ಕರ್ನಾಟಕ

ವಿಜಯಪುರದಲ್ಲಿ ಸಚಿವ ಮನಗೂಳಿಗೆ ರೈತನಿಂದ ತರಾಟೆ

Pinterest LinkedIn Tumblr


ವಿಜಯಪುರ: ರೈತರು ಜಾನುವಾರು ಸಾಕಿ ಎಂದು ಕಿವಿಮಾತು ಹೇಳಿದ ಸಚಿವರು… ಎಷ್ಟು ರೈತರಿಗೆ ಜಾನುವಾರು ಸಾಕಣೆಗೆ ಮೇವು ವೀಡಿದ್ದೀರಿ ಬಹಿರಂಗ ಪಡಿಸಿ ಎಂದ ರೈತ…. ಬಹಿರಂಗ ಸಭೆಯಲ್ಲಿಯೇ ನಡೆಯಿತು ಸಚಿವ ತರಾಟೆ. ಸ್ವಾಮೀಜಿಗಳು, ಅಧಿಕಾರಿಗಳ ಎದುರಿನಲ್ಲಿಯೇ ಮುಜುಗರಕ್ಕೀಡಾದ ಸಚಿವರು….

ಇದು ವಿಜಯಪುರದಲ್ಲಿ ನಡೆಯುತ್ತಿರುವ ಸಾವಯವ ಮತ್ತು ಸಿರಿಧಾನ್ಯಗಳ ಮೇಳದ ಉದ್ಘಾಟನೆ ಸಮಾರಂಭದಲ್ಲಿ ನಡೆದ ರೈತರ ಆಕ್ರೋಶದ ಪ್ರಸಂಗ. ಈ ಮೇಳವನ್ನು ಉದ್ಘಾಟಿಸಿದ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ತಮ್ಮ ಭಾಷಣದಲ್ಲಿ ಇತ್ತೀಚೆಗೆ ತಾವು ಸಿರಿವಂತ ರೈತರೊಬ್ಬರ ಮನೆಗೆ ಹೋಗಿದ್ದಾಗ ಚಹಾ ಮಾಡಲು ಒಂದು ಗಂಟೆ ಕಾಯಿಸಿದರು. ಆ ರೈತನ ಬಳಿ ನೂರಾರು ಎಕರೆ ಜಮೀನಿದ್ದರೂ ಆಕಳು, ಎಮ್ಮೆ ಇಲ್ಲದ ಕಾರಣ ಹಾಲು ತರಲು ಮನೆಯಾಳನ್ನು ಹೊರಗಡೆ ಕಳುಹಿಸಿದ್ದರು. ಹೀಗಾಗಿ ರೈತರು ಜಾನುವಾರುಗಳ ಸಾಕಣೆ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಇದನ್ನೇ ಕಾಯುತ್ತಿದ್ದ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ರೈತ ನಿಂಗಪ್ಪ ಗಿರಿಮಲ್ಲಪ್ಪ ಮಸಳಿ ಅವರು, “ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ನೀವು ಎಷ್ಟು ರೈತರಿಗೆ ಮೇವು ಕೊಟ್ಟಿದ್ದೀರಿ?” ಎಂದು ಪ್ರಶ್ನಿಸಿದರು. ಆಗ ಸಚಿವರು ಇದು ಬಹಿರಂಗ ಸಭೆ. ಇಲ್ಲಿ ಈ ವಿಷಯ ಚರ್ಚಿಸಬೇಡಿ. ಐಬಿಗೆ ಬಂದು ಭೇಟಿ ಮಾಡಿ. ಮಾಹಿತಿ ನೀಡಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಆಗ ಪಿತ್ತ ಮತ್ತಷ್ಟು ನೆತ್ತಿಗೇರಿಸಿಕೊಂಡ ರೈತ ನೀವು ಹೀಂಗ ಹೇಳಿದರ ರೈತರು ಸತ್ತು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಆಗ, ಕಾರ್ಯಕ್ರಮ ಸಂಘಟಕರು ಈ ರೈತನನ್ನು ತಡೆಯಲು ಮುಂದಾದಾಗ, ಇತರ ರೈತರು, ಅವರಿಗೆ ಮಾತನಾಡಲು ಬಿಡಿ. ಸಮಸ್ಯೆ ಹೇಳುತ್ತಿದ್ದಾರೆ. ಸಚಿವರು ಉತ್ತರಿಸಲಿ ಎಂದು ಆ ರೈತನಿಗೆ ಬೆಂಬಲವಾಗಿ ನಿಂತರು. ಆಗ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು.

ಎಂಸಿ ಮನಗೂಳಿಗೆ ಪ್ರಶ್ನೆ ಮಾಡಿದ ರೈತರು

ಬಳಿಕ ವೇದಿಕೆಯಲ್ಲಿಯೇ ಮಾತನಾಡಿದ ಸಚಿವ ಎಂ. ಸಿ. ಮನಗೂಳಿ, ಮೂರ್ನಾಲ್ಕು ದಿನಗಳ ಹಿಂದೆ ಸಚಿವ ಸಂಪುಟ ಉಪಸಮಿತಿ ಬರ ಅಧ್ಯಯನ ನಡೆಸಿದ್ದೇವೆ. ಸಭೆ ಮಾಡಿ ಮೇವು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಉತ್ತರ ನೀಡಿದರು.

ಇದಾದ ನಂತರ ನ್ಯೂಸ್18 ಕನ್ನಡ ವಾಹಿನಿ ಜೊತೆ ಮಾತನಾಡಿದ ರೈತ ನಿಂಗಪ್ಪ ಗಿರಿಮಲ್ಲಪ್ಪ ಮಸಳಿ, ದನ-ಕರು ಬದುಕಬೇಕಾದರೆ ಸಚಿವರು ಈ ಬರದಲ್ಲಿ ಯಾವ ಸಹಾಯ ಮಾಡಿದ್ದಾರೆ ಎಂದು ಕೇಳಿದರೆ ಸಚಿವರು ಉತ್ರರ ನೀಡಿಲ್ಲ. ಜಾನುವಾರುಗಳನ್ನು ಬದುಕಿಸುವ ಕೆಲಸ ಸರಕಾರ ಮಾಡಬೇಕು. ಆದರೆ, ಬರೀ ಹೇಳಿ ಹೋಗುತ್ತಿದ್ದಾರೆ. ಸಾಲ ಮನ್ನಾ ಮಾಡುವುದಾಗಿ ಹೇಳಿ ಆರು ತಿಂಗಳು ಕಳೆದರೂ, ಅದು ಕೇವಲ ಬೂಟಿನಲ್ಲಿ ಮನ್ನಾ ಆಗಿದೆ ಅಷ್ಟೇ, ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಡೆದಾಡುವ ದೇವರೆಂದೇ ಹೆಸರಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಎದುರು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದು ಮಾತ್ರ ಸಚಿವರಿಗಷ್ಟೇ ಅಲ್ಲ, ಕಾರ್ಯಕ್ರಮ ಸಂಘಟಕರಿಗೂ ಇರಿಸು ಮುರಿಸು ಉಂಟು ಮಾಡಿದ್ದಂತೂ ನಿಜ.

Comments are closed.