ಕರ್ನಾಟಕ

ಬಿಜೆಪಿ ಜೊತೆ ಹೋಗಿದ್ರೆ ಸಚಿವನಾಗುತ್ತಿದ್ದೆ: ಕಂಪ್ಲಿ ಶಾಸಕ ಗಣೇಶ್​?

Pinterest LinkedIn Tumblr


ಬೆಂಗಳೂರು: “ನಿನ್ ಮಾತನ್ನು ಕೇಳಿ ನಾನು ಕೆಟ್ಟೆ. ನಾನು ಬಿಜೆಪಿಗೆ ಹೋಗಿದ್ರೆ ಸಚಿವನಾಗ್ತಿದ್ದೆ. ನಿನ್ನಿಂದ ನಾನು ಹಾಳಾಗಿಹೋದೆ. ಎಲ್ಲದಕ್ಕೂ ನೀನೇ ಕಾರಣ,” ಎಂದು ಕಂಪ್ಲಿ ಶಾಸಕ ಗಣೇಶ್ ನೆನ್ನೆ ರೆಸಾರ್ಟ್​ನಲ್ಲಿ ಆನಂದ್​ ಸಿಂಗ್​ ಜೊತೆಗೆ ಜಗಳ ತೆಗೆದಿದ್ದಾರೆ ಎನ್ನಲಾಗಿದೆ.

“ನಾನು ಬಿಜೆಪಿ ಜೊತೆ ಸಂಪರ್ಕದಲ್ಲಿ ಇರೋದು, ಯಾರ್ ಜೊತೆ ಮಾತಾಡ್ತಾ ಇದೀನಿ ಅನ್ನೋ ಮಾಹಿತಿ ಪ್ರತಿ ಹಂತದಲ್ಲೂ ಕೈ ನಾಯಕರಿಗೆ ತಲುಪಿಸಿದ್ದು ನೀನೇ. ಇಲ್ಲಿದ್ದು ಸಚಿವನೂ ಆಗಿಲ್ಲ, ಏನೂ ಪ್ರಯೋಜನ ಆಗಿಲ್ಲ,” ಎಂದು ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಗಣೇಶ್ ರೇಗಾಡಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಆನಂದ್​ ಸಿಂಗ್​. “ನಿನ್​ ಬುದ್ದಿ ಎಲ್ಲಿತ್ತು, ನಾನೇನು ನಿನ್ನನ್ನು ಎಳೆದುಕೊಂಡುಬಂದಿಲ್ಲ. ಸುಮ್ಮನೆ ನನ್ನ ಮೇಲೆ ಆರೋಪ ಮಾಡಬೇಡ. ಬಾಯಿಗೆ ಬಂದಂತೆ ಮಾತಾಡಬೇಡ,” ಎಂದು ಗಣೇಶ್ ಮೇಲೆ ಕೋಪಗೊಂಡಿದ್ದಾರೆ.

ಇದನ್ನು ಓದಿ: ಈಗಲ್ಟನ್ ರೆಸಾರ್ಟ್​ನಲ್ಲಿ ಹೊಡೆದಾಡಿಕೊಂಡರಾ ಕೈ ಶಾಸಕರು?; ಕಾಂಗ್ರೆಸ್​ ನಾಯಕರು ಹೇಳಿದ್ದೇನು?

ಮೊನ್ನೆ ರಾತ್ರಿಯಿಂದಲೇ ಈ ಜಗಳ ಶುರುವಾಗಿತ್ತು. ನಿನ್ನೆ ಮತ್ತೆ ತಡರಾತ್ರಿ ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಇದು ಅತಿರೇಕಕ್ಕೆ ತಿರುಗಿ, ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದಾರೆ. ನಂತರ ಕಂಪ್ಲಿ ಗಣೇಶ್​ ಅವರು ಆನಂದ್​ ಸಿಂಗ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಸದ್ಯ ಆನಂದ್​ ಸಿಂಗ್​ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಕೈ ಗೆ ಮಸಿ ಬಳಿದ ಶಾಸಕರು!

ಮೈತ್ರಿ ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವಾಗಲೇ ಕೈ ಶಾಸಕರ ಬಡಿದಾಟ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ. ರೆಬೆಲ್ಸ್ ಸಮಸ್ಯೆ ಪರಿಹರಿಸುವ ಹರಸಾಹದಲ್ಲಿರುವ ಕೈ ನಾಯಕರಿಗೆ ಈ ಇಬ್ಬರು ಶಾಸಕರು ಮತ್ತೊಂದು ತಲೆನೋವನ್ನು ತಂದಿಟ್ಟಿದ್ದಾರೆ. ಶಾಸಕರು ಎಂಬುದನ್ನೂ ಮರೆತು ಪರಸ್ಪರ ಬಡಿದಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಾಳಯವೇ ತಲೆತಗ್ಗಿಸುವಂತೆ ಮಾಡಿದ್ದಾರೆ.

ಇಬ್ಬರು ಗಲಾಟೆ ವಿಷಯ ಮಾಧ್ಯಮಗಳಲ್ಲಿ ಬಿತ್ತರಗೊಂಡ ನಂತರ ಪ್ರತಿಕ್ರಿಯಿಸಿರುವ ಸಚಿವ ಡಿಕೆಶಿ, ಗಲಾಟೆ ಎಲ್ಲವೂ ಊಹಾಪೋಹ. ಯಾವುದೇ ಗಲಾಟೆ ಆಗಿಲ್ಲ. ನಾವೆಲ್ಲ ಜೊತೆಯಲ್ಲೇ ಇದೀವಿ. ಸ್ವಲ್ಪ ಹೊತ್ತಿನಲ್ಲಿ ಇಬ್ಬರೂ ಜೊತೆಗೇ ಮಾಧ್ಯಮದ ಮುಂದೆ ಬಂದು ಮಾತನಾಡುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇಬ್ಬರ ಜಗಳ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಅವರ ಕುಟುಂಬದವರೂ ಕಂಗಾಲಾಗಿದ್ದಾರೆ. ಅವರ ಸಂಪರ್ಕಕ್ಕೆ ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಹೀಗಾಗಿ ಸಚಿವ ಡಿಕೆಶಿ ಅವರಿಗೇ ಕುಟುಂಬಸ್ಥರು ಕರೆ ಮಾಡುತ್ತಿದ್ದಾರೆ.

ನಿನ್ನೆ ಸಚಿವ ಡಿಕೆಶಿ ಜೊತೆ ಹೋಗುವಾಗಲೂ ಪ್ರತ್ಯೇಕ ವಾಹನದಲ್ಲಿ ಇಬ್ಬರು ಶಾಸಕರು ತೆರಳಿದ್ದರು. ರೆಸಾರ್ಟ್ ನಿಂದ ವಿಧಾನ ಸೌಧಕ್ಕೆ ತೆರಳುವಾಗಲೂ ಪ್ರತ್ಯೇಕ ವಾಹನದಲ್ಲಿ ಹೋಗಿದ್ರು. ಸಚಿವ ಡಿಕೆಶಿ ಕಾರಿನಲ್ಲಿ ಕುಳಿತಿದ್ದ ಕಂಪ್ಲಿ ಶಾಸಕ ಗಣೇಶ್ ಇದ್ದರೆ, ಇನ್ನೊಂದು ಕಾರಿನಲ್ಲಿ ಆನಂದ್​ ಸಿಂಗ್​ ಇದ್ದರು.

Comments are closed.