ಮನೋರಂಜನೆ

ಲೋಕಸಭಾ ಚುನಾವಣೆ ಗೆಲ್ಲಲು ಮೋದಿಗೆ ಸಲಹೆ ನೀಡಿದ ನಟಿ ರಾಖಿ ಸಾವಂತ್

Pinterest LinkedIn Tumblr


ಮುಂಬೈ: ಲೋಕಸಭಾ ಚುನಾವಣೆ ಗೆಲ್ಲಲು ಪ್ರಧಾನಿ ಮೋದಿ ಅವರಿಗೆ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಲಹೆಯನ್ನು ನೀಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಹಾಕಿಕೊಂಡಿರುವ ರಾಖಿ ನನ್ನ ಮಾತು ಕೇಳಿದ್ರೆ ಮುಂದಿನ ಐದು ವರ್ಷ ನೀವೇ ಆಡಳಿತ ನಡೆಸುವ ಲಕ್ ನಿಮ್ಮದಾಗಲಿದೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಹಾಯ್ ಮೋದಿಜಿ, ಹೇಗಿದ್ದೀರಿ? ಇತ್ತೀಚೆಗೆ ನೀವು ಬಾಲಿವುಡ್ ತಾರೆಯರನ್ನು ತುಂಬಾ ಬಾರಿ ಭೇಟಿಯಾಗುತ್ತಿದ್ದೀರಿ. ತಾರೆಯರನ್ನು ಭೇಟಿ ಆಗುವ ಮೂಲಕ ಬಾಲಿವುಡ್ ಗೆ ನೀವು ನೀಡುತ್ತಿರುವ ಗೌರವ ನೋಡಿ ಖುಷಿಯಾಗುತ್ತಿದೆ. ಬಾಲಿವುಡ್ ಸ್ಟಾರ್ ಗಳನ್ನು ಭೇಟಿಯಾಗುವ ಬದಲು ನೀವು ರೈತರು ಮತ್ತು ಬಡವರ ಹತ್ತಿರ ಹೋಗಿ. ಅವರೇ ನಿಜವಾದ ಮತದಾರರು. ಬಾಲಿವುಡ್ ಸೆಲೆಬ್ರೆಟಿಗಳು ಯಾರು ವೋಟ್ ಹಾಕಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರನ್ನು ಭೇಟಿಯಾದ್ರೆ ಚುನಾವಣೆಯಲ್ಲಿ ನಿಮಗೆ ಮತ ಬೀಳಲಿವೆ. ಇದರಿಂದ ಮುಂದಿನ ಬಾರಿ ನೀವೇ ಸರ್ಕಾರ ರಚಿಸಿ ಆಡಳಿತ ನಡೆಸಬಹುದು ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಸಿನಿಮಾ ಟಿಕೆಟ್ ಗಳ ಮೇಲಿನ ಜಿಎಸ್‍ಟಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಬಾಲಿವುಡ್ ಪ್ರಮುಖರು ಮೋದಿ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದರು. ನಿರ್ಮಾಪಕ ಕರಣ್ ಜೋಹರ್, ನಟರಾದ ರಣ್‍ವೀರ್ ಸಿಂಗ್, ರಣ್‍ಬೀರ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರ, ಆಯುಷ್ಮಾನ್ ಖುರಾನ್, ರಾಜ್‍ಕುಮಾರ್ ರಾವ್, ಕಾರ್ತಿಕೇಯನ್ ಆರ್ಯ ಮತ್ತು ನಟಿಯರಾದ ಭೂಮಿ ಪಡ್ನೇಕರ್, ಆಲಿಯಾ ಭಟ್ ಸೇರಿದಂತೆ ಹಲವರು ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಎಲ್ಲರು ಪ್ರಧಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.

ಈ ಹಿಂದೆ ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಪ್ರಿಯಾಂಕಾ ಚೋಪ್ರಾರ ಮದುವೆ ತೆರಳಿದ್ದ ಪ್ರಧಾನಿಗಳು ನವದಂಪತಿಗೆ ಶುಭಕೋರಿದ್ದರು. ಸದ್ಯ ಖಾಸಗಿ ವಾಹಿನಿ ಧಾರಾವಾಹಿಯಲ್ಲಿ ನಟಿಸುತ್ತಿರುವ ರಾಖಿ ಪ್ರತಿನಿತ್ಯ ಇನ್ಸ್ಟಾದಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಈ ಹಿಂದೆ ತಮ್ಮ ಮದುವೆ ನಿಶ್ಚಯವಾದಾಗ ಮೋದಿಜೀ ನನ್ನನ್ನು ಆಶೀರ್ವದಿಸಲು ಬರಲಿದ್ದಾರೆ ಅಂತಾ ಹೇಳಿಕೊಂಡಿದ್ದರು. ಆದ್ರೆ ಕಾರಣಾಂತರಗಳಿಂದ ರಾಖಿ ಸಾವಂತ್ ಮದುವೆ ರದ್ದಾಗಿತ್ತು.

Comments are closed.