ಕರ್ನಾಟಕ

ಆನಂದ್​ ಸಿಂಗ್​ ಜೊತೆ ರಾಜಿ ಸಂಧಾನ ವಿಫಲ: ಬಂಧನ ಭೀತಿಯಲ್ಲಿ ಕಂಪ್ಲಿ ಶಾಸಕ ಗಣೇಶ್​

Pinterest LinkedIn Tumblr


ಬೆಂಗಳೂರು: ಮೂರು ದಿನಗಳ ಹಿಂದೆ ಈಗಲ್ಟನ್​ ರೆಸಾರ್ಟ್​ನಲ್ಲಿ ಕಂಪ್ಲಿ ಶಾಸಕ ಗಣೇಶ್​ ಅವರಿಂದ ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದ ಕಾಂಗ್ರೆಸ್​ ಶಾಸಕ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕಣ್ಣು, ಹಣೆಯ ಭಾಗಕ್ಕೆ ಗಾಯವಾಗಿದ್ದು, ಹಣೆಗೆ ಹೊಲಿಗೆ ಹಾಕಲಾಗಿದೆ. ಇನ್ನು, ಆನಂದ್​ ಸಿಂಗ್​ ನನಗೆ ಅಣ್ಣನಿದ್ದಂತೆ, ಆತನ ಮೇಲೆ ನಾನು ಕೈ ಮಾಡಿಲ್ಲ ಎಂದು ಕಂಪ್ಲಿ ಗಣೇಶ್​ ಸಮಜಾಯಿಷಿ ಕೊಟ್ಟಿದ್ದೂ ಆಯಿತು. ಆದರೆ, ವಿಷಯ ಅಷ್ಟಕ್ಕೇ ನಿಂತಿಲ್ಲ.

ಬಳ್ಳಾರಿ ಕಾಂಗ್ರೆಸ್​ ಶಾಸಕರ ಮಾರಾಮಾರಿ ಪ್ರಕರಣದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಘಟನೆಯಿಂದ ಆನಂದ್​ ಸಿಂಗ್​ ಕುಟುಂಬದವರೂ ಕಂಪ್ಲಿ ಗಣೇಶ್​ ಮೇಲೆ ಕಿಡಿಕಾರುತ್ತಿದ್ದಾರೆ. ಇದು ಕಾಂಗ್ರೆಸ್​ ನಾಯಕರ ತಲೆಬಿಸಿಗೆ ಕಾರಣವಾಗಿದೆ. ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಬಗೆಹರಿಸಲು ಕೈ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಕಂಪ್ಲಿ ಗಣೇಶ್​ ಬಂಧನಕ್ಕೆ ಒತ್ತಾಯ:

ಒಂದೆಡೆ ಕಾಂಗ್ರೆಸ್​ ಶಾಸಕರಾದ ಕಂಪ್ಲಿ ಗಣೇಶ್​ ಮತ್ತು ಆನಂದ್ ಸಿಂಗ್​ ನಡುವಿನ ಮನಸ್ತಾಪವನ್ನು ಬಗೆಹರಿಸಲು ಕಾಂಗ್ರೆಸ್​ ನಾಯಕರು ಪ್ರಯತ್ನಿಸುತ್ತಲೇ ಇದ್ದಾರೆ. ಇನ್ನೊಂದೆಡೆ ಆನಂದ್​ ಸಿಂಗ್​ ಕುಟುಂಬಸ್ಥರು ಕಂಪ್ಲಿ ಗಣೇಶ್​ ಬಂಧನಕ್ಕೆ ಒತ್ತಡ ಹೇರುತ್ತಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿರುವ ಶಾಸಕ ಗಣೇಶ್​ ಅವರನ್ನು ಬಂಧಿಸಲೇಬೇಕು ಎಂದು ಅವರು ಹಠ ಹಿಡಿದಿದ್ದಾರೆ. ತಮ್ಮ ಮೇಲೆ ಎಫ್​ಐಆರ್​ ದಾಖಲಾಗಿರುವುದು ತಿಳಿಯುತ್ತಿದ್ದಂತೆ ಕಂಪ್ಲಿ ಗಣೇಶ್​ ತಲೆಮರೆಸಿಕೊಂಡಿದ್ದಾರೆ. ಅವರು ಎಲ್ಲಿದ್ದಾರೆಂದು ಹುಡುಕಲು ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ.

ಎಫ್​ಐಆರ್​ ದಾಖಲಾಗಿದ್ದು ತಿಳಿಯುತ್ತಿದ್ದಂತೆ ಅಜ್ಞಾತ ಸ್ಥಳವನ್ನು ಸೇರಿಕೊಂಡಿರುವ ಕಂಪ್ಲಿ ಗಣೇಶ್​ ಹೇಗಾದರೂ ಮಾಡಿ ಈ ಪ್ರಕರಣದಿಂದ ಹೊರಬರಲು ಕಸರತ್ತು ನಡೆಸಿದ್ದಾರೆ. ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ್ದ ಗಣೇಶ್​, ‘ಇಬ್ಬರ ನಡುವೆ ಸಣ್ಣಪುಟ್ಟ ಅಸಮಾಧಾನಗಳು ಇದ್ದಿದ್ದು ನಿಜ. ಅದಕ್ಕೆ ಸಣ್ಣ ಜಗಳವಾಗಿದ್ದೂ ನಿಜ. ಆದರೆ, ನಾನು ಆನಂದ್​ ಸಿಂಗ್​ ಮೇಲೆ ಕೈ ಮಾಡಿಲ್ಲ. ಬಾಟಲಿಯಿಂದ ಹೊಡೆದಿದ್ದೇನೆ ಎಂಬುದೆಲ್ಲ ಸುಳ್ಳು ಸುದ್ದಿ. ನಾನೇನೂ ತಪ್ಪು ಮಾಡಿಲ್ಲ. ಆದರೆ, ನನ್ನಿಂದ ಆನಂದ್ ಸಿಂಗ್​ ಕುಟುಂಬದವರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದರು.

ರಾಜಿ ಸಂಧಾನಕ್ಕೆ ಮುಂದಾದ ಗಣೇಶ್​:

ಕಂಪ್ಲಿ ಗಣೇಶ್​ ಅವರನ್ನು ಬಂಧಿಸಬೇಕೆಂದು ಹಠ ಹಿಡಿದಿರುವ ಆನಂದ್​ ಸಿಂಗ್​ ಕುಟುಂಬದವರ ಜೊತೆಗೆ ರಾಜಿ ಸಂಧಾನ ನಡೆಸಲು ಗಣೇಶ್​ ಪ್ರಯತ್ನಿಸುತ್ತಿದ್ದಾರೆ. ತಮ್ಮ ಮೇಲೆ ದೂರು ದಾಖಲಾಗಿರುವುದರಿಂದ ತನಿಖೆ ಶುರುವಾದರೆ ಏನು ಮಾಡುವುದು ಎಂಬ ಭೀತಿ ಅವರನ್ನು ಕಾಡುತ್ತಿದೆ. ಹೀಗಾಗಿ, ತನಿಖೆಗೂ ಮುನ್ನ ರಾಜಿ ಸಂಧಾನಕ್ಕೆ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗಿದೆ. ಕೆಲವು ಕಾಂಗ್ರೆಸ್​ ನಾಯಕರ ಮೂಲಕವೂ ಆನಂದ್ ಸಿಂಗ್ ಜೊತೆ ರಾಜಿ ಸಂಧಾನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್​ನಿಂದ ಕಂಪ್ಲಿ ಗಣೇಶ್​ ಅವರನ್ನು ಅಮಾನತುಗೊಳಿಸಲಾಗಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಗಣೇಶ್ ತಮ್ಮ ವರ್ಚಸ್ಸನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ರಾಜಿ ಸಂಧಾನಕ್ಕೆ ಆನಂದ್​ ಸಿಂಗ್​ ಕುಟುಂಬಸ್ಥರು ಒಪ್ಪುತ್ತಿಲ್ಲ. ಏನೇ ಆದರೂ ಶಿಕ್ಷೆ ಕೊಡಿಸಿಯೇ ಸಿದ್ಧ ಎಂದು ಅವರೂ ಹಠ ಹಿಡಿದಿದ್ದಾರೆ. ಈ ಬಗ್ಗೆ ಘಟನೆ ನಡೆದ ದಿನ ಪ್ರತಿಕ್ರಿಯೆ ನೀಡಿದ್ದ ಆನಂದ್​ ಸಿಂಗ್​ ಅವರ ಪತ್ನಿ ಲಕ್ಷ್ಮೀ ಸಿಂಗ್​, ಈ ಹಲ್ಲೆ ನಡೆಸಿದವರು ಯಾರೇ ಆಗಿದ್ದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವುದಾಗಿ ಹೇಳಿದ್ದರು. ಬಿಡದಿ ಪೊಲೀಸರು ಕಂಪ್ಲಿ ಗಣೇಶ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸದ್ಯಕ್ಕೆ ಡಿಸ್ಚಾರ್ಜ್​ ಇಲ್ಲ:

ಸದ್ಯಕ್ಕೆ ತಲೆಮರೆಸಿಕೊಂಡಿರುವ ಕಂಪ್ಲಿ ಗಣೇಶ್​ ಅವರ ಬಂಧನವಾಗುವವರೆಗೆ ಆನಂದ್ ಸಿಂಗ್​ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿಸದಿರಲು ಅವರ ಕುಟುಂಬಸ್ಥರು ಪ್ಲಾನ್​ ಮಾಡಿದ್ದಾರೆ. ಆನಂದ್​ ಸಿಂಗ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರೆ ಕಂಪ್ಲಿ ಗಣೇಶ್​ ನಿರೀಕ್ಷಣಾ ಜಾಮೀನು ಪಡೆಯುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಮಾಡಲಾಗಿದೆ. ಸದ್ಯ ಹಲ್ಲೆಯಾದ ಗಾಯಗಳೆಲ್ಲಾ ಮಾಸಿದ್ದು, ಕಣ್ಣಿನ ಭಾಗದಲ್ಲಿ ಸ್ವಲ್ಪ ಊತವಿದೆ. ಶಾಸಕ ಆನಂದ್ ಸಿಂಗ್ ಬಯಸಿದರೆ ಡಿಸ್ಚಾರ್ಜ್ ಮಾಡುವುದಾಗಿ ಅಪೋಲೋ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಆದರೆ, ಇನ್ನೂ ಕೆಲವು ದಿನಗಳು ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಕೈ ಶಾಸಕ ಆನಂದ್ ಸಿಂಗ್‌ ಮೇಲೆ ಹಲ್ಲೆ ಪ್ರಕರಣದಿಂದ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅಭಿಮಾನಿಗಳಿಂದ ಇಂದು ಮತ್ತು ನಾಳೆ ಹೊಸಪೇಟೆಯಲ್ಲಿ ಬಂದ್​ಗೆ ಕರೆ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಲಾಗಿತ್ತು. ಬಂದ್​ ಮಾಡದಂತೆ ಶಾಸಕ ಆನಂದ್ ಸಿಂಗ್ ಮನವಿ ಮಾಡಿದ್ದಾರೆ. ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ. ಅಭಿಮಾನಿಗಳು ಯಾರೂ ತಪ್ಪು ತಿಳಿಯಬೇಡಿ. ನನ್ನ ಮೇಲೆ ಅಭಿಮಾನ, ಪ್ರೀತಿ ತೋರಿಸಿದ್ದೀರಿ. ಆರೋಗ್ಯ ವಿಚಾರಿಸಿ ಪ್ರಾರ್ಥನೆ ಮಾಡಿದ್ದೀರಿ. ಇದಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಬೆಂಬಲಿಗರ ಮೂಲಕ ಆನಂದ್ ಸಿಂಗ್ ಸಂದೇಶ ರವಾನಿಸಿದ್ದಾರೆ.

Comments are closed.