ಕರ್ನಾಟಕ

ಶಾಸಕ ಆನಂದ್ ಸಿಂಗ್ ವಿರುದ್ಧ ಕೌಂಟರ್ ದೂರು ದಾಖಲಿಸದೆ ರಾಜಿಗೆ ಮುಂದಾದ ಶಾಸಕ ಗಣೇಶ್

Pinterest LinkedIn Tumblr


ಬಳ್ಳಾರಿ: ಶಾಸಕ ಆನಂದ್ ಸಿಂಗ್ ಮೇಲೆ ಗಣೇಶ್ ಹಲ್ಲೆ ಮಾಡಿ ನಾಲ್ಕು ದಿನಗಳೇ ಆಗಿವೆ. ಪ್ರಕರಣ ದಾಖಲಾಗಿ ಎರಡು ದಿನಗಳೇ ಆಗಿವೆ. ಮಾರಣಾಂತಿಕವಾಗಿ ಹಲ್ಲೆ ಮಾಡಿದ ರೌಡಿ ಶಾಸಕ ಗಣೇಶ್ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ಕಾಂಗ್ರೆಸ್ ನಾಯಕರು ಹಾಗೂ ಸರ್ಕಾರದ ಶ್ರೀರಕ್ಷೆಯಲ್ಲಿ ಗಣೇಶ್ ನಾಪತ್ತೆಯಾಗಿದ್ದಾನೆ. ಕೌಂಟರ್ ಕೇಸು ಹಾಕದೆ ಗಣೇಶ್ ಸಂಧಾನಕ್ಕೆ ಕಳುಹಿಸಿದ್ದು ಯಾರನ್ನು ಗೊತ್ತಾ?

ಜೆ.ಎನ್.ಗಣೇಶ್ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ಹೆಸರು. ಬಿಡದಿಯ ರೆಸಾರ್ಟ್ ನಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ ಪರಿಣಾಮ ಸದ್ಯ ಆನಂದ್ ಸಿಂಗ್ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದು ನಾಲ್ಕು ದಿನಗಳೇ ಕಳೆದಿವೆ. ಈ ಮಧ್ಯ ಮಾಧ್ಯಮಗಳಿಗೆ ನಾನೇನು ತಪ್ಪೇ ಮಾಡಿಲ್ಲ. ಹಾಗೇನಿದ್ದರೂ ತಪ್ಪು ತಿಳಿದುಕೊಂಡಿದ್ದರೆ ಸಿಂಗ್ ಕುಟುಂಬಕ್ಕೆ ಕ್ಷಮೆ ಕೇಳುತ್ತೇನೆ ಎಂದೇಳಿದ್ದ. ಇದಾದ ಬಳಿಕ ಎಫ್ ಐ ಆರ್ ದಾಖಲಾದ ಕೂಡಲೇ ನಾಪತ್ತೆಯಾಗಿದ್ದಾನೆ.

ಕಳೆದೆರಡು ದಿನಗಳಿಂದ ನಾಪತ್ತೆಯಾಗಿರುವ ಕಂಪ್ಲಿ ಕ್ಷೇತ್ರದ ಶಾಸಕ ಜೆ ಎನ್ ಗಣೇಶ್ ಬಳ್ಳಾರಿಯ ಕಾಂಗ್ರೆಸ್ ಹಿರಿಯ ಮುಖಂಡರ ಮನೆಗೆ ಬಂದು ಹೋಗಿದ್ದಾನೆ ಎಂಬ ಮಾಹಿತಿಯೂ ಇದೆ. ಒಂದು ವೇಳೆ ಗಣೇಶ್ ಬಂಧನವಾದರೆ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗುತ್ತೆ ಎನ್ನುವ ಕಾರಣಕ್ಕೆ ನಿರೀಕ್ಷಣಾ ಜಾಮೀನು ಸಿಗುವವರೆಗೆ ಶ್ರೀರಕ್ಷೆಯಾಗಿ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರ ಮುಂದಾಗಿದೆ ಎಂದು ಜನರು ಮಾತಾಡಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ.

ಪತ್ನಿಯನ್ನು ಸಂಧಾನಕ್ಕೆ ಕಳುಹಿಸಿದ ಶಾಸಕ ಜಿ ಎನ್ ಗಣೇಶ್

ವಾಲ್ಮೀಕಿ ಸಮುದಾಯದ ಶಾಸಕ ಜಿ ಎನ್ ಗಣೇಶ್ ಆನಂದ್ ಸಿಂಗ್ ವಿರುದ್ಧ ಕೌಂಟರ್ ಕೇಸ್ ಹಾಕದೆ ತನ್ನ ಪತ್ನಿಯನ್ನು ಆನಂದ್ ಸಿಂಗ್ ಕುಟುಂಬದ ಬಳಿ ಕಳುಹಿಸಿ ಪ್ರಕರಣವನ್ನು ಸಂಧಾನ ಮಾಡಿಕೊಳ್ಳುವ ಪ್ರಯತ್ನ ಮಾಡಿದರಾದರೂ ಫಲಕಾರಿಯಾಗಲಿಲ್ಲ. ಇತ್ತ ಕಂಪ್ಲಿ ಕ್ಷೇತ್ರದ ಗಣೇಶ್ ಬೆಂಬಲಿಗರು, ಕೆಪಿಸಿಸಿ ತಮ್ಮ ಶಾಸಕರ ಮೇಲೆ ತೆಗೆದುಕೊಂಡಿರುವ ಅಮಾನತು ಆದೇಶವನ್ನು ವಾಪಸ್ ಪಡೆಯ ಬೇಕು ಎಂದು ಒತ್ತಾಯಿಸಿದ್ದಾರೆ.

ಶಾಸಕರ ವಿರುದ್ದ ಬಳ್ಳಾರಿಯಲ್ಲಿ ದಾಖಲಾದ ಪ್ರಕರಣಗಳು

ಶಾಸಕ ಗಣೇಶ್ ವಿರುದ್ಧ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಮೂರು ಪ್ರಕರಣ ದಾಖಲಾಗಿದ್ದವು. 2006 ರಲ್ಲಿ ರೌಡಿ ಶೀಟರ್ ಆಗಿ ಕೇಸ್ ಓಪನ್ ಮಾಡಲಾಯಿತು. 2005 ರಲ್ಲಿ ಗಣೇಶ ವಿಸರ್ಜನೆ ವೇಳೆ ಪಿಎಸ್ ಐ ಸೋಮಲಾ ನಾಯಕ್ ಸೇರಿದಂತೆ ಪೊಲೀಸರ ಮೇಲೆ ದಬ್ಬಾಳಿಕೆ, ನಿಂದನೆ, ಕರ್ತ್ಯವಕ್ಕೆ ಅಡ್ಡಿ. 2008 ರಲ್ಲಿ ಹೊಸಪೇಟೆ ನಗರಸಭೆ ಸದಸ್ಯ ಚಿದಾನಂದ ಮೇಲೆ ಹಲ್ಲೆ, ಕೊಲೆ ಬೆದರಿಕೆ, ಪ್ರಕರಣದಲ್ಲಿ ಕೇಸ್ ದಾಖಲಿಸಲಾಗಿತ್ತು. ಹೊಸಪೇಟೆಯಲ್ಲಿ ಬಾರ್ ಮೇಲೆ ದಾಳಿ ಮಾಡಿ ಗಲಾಟೆ ಮಾಡಿದ್ದ. ಕಾಂಗ್ರೆಸ್ ಪಕ್ಷ ಸೇರುವ ಮುನ್ನ ಅಡೆ ತಡೆಯಾಗಿದ್ದ ರೌಡಿ ಶೀಟರ್ ಪಟ್ಟಿಯಿಂದ 2015ರಲ್ಲಿ ಗಣೇಶ್ ಅವರಿಂದ ಪತ್ರ ಬರೆಸಿಕೊಂಡು ಪ್ರಕರಣ ಮುಕ್ತಾಯ ಮಾಡಲಾಗಿದೆ.

ಬಿಡದಿಯಲ್ಲಿ ದಾಖಲಾದ ಪ್ರಕರಣಗಳು

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೋಲೀಸರು ಅವರ ಶೋಧಕಾರ್ಯಕ್ಕಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಿದ್ದಾರೆ. ಐಪಿಸಿ 323, 324, 307, 504, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಕೊಲೆ ಯತ್ನ, ದಾಳಿ, ಕ್ರಿಮಿನಲ್ ಬೆದರಿಕೆ ಮತ್ತು ಇತರ ಆರೋಪದ ಮೇಲೆ ಗಣೇಶ್ ವಿರುದ್ದ ಬಿಡದಿ ಪೋಲೀಸರು ಸೋಮವಾರ ಎಫ್ಐಆರ್ ದಾಖಲಿಸಿದ್ದಾರೆ.

ಇನ್ನು ಪ್ರಕರಣದ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಹೊಸಪೇಟೆಯ ಶಾಸಕ ಆನಂದ್ ಸಿಂಗ್, ಕಂಪ್ಲಿ ಶಾಸಕ ಗಣೇಶ್ ಅವರ ಹೊಸಪೇಟೆಯ ಮನೆಗಳಿಗೆ ಭದ್ರತೆ ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿ ಮುಂಜಾಗ್ರತಾ ಭದ್ರತೆ ಹೊಸಪೇಟೆಯ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತೆ ಬಿಡದಿ ಪೊಲೀಸರು ಬರುವ ಮಾಹಿತಿ ಬಂದರೆ ನಾವು ಸಹಕಾರ ನೀಡುತ್ತೇವೆ ಎಂದಿದ್ದಾರೆ.

ರಾಜ್ಯಾದ್ಯಂತ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ಪಕ್ಷದ ಶಾಸಕರ ರೆಸಾರ್ಟ್ ಬಡಿದಾಟ ಒಬ್ಬ ಶಾಸಕನನ್ನು ಆಸ್ಪತ್ರೆಯಲ್ಲಿ ಮಲಗಿಸಿದರೆ, ಇನ್ನೊಬ್ಬರನ್ನ ತಲೆ ಮರೆಸಿಕೊಳ್ಳುವಂತೆ ಮಾಡಿದೆ. ಇನ್ನು ಇದನ್ನು ನೋಡಿದ ಮತದಾರರು ಇವರಿಗಾ ನಾವು ಮತ ಹಾಕಿದ್ದು ಎಂದು ತಲೆ ತಗ್ಗಿಸುವ ಪ್ರಸಂಗ ಬಂದೆರಗಿದೆ.

Comments are closed.