ರಾಷ್ಟ್ರೀಯ

ಲೋಕಸಭಾ ಚುನಾವಣೆಗೆ ಬಿಜೆಪಿ- ಕಾಂಗ್ರೆಸ್ ನಿಂದ ತೆರೆಮರೆ ಸಿದ್ಧತೆ

Pinterest LinkedIn Tumblr


ಲೋಕಸಭಾ ಚುನಾವಣೆಗೆ ಬಿಜೆಪಿ- ಕಾಂಗ್ರೆಸ್ ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ನಡೆಸಿವೆ. ವಿಶೇಷವಾಗಿ ಕಲಬುರಗಿ ಮೀಸಲು ಕ್ಷೇತ್ರವನ್ನು ಗಂಭೀರ ಪರಿಗಣಿಸಿರುವ ಕೇಸರಿ ಪಡೆ, ಪಕ್ಕಾ ಮಾಸ್ಟರ್ ಪ್ಲ್ಯಾನ್​ನ್ನೊಂದಿಗೆ ಪ್ರಬಲ ಅಭ್ಯರ್ಥಿ ಹುಡುಕಾಟಕ್ಕೆ ಮುಂದಾಗಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಕೆಲವರು ಬಹಿರಂಗ, ಮತ್ತೆ ಕೆಲವರು ಒಳಗೊಳಗೆ ಕುದಿಯುತ್ತಿದ್ದಾರೆ. ಹೀಗಾಗಿ ಅಸಮಾಧಾನದ ಕಟ್ಟೆ ಯಾವ ಸಂದರ್ಭದಲ್ಲಾದರೂ ಒಡೆಯಬಹುದೆಂಬ ಅನುಮಾನ ಮೂಡಿಸಿದೆ.

ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಅವರಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಇತ್ತು. ನಿರಂತರ ಎರಡು ಬಾರಿ ಆಯ್ಕೆಯಾಗಿರುವ ಡಾ.ಜಾಧವ್ ಹೆಸರು ಸಂಪುಟ ವಿಸ್ತರಣೆಯಲ್ಲಿ ಪರಿಗಣಿಸದ್ದರಿಂದ ಬೇಸರ ಮಾಡಿಕೊಂಡಿದ್ದು, ಕ್ಷೇತ್ರದ ಜನ ಅದರಲ್ಲೂ ವಿಶೇಷವಾಗಿ ಪ್ರಬಲವಾಗಿರುವ ಲಂಬಾಣಿಗರು ರೊಚ್ಚಿಗೆದ್ದಿದ್ದಾರೆ.

ಇನ್ನೊಂದೆಡೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅವರನ್ನು ಸೆಳೆಯಲು ಬಿಜೆಪಿಯೊಳಗೆ ತಂತ್ರಗಾರಿಕೆ ನಡೆದಿದೆ. ಬಿಜೆಪಿಯ ಕೆಲ ಮುಖಂಡರು ಭೇಟಿ ಮಾಡಿ ಚರ್ಚಿಸಿದ್ದಾರೆ. ಆದರೆ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಕಮಲ ಪಡೆ ವಿರುದ್ಧ ಪಾಟೀಲ್ ಹರಿಹಾಯ್ದಿದ್ದಾರೆ.

ಜಾಧವ್ ಅಸಮಾಧಾನ

ಮಾಧ್ಯಮದ ಎದುರು ಬೇಸರ ವ್ಯಕ್ತಪಡಿಸಿರುವ ಶಾಸಕ ಡಾ.ಜಾಧವ್, ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸಬಹುದೆಂಬ ನಿರೀಕ್ಷೆಯನ್ನು ಪಕ್ಷ ಹುಸಿ ಮಾಡಿದೆ. ತಮಗೆ ಜನರೇ ಹೈಕಮಾಂಡ್. ಬೇರೆ ಪಕ್ಷದವರು ಕರೆಯುತ್ತಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ನಿಧರ್ಾರ ನೋವು ತರಿಸಿದೆ ಎಂದು ಅತೃಪ್ತಿ ಹೊರಹಾಕಿದ್ದಾರೆ.

ಕಲಬುರಗಿ ಲೋಕಸಭೆ ಮೀಸಲು ಕ್ಷೇತ್ರದಿಂದ ಲಂಬಾಣಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ ಮಾತಿಗೂ, ಅನ್ಯ ಪಕ್ಷದವರು ಕರೆಯುತ್ತಿದ್ದಾರೆ ಎಂಬ ಡಾ.ಜಾಧವ್ ಹೇಳಿಕೆಗೂ ಎಲ್ಲೋ ಒಂದು ಕಡೆ ಲಿಂಕ್ ಆಗುತ್ತಿದೆ. ಆದರೆ ಈ ಇಬ್ಬರ ಮಾತಿನ ಮರ್ಮ ಸ್ಪಷ್ಟವಾಗಿಲ್ಲ.

ತಮಗೂ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರಲ್ಲೂ ಅಸಮಾಧಾನ ಹೊಗೆಯಾಡಿತ್ತು. ಆದರೆ ದಿಲ್ಲಿ ಪ್ರತಿನಿಧಿ ಎಂಬ ಹುದ್ದೆ ಮೂಲಕ ಹೈಕಮಾಂಡ್ ಅತೃಪ್ತಿಗೆ ತಾತ್ಕಾಲಿಕ ಬ್ರೇಕ್ ಹಾಕಿದೆ.

ರಾಹುಲ್ ಖಡಕ್ ಸಂದೇಶ

ಸಂಪುಟ ವಿಸ್ತರಣೆಯಲ್ಲಿ ಅಸಮಾಧಾನವಾಗಿದೆ ಎಂದು ಪಕ್ಷದ ಶಾಸಕರು ರಾಜೀನಾಮೆ ನೀಡಲು ಮುಂದಾದರೆ, ಪಕ್ಷ ಚುನಾವಣೆಗೆ ಹೋಗಲು ರೆಡಿ ಇದೆ ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಖಡಕ್ ಸಂದೇಶ ರವಾನಿಸಿದ್ದಾರೆ. ಹಾಗೆ ನೋಡಿದರೆ, ಕಲಬುರಗಿಯಲ್ಲಿ ಖರ್ಗೆ ಸಾಹೇಬರನ್ನು ಕೆಡವಲು ಕೇಸರಿಪಡೆ ಕಮಾಂಡ್ ನಿರ್ಧರಿಸಿದೆ. ಅದಕ್ಕಾಗಿ ಬಿಜೆಪಿ ಒಂದರ ಮೇಲೊಂದು ಪ್ಲ್ಯಾನ್ ಮಾಡುತ್ತಿದೆಯಾ? ಅಥವಾ ಸರ್ಕಾರ ರಚನೆಗೆ ಜಾಧವ್ ಅವರಿಗೆ ಬಲೆ ಬೀಸುತ್ತಿದೆಯಾ ಎಂಬುದು ಸದ್ಯದ ಸಸ್ಪೆನ್ಸ್.

ಬಿಜೆಪಿಗೆ ಬರುವಂತೆ ಆ ಪಕ್ಷದ ಮುಖಂಡರು ತಮ್ಮನ್ನು ಸಂಪರ್ಕಿಸಿದ್ದು ನಿಜ. ಆದರೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನಿರಾಕರಿಸಿ, ಈಗ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡೋಣ ಬನ್ನಿ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ.

| ಎಂ.ವೈ.ಪಾಟೀಲ್ ಶಾಸಕ ಅಫಜಲಪುರ
ಸಂಪುಟ ವಿಸ್ತರಣೆಯಲ್ಲಿ ಅವಕಾಶ ದೊರೆಯುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಪಕ್ಷದ ಹೈಕಮಾಂಡ್ ಅನ್ಯಾಯ ಮಾಡಿದೆ. ಕ್ಷೇತ್ರದ ಜನತೆ, ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಬಾರಿ ಶಾಸಕನಾಗಿರುವ ತಮಗೆ ಅವಕಾಶ ನೀಡದಿರುವುದು ಬೇಸರ ತರಿಸಿದೆ.

| ಡಾ.ಉಮೇಶ ಜಾಧವ್ ಶಾಸಕ ಚಿಂಚೋಳಿ

Comments are closed.