ರಾಷ್ಟ್ರೀಯ

ಅರುಣ್ ಜೇಟ್ಲಿಗೆ ಕ್ಯಾನ್ಸರ್ ಇದೆಯಾ?: ಅಮಿತ್ ಶಾಗೆ ಹಂದಿ ಜ್ವರ

Pinterest LinkedIn Tumblr


ನವದೆಹಲಿ: ಕೆಲವಾರು ವರ್ಷಗಳಿಂದ ಅನಾರೋಗ್ಯಪೀಡಿತರಾಗಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಈ ವೈಯಕ್ತಿಕ ಸಂಕಷ್ಟದ ವೇಳೆ ಅರುಣ್ ಜೇಟ್ಲಿ ಅವರಿಗೆ ಸ್ವಪಕ್ಷೀಯರಿಗಿಂತ ವಿಪಕ್ಷೀಯರಿಂದಲೇ ಟ್ವಿಟ್ಟರ್​ನಲ್ಲಿ ಹೆಚ್ಚು ಶುಭ ಹಾರೈಕೆಗಳು ಬಂದಿವೆ. ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರಂತೂ ಜೇಟ್ಲಿ ಆರೋಗ್ಯ ಚೇತರಿಕೆಗೆ ಹಾರೈಸಿ ಟ್ವೀಟ್ ಮಾಡಿದ್ದಾರೆ. ಜೇಟ್ಲಿ ಅವರೊಂದಿಗೆ ಅವರ ತತ್ವದ ವಿಚಾರವಾಗಿ ದಿನವೂ ಕಿತ್ತಾಡುತ್ತೇವೆ. ಆದರೆ ಅವರು ಬೇಗ ಗುಣಮುಖರಾಗಲೆಂದು ತಾವು ಶುಭ ಹಾರೈಸುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಒಮರ್ ಅಬ್ದುಲ್ಲಾ, ಲಾಲೂ ಪ್ರಸಾದ್ ಯಾದವ್, ಸಲ್ಮಾನ್ ಖುರ್ಷಿದ್ ಮೊದಲಾದವರು ಜೇಟ್ಲಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಪಾಳಯದಲ್ಲಿ ಟ್ವಿಟ್ಟರ್​ನಲ್ಲಿ ಜೇಟ್ಲಿಗೆ ಹಾರೈಸಿದ್ದು ಮ.ಪ್ರ. ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಾತ್ರವೇ.

66 ವರ್ಷದ ಅರುಣ್ ಜೇಟ್ಲಿ ಅವರು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷವಷ್ಟೇ ಅವರು ಕಿಡ್ನಿ ಟ್ರಾನ್ಸ್​ಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರ ಸಂಬಂಧದ ವೈದ್ಯಕೀಯ ತಪಾಸಣೆಗಾಗಿ ಅವರು ಅಮೆರಿಕಕ್ಕೆ ಹೋಗಿದ್ದಾರೆನ್ನಲಾಗಿದೆ.

ಆದರೆ, ಮುಂಬರುವ ಫೆಬ್ರವರಿ 1ರಂದು ಎನ್​ಡಿಎ ಸರಕಾರದ ಕೊನೆಯ ಬಜೆಟ್ ಮಂಡನೆಯಾಗಿದೆ. ಮಧ್ಯಂತರ ಬದಲು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿರುವುದರಿಂದ ಹಣಕಾಸು ಸಚಿವರ ಉಪಸ್ಥಿತಿ ಇರುವುದು ಸೂಕ್ತ. ಒಂದನೇ ತಾರೀಖಿನಷ್ಟರಲ್ಲಿ ಸಚಿವರು ಬಂದು ಬಿಡುತ್ತಾರೆ. ಇದೇ ವಾರಾಂತ್ಯದಲ್ಲೇ ಅವರು ಆಗಮಿಸುವ ಸಾಧ್ಯತೆ ಇದೆ ಎಂದು ಹಣಕಾಸು ಇಲಾಖೆ ಮೂಲಗಳು ಹೇಳುತ್ತಿವೆ.

ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕಳೆದ ವರ್ಷ ಜೇಟ್ಲಿಗೆ ಕಿಡ್ನಿ ಸರ್ಜರಿ ಆಗಿದ್ದಾಗ ಪಿಯೂಶ್ ಗೋಯೆಲ್ ಅವರಿಗೆ ತಾತ್ಕಾಲಿಕವಾಗಿ ಹಣಕಾಸು ಖಾತೆಯ ಜವಾಬ್ದಾರಿ ಕೊಡಲಾಗಿತ್ತು. ಒಂದು ವೇಳೆ ಅರುಣ್ ಜೇಟ್ಲಿ ಅವರು ಬಜೆಟ್​ನಷ್ಟರಲ್ಲಿ ಬರದೇ ಹೋದಲ್ಲಿ ಗೋಯೆಲ್ ಅವರೇ ಬಜೆಟ್ ಮಂಡಿಸುವ ಸಾಧ್ಯತೆ ಇದೆ.

ಜೇಟ್ಲಿಗೆ ಕ್ಯಾನ್ಸರ್ ಇದೆಯಾ?

ಇದೇ ವೇಳೆ, ಕೆಲ ಮಾಧ್ಯಮಗಳಲ್ಲಿ ಜೇಟ್ಲಿ ಅವರಿಗೆ ಕ್ಯಾನ್ಸರ್ ರೋಗ ಬಂದಿದೆ ಎಂಬಂತಹ ವರದಿಗಳು ಪ್ರಕಟವಾಗಿವೆ. ಅರುಣ್ ಜೇಟ್ಲಿ ಅವರಿಗೆ ತೊಡೆಯ ಮೃದು ಸ್ನಾಯು ಕ್ಯಾನ್ಸರ್ ಅಂಟಿದ್ದು, ಅದು ದೇಹವಿಡೀ ಬಹಳ ಬೇಗನೇ ವ್ಯಾಪಿಸುವಂತಹ ಮಾರಕ ರೋಗವಾಗಿದೆ. ಹೀಗಾಗಿ ಅರುಣ್ ಜೇಟ್ಲಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗೊಳ್ಳುವುದು ಅಗತ್ಯವಿದೆಯಂತೆ. ಅದಕ್ಕೆ ಅವರು ತುರ್ತಾಗಿ ಅಮೆರಿಕಕ್ಕೆ ಹೋಗಿರುವುದು ಎಂದು ದಿ ವೈರ್ ಜಾಲತಾಣ ವರದಿ ಮಾಡಿದೆ. ಕಳೆದ ವರ್ಷ ಜೇಟ್ಲಿ ಅವರು ಕಿಡ್ನಿ ಟ್ರಾನ್ಸ್​ಪ್ಲಾಂಟ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಒಂದೇ ವರ್ಷದ ಅಂತರದಲ್ಲಿ ಮತ್ತೊಂದು ದೊಡ್ಡ ಸರ್ಜರಿಗೆ ಒಳಪಡುವುದು ಅಪಾಯಕಾರಿ ಎನ್ನಲಾಗುತ್ತಿದೆ. ಆದರೆ, ಶಸ್ತ್ರಚಿಕಿತ್ಸೆ ಮಾಡದಿದ್ದರೆ ಕ್ಯಾನ್ಸರ್ ಇಡೀ ದೇಹ ವ್ಯಾಪಿಸುತ್ತದೆ. ಆಗ ರೋಗ ಗುಣಪಡಿಸುವುದು ಬಹುತೇಕ ಅಸಾಧ್ಯವೆಂಬಹ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ, ಅರುಣ್ ಜೇಟ್ಲಿ ಅವರು ರಿಸ್ಕ್ ತೆಗೆದುಕೊಂಡು ಕ್ಯಾನ್ಸರ್​ಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಅಮೆರಿಕಕ್ಕೆ ಹೋಗಿದ್ದಾರೆನ್ನಲಾಗಿದೆ.

ಅಮಿತ್ ಶಾಗೆ ಹಂದಿ ಜ್ವರ:
ಇನ್ನು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹಂದಿ ಜ್ವರದಿಂದ ಬಳಲುತ್ತಿದ್ದಾರೆ. ಹಾಗಂತ ಅವರು ಟ್ವೀಟ್ ಮಾಡಿದ್ದು, ಜನರ ಪ್ರೀತಿ ಹಾರೈಕೆಯಿಂದ ತಾನು ಗುಣಮುಖ ಹೊಂದುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Comments are closed.