ಕರ್ನಾಟಕ

ನಿಮ್ಮ ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿದ್ದಾರೆ: ಸಿದ್ಧರಾಮಯ್ಯ

Pinterest LinkedIn Tumblr


ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದ್ದರೆ, ಇತ್ತ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿತಂತ್ರ ಹೂಡಿರುವ ಸೂಚನೆ ನೀಡಿದ್ದಾರೆ. ಬಿಜೆಪಿಯ ಆಪರೇಷನ್​ ಕಮಲದ ಕುರಿತು ನಾವೇನು ಕೈಕಟ್ಟಿ ಕುಳಿತಿಲ್ಲ. ರಾಜ್ಯ ಬಿಜೆಪಿ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. ರಾಜಕೀಯ ಅಖಾಡದಲ್ಲಿ ನಾವೂ ಸಹ ಕುಸ್ತಿ ಆಡಿದವರು. ರಾಜಕೀಯ ಪಟ್ಟುಗಳು ನಮಗೂ ಕೂಡ ಗೊತ್ತಿದೆ ಎಂದು ಈ ಮೂಲಕ ತಿಳಿಸಿದ್ದಾರೆ.

ಆಪರೇಷನ್​ ಕಮಲದ ಮೂಲಕ ಕಾಂಗ್ರೆಸ್​ನ ಅತೃಪ್ತ ಶಾಸಕರನ್ನು ಸೆಳೆದಿರುವ ಬಿಜೆಪಿಗೆ ಪ್ರತಿದಾಳ ಉರುಳಿಸಲು ಕಾಂಗ್ರೆಸ್​ ನಾಯಕರುಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್ ಮಹತ್ವ ಪಡೆದುಕೊಂಡಿದೆ.

ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸರ್ಕಾರ ಬೀಳುವುದು ಖಚಿತ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಾಳೆಯದಲ್ಲಿ ಮುಂದಿನ ನಡೆ ಕುರಿತು ಚರ್ಚೆ ಶುರುವಾಗಿದೆ. ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ರೂಪಿಸಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಹಿರಿಯ ನಾಯಕರುಗಳು ಬಿಜೆಪಿ ನಾಯಕರನ್ನು ಸೆಳೆಯುವ ತೆರೆಮರೆಯ ಪ್ರಯತ್ನ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಜೆಡಿಎಸ್​ ಶಾಸಕರ ಮೇಲೆ ನಿಗಾ ವಹಿಸಲು ಸಚಿವರಾದ ಬಂಡೆಪ್ಪ ಕಾಶಂಪೂರ್, ಸಾ ರಾ ಮಹೇಶ್, ಸಿ ಎಸ್ ಪುಟ್ಟರಾಜು ಅವರಿಗೆ ಸಿಎಂ ಕುಮಾರಸ್ವಾಮಿ ಜವಾಬ್ದಾರಿ ವಹಿಸಿದ್ದಾರೆ. ಜೆಡಿಎಸ್ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜೊತೆಗೆ ಶಾಸಕರ ಜೊತೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.

ಇನ್ನೂ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್​​ ಡಿ ದೇವೇಗೌಡ, ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ. ನಮ್ಮ ಬಳಿ ಸಾಕಷ್ಟು ಸಂಖ್ಯೆಯ ಶಾಸಕರು ಇದ್ದಾರೆ. ಇಂತಹ ರಾಜಕೀಯ ಆಟಗಳನ್ನ ನಾನು ಸಾಕಷ್ಟು ನೋಡಿರುವೆ. ಕಾಂಗ್ರೆಸ್ ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೆ ಎಂದು ಹೇಳಿದ್ದಾರೆ.

ಅಲ್ಲದೆ ಸಂಜೆ ಬಿಜೆಪಿಯ ಮೂವರು ಶಾಸಕರು ಸಿಎಂ ಸಂಪರ್ಕದಲ್ಲಿದ್ದಾರೆ ಎನ್ನಲಾಗಿತ್ತು. ಸಮ್ಮಿಶ್ರ ಸರ್ಕಾರದ ಬೆಂಬಲಕ್ಕೆ ನಾವು ನಿಲ್ಲುವುದಾಗಿ ಮೂವರು ಬಿಜೆಪಿ ಶಾಸಕರು ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಸಿದ್ದರಾಮಯ್ಯ ಕೂಡ ಇದೇ ಮಾತನ್ನು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿರುವುದರಿಂದ ಕಾಂಗ್ರೆಸ್​ ಕೂಡ ಬಿಜೆಪಿ ಶಾಸಕರನ್ನು ತನ್ನತ್ತ ಸೆಳೆದುಕೊಂಡಿದೆ ಎನ್ನಲಾಗುತ್ತಿದೆ.

ಇಬ್ಬರು ಶಾಸಕರ ಬೆಂಬಲ ವಾಪಾಸ್!

ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರು ಪಕ್ಷೇತರ ಶಾಸಕರು ವಾಪಸು ಪಡೆದಿದ್ದಾರೆ. ಈ ಮೂಲಕ​ ಮೂಲಕ ದೋಸ್ತಿ ನಾಯಕರಲ್ಲಿ ಆಪರೇಷನ್​ ಕಮಲದ ನಡುಕ ಹುಟ್ಟಿಸಿದ್ದಾರೆ. ಆದರೆ ಬೆಂಬಲ ಹಿಂಪೆಡೆದರೂ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ದಕ್ಕೆ ಇಲ್ಲ. ಏಕೆಂದರೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ಎರಡೂ ಪಕ್ಷಗಳ ಶಾಸಕರ ಸಂಖ್ಯೆ ಬಹುಮತಕ್ಕೆ ಬೇಕಾದ ಸಂಖ್ಯೆಗಿಂತಲೂ ಹೆಚ್ಚಾಗಿಯೇ ಇದೆ.

ವಿಧಾನಸಭೆಯ ಒಟ್ಟು ಸಂಖ್ಯಾಬಲ 224 ರಲ್ಲಿ ಕಾಂಗ್ರೆಸ್ 80 ಹಾಗೂ ಜೆಡಿಎಸ್ 37 ಶಾಸಕರನ್ನು ಹೊಂದಿದೆ. ಇನ್ನು ಬಿಎಸ್ ಪಿ 1, ಬಿಜೆಪಿ 104 ಹಾಗೂ ಪಕ್ಷೇತರ 2 ಶಾಸಕರು ಇದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದ ಇಬ್ಬರು ಪಕ್ಷೇತರರು ಈಗಾಗಲೇ ಬೆಂಬಲ ವಾಪಸ್ ಪಡೆದಿದ್ದಾರೆ. ಇದರಿಂದ ಮೈತ್ರಿ ಸರ್ಕಾರದ ಸಂಖ್ಯಾಬಲ 120 ರಿಂದ 118 ಕ್ಕೆ ಕುಸಿದಿದೆ. ಒಂದು ವೇಳೆ ಈ ಸರ್ಕಾರ ಪತನವಾಗಬೇಕು ಎಂದರೆ ಆರು ಶಾಸಕರು ರಾಜೀನಾಮೆ ನೀಡಬೇಕಾಗಿದೆ.

Comments are closed.