ಕರ್ನಾಟಕ

ಆಪರೇಷನ್ ಕಮಲದ ತೆರೆಮರೆಯಲ್ಲೇ ಕಾಂಗ್ರೆಸ್​ನ ತುರ್ತು ಸಭೆಯಲ್ಲಿ ಇಬ್ಬರು ಅಗ್ರಗಣ್ಯ ಕಾಂಗ್ರೆಸ್ ನಾಯಕರ ಕಿತ್ತಾಟ

Pinterest LinkedIn Tumblr


ಬೆಂಗಳೂರು: ಬಿಜೆಪಿಯಿಂದ ನಿರಂತರವಾಗಿ ಆಪರೇಷನ್ ಕಮಲದ ಸರ್ಕಸ್ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡದೊಡ್ಡ ನಾಯಕರು ಪರಸ್ಪರ ಕಿತ್ತಾಡಿಕೊಂಡ ಘಟನೆಯೂ ನಡೆದಿರುವುದು ಬೆಳಕಿಗೆ ಬಂದಿದೆ. ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ವೈಮನಸ್ಸನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ ಆ ಇಬ್ಬರು ಕಾಂಗ್ರೆಸ್ಸಿಗರಾಗಿದ್ದಾರೆ. ಇವರ ಮಾತಿನ ಚಕಮಕಿಗೆ ಕಾರಣವಾಗಿದ್ದು ಬಿಜೆಪಿಯ ಆಪರೇಷನ್ ಕಮಲ. ಸರಕಾರ ಯಾವಾಗ ಬೇಕಾದರೂ ಬಿದ್ದುಬಿಡುವ ಟೆನ್ಷನ್​ನಲ್ಲಿದ್ದ ಕಾಂಗ್ರೆಸ್ ಪಾಳಯಕ್ಕೆ ಈ ಇಬ್ಬರು ನಾಯಕ ಬಹಿರಂಗ ಜಟಾಪಟಿ ಇನ್ನಷ್ಟು ಆತಂಕ ಉಂಟು ಮಾಡಿತ್ತು.

ಅನಿರೀಕ್ಷಿತ ಬೆಳವಣಿಗೆ:

ಭಾರತೀಯ ಜನತಾ ಪಕ್ಷ ಕೆಲವೇ ತಿಂಗಳ ಅಂತರದಲ್ಲಿ 3 ಬಾರಿ ಆಪರೇಷನ್ ಕಮಲ ನಡೆಸಿ ಸಂಪೂರ್ಣ ಮಕಾಡೆ ಮಲಗಿತ್ತು. ಸಂಕ್ರಾಂತಿ ಹಬ್ಬದಂದು ಕ್ರಾಂತಿ ಮಾಡುತ್ತೇವೆ ಎಂದು ಮತ್ತೊಂದು ಆಪರೇಷನ್ ಕಮಲದ ಸುಳಿವನ್ನು ಬಿಎಸ್​ವೈ ನೀಡಿದಾಗ ಯಾರೂ ಕೂಡ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ರಮೇಶ್ ಜಾರಕಿಹೊಳಿ ಜೊತೆ ಒಂದಿಬ್ಬರು ಶಾಸಕರು ಮಾತ್ರ ಇದ್ದಾರೆಂಬ ಹುಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್​ಗೆ ಸಂಕ್ರಾಂತಿ ಹಬ್ಬವು ನೆಲ ಮುಟ್ಟಿಸಿತು. 12ಕ್ಕೂ ಹೆಚ್ಚು ಶಾಸಕರು ಜಾರಕಿಹೊಳಿ ಬೆನ್ನಿಗೆ ನಿಂತಿದ್ದರು. ಬಿಜೆಪಿ ಕೂಡ ರೆಸಾರ್ಟ್ ರಾಜಕೀಯ ಮಾಡಿತು. ಇಬ್ಬರು ಕಾಂಗ್ರೆಸ್ಸಿಗರು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದರು. ಮೂವರು ಕಾಂಗ್ರೆಸ್ ಶಾಸಕರು ಯಾರ ಕೈಗೂ ಸಿಗದೆ ಮುಂಬೈಗೆ ಹೋದರು. ಬಿಜೆಪಿಯ ಅಶ್ವಥ ನಾರಾಯಣ ಕೂಡ ಅತೃಪ್ತರನ್ನು ಹಿಡಿದಿಟ್ಟುಕೊಳ್ಳಲು ಮುಂಬೈನಲ್ಲೇ ವಾಸ್ತವ್ಯ ಹೂಡಿದರು. ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ವಾಸ್ತವ ಸ್ಥಿತಿಯ ಅರಿವು ಮೂಡಿಸಿದವು.

ವೇಣುಗೋಪಾಲ್ ಸಮ್ಮುಖದಲ್ಲಿ ನಡೆಯಿತು ಹೈಡ್ರಾಮಾ:

ಇದರ ಮಧ್ಯೆ ಎಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷ ಕುಮಾರಕೃಪಾ ಗೆಸ್ಟ್ ಹೌಸ್​ನಲ್ಲಿ ತುರ್ತು ಸಭೆ ನಡೆಸಿತು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಜಿ. ಪರಮೇಶ್ವರ್ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೇಣುಗೋಪಾಲ್ ಅವರು ಆಪರೇಷನ್ ಕಮಲ ಪ್ರಸ್ತಾಪಿಸಿ, ಇದರ ಬಗ್ಗೆ ಮುಂಚೆಯೇ ಗೊತ್ತಾಗಲಿಲ್ವಾ ಎಂದು ದಿನೇಶ್ ಗುಂಡೂರಾವ್ ಅವರನ್ನು ಕೇಳಿದರು. ಇಲ್ಲ ತನಗೆ ಇದು ಗೊತ್ತಾಗಲಿಲ್ಲ ಎಂದು ದಿನೇಶ್ ಉತ್ತರ ಕೊಟ್ಟರು. ಆಗ ಮಧ್ಯಪ್ರವೇಶಿಸಿದ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನ ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷರಾಗಿದ್ದೀರಾ? ಇದು ಮೊದಲೇ ಗೊತ್ತಿರಬೇಕಲ್ವಾ? ನೀವೇನು ಮಾಡುತ್ತಾ ಇದ್ದಿರಿ? ರೆಬೆಲ್ ಶಾಸಕರನ್ನು ಸಂಪರ್ಕಿಸಬೇಕಿತ್ತಲ್ವಾ? ನೀವು ಈ ವಿಚಾರದಲ್ಲಿ ಏನೂ ಮಾಡಿಯೇ ಇಲ್ಲ ಎಂದು ದಿನೇಶ್ ಗುಂಡೂರಾವ್ ವಿರುದ್ಧ ಡಿಕೆಶಿ ಅಸಮಾಧಾನ ಹೊರಹಾಕಿದರು.

ಇದಕ್ಕೆ ಕೆಪಿಸಿಸಿ ಅಧ್ಯಕ್ಷರು ತಿರುಗೇಟು ಕೊಟ್ಟರು. “ಆಪರೇಷನ್ ಕಮಲದ ಬಗ್ಗೆ ಸುಳಿವು ಸಿಗುತ್ತಲೇ ಕೆ.ಸಿ. ವೇಣುಗೋಪಾಲ್ ಅವರನ್ನು ತತ್​ಕ್ಷಣವೇ ಕರೆಸಿದ್ದೇವೆ. ಅತೃಪ್ತ ಶಾಸಕರ ಬಗ್ಗೆ ನಿಗಾ ಇಟ್ಟಿದ್ದು ನಾವೆಯೇ. ತೆರೆಮರೆಯಲ್ಲಿ ಏನೆಲ್ಲಾ ತಂತ್ರಗಳನ್ನು ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದೇನೆ. ನಾನೇನು ಸುಮ್ಮನೆ ಕುಳಿತಿಲ್ಲ. ನಿಮ್ಮ ಹಾಗೆ ಮಾಧ್ಯಮಕ್ಕೆ ಪೋಸು ಕೊಟ್ಟಿಲ್ಲ. ಎಲ್ಲ ಕೆಲಸವನ್ನ ನಾನೇ ಮಾಡಿದ್ದೀನಿ ಅಂತ ಹೇಳಲ್ಲ. ಆದರೆ ನಮ್ಮ ಕೆಲಸ ನಾವು ಮಾಡಿದ್ದೇವೆ” ಎಂದು ದಿನೇಶ್ ಗುಂಡೂರಾವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ದಿನೇಶ್ ಅವರ ಉತ್ತರದಿಂದ ತುಸು ಮೆತ್ತದಾದ ಡಿಕೆ ಶಿವಕುಮಾರ್ ತಮ್ಮ ಮಾತಿನ ವರಸೆ ಬದಲಿಸಿದರು. ತಾನು ಪಕ್ಷಕ್ಕೋಸ್ಕರ ಎಷ್ಟೆಲ್ಲಾ ಕಷ್ಟಪಟ್ಟಿದ್ದೀನಿ. ತಮ್ಮ ಮೇಲೆ ಐಟಿ, ಇಡಿ ದಾಳಿ ಆಗಿದೆ. ಈಗ ಬಿಜೆಪಿಯವರ ಕೈಕಾಲು ಹಿಡಿಯುವ ಪರಿಸ್ಥಿತಿ ಬಂದಿದೆ. ತನ್ನನ್ನು ಡಿಸಿಎಂ ಮಾಡಬೇಕಿತ್ತು. ನೀವು ಈ ಕೆಲಸ ಮಾಡಿಕೊಡಿ ಎಂದು ಡಿಕೆಶಿ ಅವರು ದಿನೇಶ್ ಗುಂಡೂರಾವ್ ಅವರ ಕಾಲೆಳೆದರು.

ಇದನ್ನೂ ಓದಿ: ಒಂದು ತಿಂಗಳಾದರೂ ಪತ್ತೆಯಾಗದ ಮೀನುಗಾರರು; ಹುಡುಕಲು ಇಸ್ರೋ ನೆರವನ್ನೂ ಕೋರದ ಸರಕಾರ; ಆತಂಕದಲ್ಲಿ ಅವಲಂಬಿತ ಕುಟುಂಬಸ್ತರು

ಡಿಕೆಶಿ ಈ ವಾಗ್ದಾಳಿಗೂ ದಿನೇಶ್ ಪ್ರತ್ಯುತ್ತರ ಕೊಟ್ಟರು. ಐಟಿ, ಇಡಿ ದಾಳಿ ವಿಚಾರದಲ್ಲಿ ತಾನು ಏನು ಮಾಡಲು ಸಾಧ್ಯ? ಅವು ತಮ್ಮ ಕೈಲಿಲ್ಲ. ಡಿಸಿಎಂ ಮಾಡುವ ವಿಚಾರವೂ ತಮ್ಮ ಕೈಲಿಲ್ಲ. ಒಂದೇ ಪಕ್ಷದಿಂದ ಇಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲು ಹೇಗೆ ಸಾಧ್ಯ? ಎಂದು ದಿನೇಶ್ ಗುಂಡೂರಾವ್ ಏರಿ ಹೋದರು.

ಈ ವೇಳೆ, ಇಬ್ಬರ ನಡುವಿನ ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆಯೇ ಕೆ.ಸಿ. ವೇಣುಗೋಪಾಲ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸುಮ್ಮನಿಸಿರಿಸಿದರು. ಈ ಬಾರಿಯ ಆಪರೇಷನ್ ಕಮಲವನ್ನು ನಿಲ್ಲಿಸುವ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರು ಕಾಣಿಸದೇ ಇರೋದಕ್ಕೆ ಈ ತೆರೆಮರೆಯ ಡ್ರಾಮಾವೇ ಕಾರಣವಾ ಎಂಬ ಅನುಮಾನವಿದೆ. ರಾಜ್ಯ ರಾಜಕಾರಣ ಹೊತ್ತಿ ಉರಿಯುತ್ತಿದ್ದರೂ ಡಿಕೆಶಿ ಅವರು ಔರಂಗಾಬಾದ್​ಗೆ ಹೋಗಿದ್ದು ಇದೇ ಬೇಸರವಿರಬಹುದಾ?

Comments are closed.