ಕರ್ನಾಟಕ

ಕಾಂಗ್ರೆಸ್​​ನ ಅತೃಪ್ತರು ನಮ್ಮ ಜೊತೆ ಸಂಪರ್ಕದಲಿಲ್ಲ; ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ. ಅತೃಪ್ತ ಶಾಸಕರನ್ನು ಖರೀದಿಗಾಗಿ 25 ರಿಂದ 30 ಕೋಟಿ ರೂ ನೀಡಲು ಬಿಜೆಪಿ ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಈಗಷ್ಟೇ ಆರೋಪಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಪಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯ ತಾರಕಕ್ಕೇರಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ನಾವು ಯಾವುದೇ ಕಾಂಗ್ರೆಸ್​​ ಅತೃಪ್ತರ ಜೊತೆಗೆ ಸಂಪರ್ಕದಲ್ಲಿಲ್ಲ. ಈ ಊಹಾಪೋಹಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಬಿಎಸ್​​ವೈ ಚರ್ಚೆಗೆ ತೆರೆ ಎಳೆದಿದ್ಧಾರೆ.

ಮಂತ್ರಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ವರಿಷ್ಠರ ವಿರುದ್ದ ಮುನಿಸಿಕೊಂಡಿರುವ ಅತೃಪ್ತ ಶಾಸಕರು ಯಾವುದೇ ಸಂದರ್ಭದಲ್ಲಿಯೂ ಬಿಜೆಪಿ ನಾಯಕರನ್ನು ಭೇಟಿ ಮಾಡಬಹುದು ಎಂದು ವದಂತಿ ಹಬ್ಬಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಇಂದು ಕಾಂಗ್ರೆಸ್‍ನ ಭಿನ್ನಮತೀಯರ ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ರೀತಿಯ ವಿಚಾರ ನನ್ನ ಕಿವಿಗೆ ಬಿದ್ದಿಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಬಿಎಸ್​​ ಯಡಿಯೂರಪ್ಪನವರು ದೆಹಲಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ಧಾರೆ.

ಕಾಂಗ್ರೆಸ್​​ ಅತೃಪ್ತ ಶಾಸಕರ ಜೊತೆಗೆ ನಾವು ಸಂಪರ್ಕ ಹೊಂದಿಲ್ಲ. ಯಾರು ಕೂಡ ನಮ್ಮನ್ನು ಸಂಪರ್ಕ ಮಾಡಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ರೀತಿಯ ಊಹಾಪೋಹ ಸುದ್ದಿಗಳೇ ಬರುತ್ತಿವೆ. ಬಿಜೆಪಿ ಘಟಕಗಳ ರಾಜ್ಯಾಧ್ಯಕ್ಷರ ಸಭೆ ಕರೆದಿರುವುದರಿಂದ ನಾನು ಇಲ್ಲಿಗೆ ಬಂದಿದ್ದೇನೆ. ಇದರ ಹೊರತು ನಾವು ಯಾವುದೇ ಉದ್ದೇಶದೊಂದಿಗೆ ಇಲ್ಲಿ ಸೇರಿಲ್ಲ. ಹಾಗೆಯೇ ನಮ್ಮ ವಿರುದ್ಧ ನೀವು ಬಿತ್ತರಿಸುತ್ತಿರುವ ಸುದ್ದಿಯನ್ನು ದಯವಿಟ್ಟು ನಿಲ್ಲಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆರ್.ಶಂಕರ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ನಿನ್ನೆ ರಾತ್ರಿಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಅವರನ್ನು ಈ ಮೂವರು ಶಾಸಕರು ಹೋಟೆಲ್‍ವೊಂದರಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಲ್ಲದೇ ಈ ಮೂವರು ಶಾಸಕರು ಅಮಿತ್ ಶಾ ಅವರನ್ನು ಭೇಟಿ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪ್ರವಾಸದಲ್ಲಿರುವ ಕಾರಣ ಭೇಟಿ ಸಾಧ್ಯವಾಗಿರಲಿಲ್ಲ. ಪ್ರಕಾಶ್ ಜಾವೇಡ್ಕರ್ ಜತೆ ಮಾತುಕತೆ ನಡೆಸಿದ ವೇಳೆ ಕಾಂಗ್ರೆಸ್‍ನಿಂದ ಎಷ್ಟು ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ; ಇವರೆಲ್ಲರೂ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ; ಮುಂದಿನ ರಾಜಕೀಯ ಸ್ಥಿತಿ-ಗತಿ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎನ್ನುತ್ತಿವೆ ಮೂಲಗಳು.

Comments are closed.