ಕರ್ನಾಟಕ

ಮೈತ್ರಿಯಲ್ಲಿ ಮತ್ತೆ ಬಿರುಕು; ರಾಜೀನಾಮೆಗೆ ಮುಂದಾದ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್​ ಶಾಸಕ ಎಸ್​.ಟಿ.ಸೋಮಶೇಖರ್​ ಹೇಳಿಕೆ ಈಗ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಿಸಿದೆ. ಈ ವಿಚಾರವಾಗಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ ಅವರು ಬೇಕಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಬೆಳವಣಿಗೆಗಳನ್ನು ಕಾಂಗ್ರೆಸ್​ ನಾಯಕರು ಗಮನಿಸುತ್ತಿದ್ದಾರೆ. ಈ ವಿಚಾರದಲ್ಲಿ ಪ್ರತಿಕ್ರಿಯಿಸಬೇಕಿರುವುದು ನಾನಲ್ಲ, ಅವರು. ಕಾಂಗ್ರೆಸ್​ ನಾಯಕರು ಮೈತ್ರಿಯ ಲಕ್ಷ್ಮಣ ರೇಖೆ ಮೀರುತ್ತಿದ್ದಾರೆ. ನನ್ನ ತಾಳ್ಮೆಗೂ ಒಂದು ಮಿತಿ ಇದೆ. ಒಂದು ವೇಳೆ ಇದು ಹೀಗೆಯೇ ಮುಂದುವರೆದರೆ, ನಾನು ರಾಜೀನಾಮೆ ನೀಡಲು ಎಂದು ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್​ಗೆ ಖಡಕ್​ ವಾರ್ನಿಂಗ್​ ನೀಡಿದರು.

ಸೋಮೇಶೇಖರ್​ ಹೇಳಿಕೆ ರಾಜಕೀಯವಾಗಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿರುವ ಬೆನ್ನಲ್ಲೇ ಅದರ ಶಮನಕ್ಕೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರು, ಸೋಮಶೇಖರ್​ ಹೇಳಿಕೆ ಸರಿಯಾದುದ್ದಲ್ಲ. ಅವರು ಇಂತಹ ಹೇಳಿಕೆ ನೀಡಬಾರದಿತ್ತು. ಈ ಸಂಬಂಧ ಶಾಸಕರಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡುವುದಾಗಿ ತಿಳಿಸಿದರು. ಕೇವಲ ಸೋಮಶೇಖರ್​ ಅಷ್ಟೇ ಅಲ್ಲ, ಸಚಿವ ಪುಟ್ಟರಂಗ ಶೆಟ್ಟಿ, ಎಂ.ಟಿ.ಬಿ. ನಾಗರಾಜ್​ ಕೂಡ ಸಿದ್ದರಾಮಯ್ಯ ಅವರೇ ಇಂದಿಗೂ ನಮಗೆ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿದ್ದರು. ಮೂಲಗಳ ಮಾಹಿತಿ ಪ್ರಕಾರ ಸಿದ್ದರಾಮಯ್ಯರನ್ನು 50ಕ್ಕೂ ಹೆಚ್ಚು ಶಾಸಕರು ಬೆಂಬಲಿಸುತ್ತಿದ್ದು ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ನೀಡಬೇಕು ಎಂಬ ಆಗ್ರಹ ಪಕ್ಷದೊಳಗೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಿನ್ನೆ ನಗರದಲ್ಲಿ ಕುರುಬರ ಸಂಘದ ವತಿಯಿಂದ ನಿರ್ಮಿಸಿರುವ ಕನಕ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಸಚಿವರಾದ ಪುಟ್ಟರಂಗಶೆಟ್ಟಿ, ಎಂ.ಟಿ.ಬಿ. ನಾಗರಾಜು ಹಾಗೂ ಶಾಸಕ ಎಸ್‌.ಟಿ. ಸೋಮಶೇಖರ್‌ ಭಾಗಿಯಾಗಿದ್ದರು. ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸೋಮಶೇಖರ್​ ತಮ್ಮ ರಾಜಕೀಯ ಗುರುಗಳನ್ನು ಹೊಗಳುವ ಮೂಲಕ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂಬ ಇಂಗಿತ ವ್ಯಕ್ತಪಡಿಸಿದರು.

Comments are closed.