ಕರ್ನಾಟಕ

ಇಂದು ಕಾಂಗ್ರೆಸ್​ನ​ ಆರು ಶಾಸಕರ ರಾಜೀನಾಮೆ ಸಾಧ್ಯತೆ!

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪಕ್ಷೇತರ ಶಾಸಕರು ವಾಪಸ್ ಪಡೆದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಯಾಗುತ್ತಿದೆ.

ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಾಯಕರೊಂದಿಗೆ ಬೆಳಗ್ಗೆ ಸಭೆ ನಡೆಸಿದ್ದರು. ಮಧ್ಯಾಹ್ನದ ನಂತರ ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆಯುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಮಾರಕೃಪಾ ಅತಿಥಿ ಗೃಹಕ್ಕೆ ತೆರಳಿ ವೇಣುಗೋಪಾಲ್ ಜೊತೆಗೆ ಮುಂದಿನ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇಬ್ಬರು ಪಕ್ಷೇತರರು ತಮ್ಮ ಬೆಂಬಲ ವಾಪಸ್ ಪಡೆದ ತಕ್ಷಣ ಸರ್ಕಾರ ಬೀಳುವುದಿಲ್ಲ. ನಮ್ಮ ಬಳಿ ಬಹುಮತಕ್ಕಿಂತಲೂ ಅಧಿಕ ಸ್ಥಾನಗಳು ಇವೆ. ಸರ್ಕಾರ ಭದ್ರವಾಗಿದೆ. ನಮಗೆ ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ.

ಕೆ.ಸಿ.ವೇಣುಗೋಪಾಲ್ ಮಾತನಾಡಿ, ಪಕ್ಷೇತರ ಶಾಸಕರಿಗೆ ಅವರದ್ದೇ ಆದ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇದೆ. ಅವರು ಸ್ವತಂತ್ರರು. ಬಿಜೆಪಿ ನಮ್ಮ ಶಾಸಕರಿಗೆ ಹಲವು ಆಮಿಷ ಒಡ್ಡುತ್ತಿದೆ. ಇದೊಂದು ನಿಜಕ್ಕೂ ಡರ್ಟಿ ಪಾಲಿಟಿಕ್ಸ್. ಬಿಜೆಪಿ ಕುದುರೆ ವ್ಯಾಪಾರ ಮಾಡ್ತಿದೆ. ಬಿಜೆಪಿ ಏನು ಮಾಡಲು ಹೊರಟಿದೆ? ಅದೊಂದು ರಾಷ್ಟ್ರೀಯ ಪಕ್ಷ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬೀಳೊಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಕುಮಾರಕೃಪಾದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇಬ್ಬರು ಶಾಸಕರು ಬೆಂಬಲ ವಾಪಸ್ ಪಡೆಯುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್​ ಮುಖಂಡರು ತಮ್ಮ ಪಕ್ಷದ ಎಲ್ಲ ಶಾಸಕರನ್ನು ರೆಸಾರ್ಟ್​ನಲ್ಲಿ ವಾಸ್ತವ್ಯ ಮಾಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ನಾಳೆ ಸಂಜೆಯೊಳಗೆ ಎಲ್ಲ ಶಾಸಕರು ಬರುವಂತೆ ಬುಲಾವ್ ನೀಡಿದ್ದಾರೆ.

ಆಪರೇಷನ್ ಕಮಲದ‌ ಆತಂಕ‌ ಹಿನ್ನೆಲೆಯಲ್ಲಿ ಬೆಳಗಾವಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಚಿವ ಸತೀಶ್ ಜಾರಕಿಹೊಳಿಗೆ ಕೆ.ಸಿ ವೇಣುಗೋಪಾಲ್ ಬುಲಾವ್ ನೀಡಿದ್ದಾರೆ. ಹೀಗಾಗಿ ಸತೀಶ್​ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​, ಮೈತ್ರಿ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆಯುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಸರ್ಕಾರ ಅಸ್ಥಿರಗೊಳ್ಳುವುದಿಲ್ಲ. ಶಂಕರ್ ಕೆಲಸ ಕಾರ್ಯ ಆಗಿಲ್ಲ ಅಂತಿದ್ದಾರೆ. ಅವರು ಉಸ್ತುವಾರಿ ಸಚಿವರಾಗಿದ್ದಾಗ ಅದ್ಯಾವ ಕೆಲಸ ಆಗಿಲ್ವೋ ಗೊತ್ತಿಲ್ಲ. ಇಬ್ಬರು ಶಾಸಕರಲ್ಲಿ ಒಬ್ಬರನ್ನು ಸಚಿವರಾಗಿ ಸಹ ಮಾಡಿದ್ವಿ. ಅದ್ಯಾಕೆ ಈ‌ ರೀತಿ ತೀರ್ಮಾನ ಕೈಗೊಂಡಿದ್ದಾರೆ ಅನ್ನೋದು‌ ಗೊತ್ತಿಲ್ಲ. ಯಾರು ಯಾವ ರೀತಿಯ ತಂತ್ರಗಳು ನಡೆಸಿದ್ರು ಸರ್ಕಾರ ಉರುಳಿಸೋಕೆ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಪರೇಷನ್ ಕಮಲ ವಿಚಾರವಾಗಿ ಬೆಳಗ್ಗಿನಿಂದ ಸರಣಿ ಟ್ವೀಟ್​ಗಳ ಮೂಲಕ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ ಅವರು, ಬಿಜೆಪಿ ಆಪರೇಷನ್ ಕಮಲ ಮಾಡ್ತಿದೆ. ಇದು ಹೊಸದೇನಲ್ಲ. ಶಾಸಕ ಶಿವಳ್ಳಿ ಸೇರಿದಂತೆ ಹಲವು ಶಾಸಕರಿಗೆ ಗಾಳ ಹಾಕಿದೆ. ಜೊತೆಗೆ ದೊಡ್ಡ ಮಟ್ಟದ ಹಣದ ಆಮಿಷ ಒಡ್ಡಿದೆ. ಆದ್ರೆ ಬಿಜೆಪಿಗೆ ಯಾವುದೇ ಕಾರಣಕ್ಕೂ ಅಧಿಕಾರ ಸಿಗಲ್ಲ ಎಂದು ಹೇಳಿದ್ದಾರೆ.

ಇನ್ನು ಹರಿಯಾಣದ ಗುರುಗ್ರಾಮದಲ್ಲಿ ಬೀಡುಬಿಟ್ಟಿರುವ ಬಿಜೆಪಿ ಶಾಸಕರೊಂದಿಗೆ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ರೆಸಾರ್ಟ್ ನಲ್ಲಿ ತುರ್ತು ಸಭೆ ಸೇರಿ ಪಕ್ಷೇತರರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ತಡರಾತ್ರಿ ಮತ್ತೆ ಶಾಕಿಂಗ್ ಇದೆ ಕಾದು ನೋಡಿ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಇನ್ನೆರಡು ಮೂರು ದಿನ ರೆಸಾರ್ಟ್​ನಲ್ಲಿಯೇ ಇರಬೇಕು ಎಂದು ಯಡಿಯೂರಪ್ಪ ಶಾಸಕರಿಗೆ ಸೂಚನೆ ನೀಡಿದ್ದಾರೆ.

ನಾಳೆ ಕಾಂಗ್ರೆಸ್​ನ ಆರು ಮಂದಿ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ನಾಗೇಂದ್ರ, ರಮೇಶ್ ಜಾರಕಿಹೊಳಿ, ಮಹೇಶ್ ಕಮಟಹಳ್ಳಿ, ಕಂಪ್ಲಿ ಗಣೇಶ್, ಉಮೇಶ್ ಜಾಧವ್, ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದು ಆಪರೇಷನ್ ಕಮಲದ ಎರಡನೇ ಭಾಗವಾಗಿರಲಿದ್ದು, ಮೂರನೇ ಹಂತದಲ್ಲಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

Comments are closed.