ಕರ್ನಾಟಕ

ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ವೇಣುಗೋಪಾಲ್ ವಿರುದ್ಧ ಕುಮಾರಸ್ವಾಮಿ ಕಿಡಿ

Pinterest LinkedIn Tumblr


ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೆಹಲಿಗೆ ತೆರಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಸಿಎಂ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಇಂದು ದೆಹಲಿಗೆ ತೆರಳಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ರಾಜ್ಯ ಕಾಂಗ್ರೆಸ್ ನಾಯಕರ ಕಿತ್ತಾಟದ ಕುರಿತು ಚರ್ಚೆ ಮಾಡಿ, ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ಸಿಎಂ ನಿರ್ಧರಿಸಿದ್ದಾರಂತೆ.

ಸಿಎಂ ಆರೋಪಗಳೇನು?:
ಸಿದ್ದರಾಮಯ್ಯ ಮುಂದೊಂದು ಆಟ ಆಡುತ್ತಾರೆ, ಹಿಂದೊಂದು ಆಟವಾಡುತ್ತಾರೆ. ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆಗಳಿಗಾಗಿ ಕೇಳುವಂತೆ ಬೆಂಬಲಿಗರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಬಂಡಾಯ ಏಳುತ್ತಿರುವ ಶಾಸಕನ ಬೆಂಬಲಕ್ಕೆ ನಿಂತು ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದಾಗಿ ರಾಜ್ಯ ರಾಜಕೀಯ ನಿಯಂತ್ರಣಕ್ಕೆ ಬರುತ್ತಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಿಗೆ ಉನ್ನತ ಸ್ಥಾನ ಹಾಗೂ ಖಾತೆ ಕೊಡಿಸಲು ಪ್ಲಾನ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರ ಜಗಳದ ಹಿಂದೆ ಯಾರು ಇದ್ದಾರೆ ಎನ್ನುವ ಮಾಹಿತಿ ರಾಹುಲ್ ಗಾಂಧಿ ಅವರಿಗೆ ಗೊತ್ತಾಗಲೇಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಆಟದ ಬಗ್ಗೆ ಹೈಕಮಾಂಡ್‍ಗೆ ತಿಳಿಯಬೇಕು ಎನ್ನುವ ಉದ್ದೇಶದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮಾಜಿ ಸಿಎಂ ಬೆಂಬಲಕ್ಕೆ ನಿಂತ ಕೆ.ಸಿ.ವೇಣುಗೋಪಾಲ್ ಅವರು ಎಲ್ಲವನ್ನೂ ಸಿದ್ದರಾಮಯ್ಯ ಸರಿ ಮಾಡುತ್ತಾರೆ. ಬಂಡಾಯವನ್ನು ಹತ್ತಿಕ್ಕುತ್ತಾರೆ ಎಂದು ಹೇಳಿದ್ದರಂತೆ. ಇದರಿಂದಾಗಿ ವೇಣುಗೋಪಾಲ್ ವಿರುದ್ಧವೂ ಕುಮಾರಸ್ವಾಮಿ ಫುಲ್ ಗರಂ ಆಗಿದ್ದು, ಅವರ ಜೊತೆಗೆ ಪ್ರಯಾಣ ಬೆಳೆಸಿ ರಾಜ್ಯ ಕಾಂಗ್ರೆಸ್ ನಾಯಕರ ಡಬಲ್ ಗೇಮ್ ಕುರಿತು ಹೈಕಮಾಂಡ್ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

Comments are closed.