ಕರ್ನಾಟಕ

ಶುಕ್ರವಾರ ಬಿಜೆಪಿಯಿಂದ ಮತ್ತೊಂದು ಆಪರೇಷನ್‌: ನಾಲ್ವರ ರಾಜೀನಾಮೆ?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿರುವ ನಾಲ್ವರು ಶಾಸಕರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ?

ಆಪರೇಷನ್‌ ಕಮಲ ಠುಸ್ಸಾಗಿದೆ ಎಂದು ದೋಸ್ತಿ ಪಕ್ಷದ ಮುಖಂಡರು ಬೀಗುತ್ತಿರುವಾಗಲೇ ದಿಲ್ಲಿಯಿಂದ ಇಂಥದೊಂದು ‘ಸುದ್ದಿ ಮಾರುತ’ ಬೀಸಲಾರಂಭಿಸಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೆ ಮುನ್ನವೇ ನಾಲ್ವರು ಶಾಸಕರು ಸಭಾಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಪಕ್ಷೇತರರು ಮೈತ್ರಿ ಸರಕಾರಕ್ಕೆ ನೀಡಿದ್ದ ವಾಪಸ್‌ ಪಡೆಯುವಂತೆ ಮಾಡಿ ಸಣ್ಣ ಶಾಕ್‌ ನೀಡಿದ್ದ ಬಿಜೆಪಿ, ಶಾಸಕರ ರಾಜೀನಾಮೆಗೆ ಚಾಲನೆ ನೀಡುವ ಮೂಲಕ ಎರಡನೇ ಹಂತದ ‘ಆಪರೇಷನ್‌’ ಆರಂಭಿಸಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕೆ ಪೂರಕವೆಂಬಂತೆ ಬಿಜೆಪಿಯ ಎಲ್ಲ ಶಾಸಕರಿಗೆ ಇನ್ನೂ ಹರಿಯಾಣದ ಗುರುಗ್ರಾಮದಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಮಾಜಿ ಸಚಿವರಾದ ಸೋಮಣ್ಣ, ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ ಮಾತ್ರ ಸಿದ್ದಗಂಗಾ ಶ್ರೀಗಳ ಭೇಟಿಗಾಗಿ ತುಮಕೂರಿಗೆ ಆಗಮಿಸಿದ್ದಾರೆ. ಆದರೆ ಉಳಿದವರು ಎಷ್ಟು ದಿನ ದಿಲ್ಲಿಯಲ್ಲಿ ಇರಬೇಕೆಂಬ ಬಗ್ಗೆ ಇನ್ನೂ ಖಚಿತತೆ ಇಲ್ಲವಾಗಿದ್ದು, ಕಾಂಗ್ರೆಸ್‌- ಜೆಡಿಎಸ್‌ ನಾಯಕರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವುದಕ್ಕೆ ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ಗೆ ಬಿಎಸ್‌ವೈ ಸವಾಲು

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಸಾಮರ್ಥ್ಯ‌ವಿದ್ದರೆ ನಮ್ಮ ಶಾಸಕರನ್ನು ಸೆಳೆಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

”ಶುಕ್ರವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಇದೆ. ಎಷ್ಟು ಜನ ಶಾಸಕರು ಸಭೆಗೆ ಹೋಗುತ್ತಾರೆ ಎಂದು ನೋಡೋಣ. ಆಗ ಇವರ ಬಣ್ಣ ಬಯಲಾಗುತ್ತದೆ. ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ. ಅಶ್ವತ್ಥನಾರಾಯಣ ಮುಂಬಯಿಗೆ ಹೋಗಿದ್ದರೆ ಕಾಂಗ್ರೆಸ್‌ಗೆ ಏನು ಕಷ್ಟ? ನೀವು ನಿಮ್ಮ ಶಾಸಕರನ್ನು ಮೊದಲು ಹಿಡಿತದಲ್ಲಿ ಇಟ್ಟುಕೊಳ್ಳಿ. ನಮ್ಮ ಮೇಲೆ ಏಕೆ ಆರೋಪ ಮಾಡುತ್ತೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

”ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಸೆಳೆಯುತ್ತಿಲ್ಲ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರು ಹಿಂದೆ ಏನು ಮಾಡಿದ್ದರೆಂಬುದು ಗೊತ್ತು. ಅವರ ಹುಳುಕುಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಹಿಂದೆ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮಹಾರಾಷ್ಟ್ರದ ಕಾಂಗ್ರೆಸ್‌ ಶಾಸಕರನ್ನು ಇಲ್ಲಿಗೆ ತಂದು ಕೂಡಿ ಹಾಕಿರಲಿಲ್ಲವೇ? ಆಗ ಮಲ್ಲಿಕಾರ್ಜುನ ಖರ್ಗೆಯವರು ಪ್ರಸ್ತಾಪಿಸುವ ಸಂವಿಧಾನ ಎಲ್ಲಿ ಹೋಗಿತ್ತು? ಮೊನ್ನೆ ಮೊನ್ನೆ ಗುಜರಾತ್‌ ಶಾಸಕರನ್ನು ಬೆಂಗಳೂರಿನಲ್ಲಿ ಇಟ್ಟಿದ್ದಾಗ ಪ್ರಜಾಪ್ರಭುತ್ವದ ಮೌಲ್ಯಗಳು ಎಲ್ಲಿ ಹೋಗಿದ್ದವು” ಎಂದು ಪ್ರಶ್ನಿಸಿದರು.

”ಸಿದ್ದರಾಮಯ್ಯನವರದು ಎಲುಬಿಲ್ಲದ ನಾಲಿಗೆ. ಒಬ್ಬ ಮುಖ್ಯಮಂತ್ರಿಯಾಗಿ 36 ಸಾವಿರ ಮತಗಳ ಅಂತರದಿಂದ ಸೋತವರು ಈಗ ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಕುಟುಂಬದವರನ್ನು ಕಾಪಾಡಿಕೊಳ್ಳಲು ತತ್ತ್ವ- ಸಿದ್ಧಾಂತದ ಮಾತನಾಡುವ ದೇವೇಗೌಡರಂಥ ಸಮಯ ಸಾಧಕ ರಾಜಕಾರಣಿ ರಾಜ್ಯದಲ್ಲಿ ಮತ್ಯಾರೂ ಇಲ್ಲ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದೇ ದೇವೇಗೌಡರು,” ಎಂದು ಆರೋಪಿಸಿದರು.

Comments are closed.