ಕರ್ನಾಟಕ

ದುಬಾರಿಯಾಗಲಿರುವಕೇಬಲ್ ದರ?

Pinterest LinkedIn Tumblr


ಮೈಸೂರು: ತಮಗೆ ಅಗತ್ಯವೋ ಇಲ್ಲವೋ ಒಂದಷ್ಟು ಚಾನಲ್‌ಗಳಿಗೆ ನಿಗದಿತ ಶುಲ್ಕ ನೀಡಿ ಕೆಲ ಚಾನಲ್‌ಗಳನ್ನಷ್ಟೇ ವೀಕ್ಷಿಸುತ್ತಿದ್ದ ಗ್ರಾಹಕರಿಗೆ ಇನ್ನು ಮುಂದೆ ತಮಗೆ ಬೇಕಾದ ಚಾನಲ್‌ಗಳಿಗೆ ಮಾತ್ರ ಹಣ ನೀಡಿ ನೋಡುವ ಅವಕಾಶ ದೊರೆತಿದೆ. ಇದು ಗ್ರಾಹಕರಿಗೆ ಹೊರೆಯೋ, ಲಾಭವೋ ಕಾದುನೋಡಬೇಕಿದೆ.
ಕೇಬಲ್ ಆಪರೇಟರ್‌ಗಳು ಗ್ರಾಹಕರಿಂದ ಹಣ ಪಡೆದು ಬೇಕು, ಬೇಡದ ಚಾನಲ್‌ಗಳನ್ನು ನೀಡುತ್ತಿದ್ದಾರೆ. ಇದರಿಂದ ಟಿವಿ ನೋಡಲು ಕಿರಿಕಿರಿ ಎನ್ನುವ ಭಾವನೆ ಕೆಲ ಗ್ರಾಹಕರಲ್ಲಿದ್ದರೆ, ಮಧ್ಯಮ, ಬಡ ವರ್ಗದ ಗ್ರಾಹಕರಿಗೆ ಸರ್ಕಾರದ ಈ ವ್ಯವಸ್ಥೆ ದುಬಾರಿಯಾಗಲಿದೆ. 200ರಿಂದ 300 ರೂ. ನೀಡಿ ತಿಂಗಳ ಕಾಲ 250ಕ್ಕೂ ಹೆಚ್ಚಿನ ಚಾನಲ್‌ಗಳನ್ನು ವೀಕ್ಷಿಸುತ್ತಿದ್ದವರು ಇನ್ನು ಮುಂದೆ ಅಷ್ಟು ಚಾನಲ್‌ಗಳನ್ನು ವೀಕ್ಷಿಸಲು ದುಬಾರಿ ಶುಲ್ಕ ತೆರಬೇಕು ಎನ್ನುವ ವಾದ ಕೇಬಲ್ ಆಪರೇಟರ್‌ಗಳಲ್ಲಿದೆ. ಈ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಉದ್ಯೋಗ ಕಸಿಯಲಿದೆ
ಕೇಬಲ್ ವ್ಯವಹಾರವನ್ನೇ ನಂಬಿರುವವರು ದೇಶಾದ್ಯಂತ ಲಕ್ಷಾಂತರ ಜನರಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ಹೊಸನೀತಿಯಿಂದ ಸುಮಾರು 10 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಮೈಸೂರಿನಲ್ಲಿ 3 ಲಕ್ಷಕ್ಕೂ ಹೆಚ್ಚು ಕೇಬಲ್ ಸಂಪರ್ಕವಿದ್ದು, ಯಾವುದೇ ಸ್ಪಷ್ಟ ನಿರ್ಧಾರ ಇಲ್ಲದೆ ಕೇಬಲ್ ಆಪರೇಟರ್, ಗ್ರಾಹಕರ ನಡುವೆ ಗೊಂದಲ ಉಂಟಾಗುತ್ತಿದೆ.
ಎಂ.ಮೋಹನ್‌ಕುಮಾರ್‌ಗೌಡ ಅಧ್ಯಕ್ಷರು, ಮೈಸೂರು ಜಿಲ್ಲಾ ಕೇಬಲ್ ಟಿವಿ ಆಪರೇಟರ್ ವೆಲ್‌ಫೇರ್ ಅಸೋಸಿಯೇಷನ್

ಗ್ರಾಹಕರಿಗೆ ದುಬಾರಿ
ಸರ್ಕಾರದ ಈ ನೀತಿಯಿಂದ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೆ ಕೇಬಲ್ ವ್ಯವಹಾರವನ್ನೇ ನಂಬಿರುವ ಆಪರೇಟರ್‌ಗಳಿಗೆ ಇದು ಜೀವನದ ಮೇಲೆ ಬರೆ ಎಳೆದಂತಾಗಿದೆ. ಕೇಬಲ್ ಸಂಪರ್ಕಕ್ಕೆ 250 ರಿಂದ 300 ರೂ. ನೀಡುತ್ತಿದ್ದ ಗ್ರಾಹಕರು 300 ರಿಂದ 400 ಚಾನಲ್‌ಗಳನ್ನು ವೀಕ್ಷಿಸುತ್ತಿದ್ದರು. ಇನ್ನು ಮುಂದೆ ಅಂತಹ ಅವಕಾಶ ಇರುವುದಿಲ್ಲ.
ಮಹೇಶ್, ಕೇಬಲ್ ಆಪರೇಟರ್

ಕಾದು ನೋಡಬೇಕಿದೆ
ಕೇಬಲ್ ಆಪರೇಟರ್‌ಗಳಿಗೆ ಯಾವ ರೀತಿ ಗ್ರಾಹಕರಿಗೆ ಅವರಿಗಿಚ್ಛೆಯ ಚಾನಲ್‌ಗಳನ್ನು ನೀಡಬೇಕು ಎನ್ನುವ ಗೊಂದಲವಿದೆ. ಗ್ರಾಹಕರಿಗೆ ಈಗಾಗಲೇ ಉತ್ತಮ ಸೇವೆ ನೀಡುತ್ತಿದ್ದು, ಮುಂದೆಯೂ ಉತ್ತಮ ಸೇವೆ ನೀಡಬೇಕಾದರೆ ಪಾರದರ್ಶಕತೆ ಇರಬೇಕು. ಹಾಗಾಗಿ ಕಾಯ್ದೆಯನ್ನು ಕಾಯ್ದು ನೋಡಬೇಕಿದೆ.
ಕೃಷ್ಣ ಕೇಬಲ್ ಆಪರೇಟರ್

100 ಚಾನಲ್‌ಗಳು ಉಚಿತ
ನೂತನ ವ್ಯವಸ್ಥೆಯ ಪ್ರಕಾರ, ಕೇಬಲ್ ಟಿವಿ ನಿಯಂತ್ರಕರು ಗ್ರಾಹಕರಿಗೆ 100 ಉಚಿತ ಚಾನಲ್‌ಗಳನ್ನು ನೀಡಬೇಕು. ಅದಕ್ಕೆ 130 ರೂ. ಪಡೆಯಬೇಕು. ಉಳಿದಂತೆ ಗ್ರಾಹಕರು ಪಡೆಯುವ ಯಾವುದೇ ಚಾನಲ್‌ಗಳ ಗುಚ್ಛವನ್ನು ಅವರಿಗೆ ಒದಗಿಸಿ, ಅದಕ್ಕಾಗಿ ನಿಗದಿಪಡಿಸಲಾದ ದರವನ್ನು ಪಡೆಯಬೇಕು.
ಕಾಂತ ಕೇಬಲ್ ಆಪರೇಟರ್

ಸಮಯ ನೀಡಲಾಗಿದೆ
ಹೊಸ ವ್ಯವಸ್ಥೆಗೆ ವರ್ಗಾಯಿಸಿಕೊಳ್ಳಲು ಜ.31ರವರೆಗೆ ಸಮಯ ನೀಡಲಾಗಿದೆ. ಗ್ರಾಹಕರಿಗೆ ಹೊಸ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಲು, ಕೇಬಲ್ ಟಿವಿ ಆಪರೇಟರ್‌ಗಳಿಗೆ ಹೊಸ ವ್ಯವಸ್ಥೆಯ ಜಾರಿಗೆ ಒಗ್ಗಿಕೊಳ್ಳುವುದಕ್ಕಾಗಿ ಸಮಯಾವಧಿಯನ್ನು ವಿಸ್ತರಿಸಲಾಗಿದೆ.
ಮಹದೇವಸ್ವಾಮಿ ಗ್ರಾಹಕರು, ಜೆಎಸ್‌ಎಸ್ ಲೇಔಟ್

ಗ್ರಾಹಕರಿಗೆ ತೊಂದರೆಯಾಗಲಿದೆ
ಇಂದು ಟಿವಿ ಪ್ರತಿ ಮನೆಯ ಅವಶ್ಯಕ ವಸ್ತುಗಳಲ್ಲೊಂದಾಗಿದೆ. ಹೀಗಾಗಿ ಟಿವಿ ಸಂಪರ್ಕ ವ್ಯವಸ್ಥೆಯಲ್ಲಿ ಆಗುವ ವ್ಯತ್ಯಾಸ ಬದುಕಿನ ಮೇಲೂ ಆಗುತ್ತದೆ. ಹೊಸ ವ್ಯವಸ್ಥೆಯಿಂದ ಆಗುವ ಅನುಕೂಲಗಳ ಜತೆಗೆ, ಗ್ರಾಹಕನಿಗೆ ಉಂಟಾಗುವ ಸಂಭಾವ್ಯ ತೊಂದರೆಯ ಬಗ್ಗೆಯೂ ಚಿಂತಿಸಬೇಕು.
ದಿಲೀಪ್ ಗ್ರಾಹಕರು, ಚಾಮುಂಡಿಪುರಂ

ಜನರ ಜೇಬಿಗೆ ಭಾರವಾಗದಿರಲಿ
ಈ ಹಿಂದೆ ಅನಲಾಗ್ ವ್ಯವಸ್ಥೆಯಿಂದ ಡಿಜಿಟಲ್ ವ್ಯವಸ್ಥೆಗೆ ಕೇಬಲ್ ಟಿವಿ ವ್ಯವಸ್ಥೆಯನ್ನು ಬದಲಾವಣೆ ಮಾಡಿದಾಗ ಸೆಟ್‌ಟಾಪ್ ಬಾಕ್ಸ್‌ಗಳನ್ನು ಪರಿಚಯಿಸಲಾಗಿತ್ತು. ಆಗಲೂ ಚಾನಲ್‌ಗಳ ಆಯ್ಕೆಯ ಹಕ್ಕು ವೀಕ್ಷಕನ ಪಾಲಿಗೆ ಬರುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಸೆಟ್‌ಟಾಪ್ ಬಾಕ್ಸ್‌ಗೆ ಸಾವಿರಾರು ರೂ. ನೀಡಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಇದೂ ಹಾಗೆ ಆಗಬಾರದು.
ಧನುಷ್ ಗ್ರಾಹಕ, ಅಗ್ರಹಾರ

ಹೊರೆಯಾಗದಂತೆ ಮಾಡಬೇಕು
ಸೆಟ್‌ಟಾಪ್ ಬಾಕ್ಸ್ ಬಂದಾಗ ಕೇಬಲ್ ಆಪರೇಟರ್‌ಗಳಿಗೆ ಲಾಭವಾಯಿತು. ಈಗಿನ ಹೊಸ ದರ ವ್ಯವಸ್ಥೆಯಲ್ಲೂ ಕೆಲವರು ಗ್ರಾಹಕನಿಗೆ ಇಂತಹದ್ದೇ ಚಾಲನ್‌ಗಳನ್ನು ಹಾಕಿಕೊಳ್ಳಬೇಕು ಎಂದು ಕಡ್ಡಾಯ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿ ಗ್ರಾಹಕರಿಗೆ ಹೆಚ್ಚಿನ ದರ ಹೊರೆಯಾಗದಂತೆ ನೋಡಿಕೊಳ್ಳಬೇಕಿದೆ.
ರಕ್ಷಿತ್ ಗ್ರಾಹಕ, ವಿದ್ಯಾರಣ್ಯಪುರಂ

ಏನು ಮಾಡುವುದು ತಿಳಿಯುತ್ತಿಲ್ಲ
ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಸಿನಿಮಾಗಳಿಗೆ ಹೋಗುವುದು ದುಬಾರಿಯಾಗಿದೆ. ಇಂತಹ ವ್ಯವಸ್ಥೆಯಲ್ಲಿ ಜನರು ಮನರಂಜನೆಗಾಗಿ ಟಿವಿಯನ್ನು ಅವಲಂಬಿಸಿದ್ದಾರೆ. ಇದರ ಮೇಲೂ ಹೆಚ್ಚು ದರ ವಿಧಿಸಿದರೆ ಏನು ಮಾಡಬೇಕೆಂದು ತಿಳಿಯುವುದೇ ಇಲ್ಲ.
ಕೆ.ಸಂತೋಷ್‌ಕುಮಾರ್ ಗ್ರಾಹಕ, ಬಸವೇಶ್ವರ ರಸ್ತೆ

ದರದ ಗೊಂದಲ ಬಗೆಹರಿಬೇಕು
ಕೇಬಲ್ ಆಪರೇಟರ್‌ಗಳು ತಮಗೆ ಇಚ್ಛೆಯಾದ, ತಮಗೆ ಲಾಭ ಬರುವ ಚಾನಲ್‌ಗಳನ್ನು ನೀಡುತ್ತಿದ್ದರು. ಸರ್ಕಾರ ಈಗ ಜಾರಿಗೆ ತರಲು ಮುಂದಾಗಿರುವ ನೀತಿಯಿಂದ ತಮಗೆ ಬೇಕಾದ ಚಾನಲ್‌ಗಳನ್ನು ಮಾತ್ರ ನೋಡುವ ಅವಕಾಶ ದೊರೆಯುವುದರಿಂದ ಜನರಿಗೆ ಅನುಕೂಲವಾಗಲಿದೆ. ದರದ ಬಗ್ಗೆ ಈಗ ಅನುಮಾನಗಳು ಮೂಡಿವೆ.
ಚಂದನ್ ಗ್ರಾಹಕ, ರಾಮಾನುಜ ರಸ್ತೆ

ಸಾಧಕ, ಬಾಧಕ ಚಿಂತಿಸಲಿ
ಜನರಿಗೆ ಈಗ ಟಿವಿಯೇ ಮನರಂಜನೆ ಕೇಂದ್ರವಾಗಿದೆ. ಇದನ್ನು ಬಿಟ್ಟು ಇರಲಾರದಷ್ಟು ಬಾಂಧವ್ಯ ಬೆಳೆದಿದೆ. ಆದ್ದರಿಂದ ಸರ್ಕಾರ ಹೊಸ ಯೋಜನೆ ಜಾರಿಗೆ ತರುವ ಮುನ್ನ ಅದರ ಸಾಧಕ, ಬಾಧಕಗಳ ಬಗ್ಗೆಯೂ ಚಿಂತಿಸಬೇಕು.
ಜಯಶಂಕರ್ ಗ್ರಾಹಕ, ಜಯನಗರ

ದರ ಏರಿಕೆಯಾಗಲಿದೆ
300-350 ರೂ.ಗಳಿಗೆ ಪ್ರಸ್ತುತ 400ಕ್ಕೂ ಅಧಿಕ ಚಾನಲ್‌ಗಳನ್ನು ಕೇಬಲ್ ಆಪರೇಟರ್‌ಗಳು ನೀಡುತ್ತಿದ್ದಾರೆ. ಹೊಸ ವ್ಯವಸ್ಥೆ ಜಾರಿಗೆ ಬಂದರೆ ದರ ಹೆಚ್ಚು ಅಥವಾ ಕಡಿಮೆಯಾಗಲಿದೆ. ಎಲ್ಲ ರೀತಿಯ ಚಾನಲ್ ಬೇಕು ಎಂದಾದರೆ 500 ರಿಂದ 1500 ರೂ. ಪಾವತಿ ಮಾಡಬೇಕಾಗಿದೆ.
ಮೋಹನ್ ಗ್ರಾಹಕ, ಗೌರಿಶಂಕರನಗರ

Comments are closed.