರೆ. ಒಬ್ಬ ಯೋಧ ಕೆಲಸದಿಂದ ಬಂದು ರಜೆ ಮುಗಿಸಿಕೊಂಡು ವಾಪಸ್ ಹೋಗುವಾಗ ಅವರ ಪತ್ನಿ, ತಂದೆ-ತಾಯಿಗೆ ಎಷ್ಟು ಬೇಜಾರಾಗುತ್ತೆ ಎಂಬುದು ನಾನು ನೋಡಿದ್ದೇನೆ. ಹೀಗಿರುವಾಗ ಒಬ್ಬ ಮಗ ವಾಪಸೇ ಬರುವುದಿಲ್ಲ ಎಂದಾಗ ಅಪ್ಪ-ಅಮ್ಮ, ಪತ್ನಿಗೆ ಎಷ್ಟು ಬೇಜಾರಾಗಬಹುದು ಎಂದು ಯೋಚನೆ ಮಾಡಿ ನನಗೆ ತುಂಬಾ ದುಃಖವಾಗುತ್ತಿದೆ ಎಂದು ಹೇಳಿದರು.

ಗುರು ಅವರ ಪಾರ್ಥಿವ ಶರೀರ ಬಂದಾಗ ಅವರ ಪತ್ನಿ ಕಲಾವತಿ ಕಣ್ಣೀರು ಹಾಕುತ್ತಾ ಸೆಲ್ಯೂಟ್ ಮಾಡಿರುವ ವಿಡಿಯೋವನ್ನು ನೋಡಿದ್ದೇನೆ. ಆ ವಿಡಿಯೋ ನೋಡಿ ನನಗೆ ಕಣ್ಣೀರು ಬಂತು. ಆದರಿಂದ ನನಗೆ ಬೇಜಾರಾಗಿ ನನ್ನ ಕಡೆಯಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಎಂದು ಹೇಳಿ ಚೆಕ್ ನೀಡುವುದರ ಮೂಲಕ ಅವರಿಗೆ ನಾನು ಸಾಂತ್ವನ ಹೇಳುತ್ತಿದ್ದೇನೆ ಎಂದು ಭುವನ್ ತಿಳಿಸಿದರು.

Comments are closed.