ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ ಗೆ ಬೆಂಗಳೂರಿನಲ್ಲಿ ಮಂಗಳವಾರ ಮತ್ತೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.
ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ನಾಲ್ವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಓರ್ವ ವಿದ್ಯಾರ್ಥಿಯನ್ನು ಚಂದ್ರಕಾಂತ್ ಮತ್ತು ಮತ್ತೋರ್ವ ವಿದ್ಯಾರ್ಥಿಯನ್ನು ಯದು ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೈಸೂರು ರಸ್ತೆಯ ಕಸ್ತೂರಬಾ ನಗರದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಕೆಎ57-294 ನೋಂದಣಿ ಸಂಖ್ಯೆಯ 223 D ನಂಬರ್ನ ಬಿಎಂಟಿಸಿ ಬಸ್, ದೊಡ್ಡಬಸ್ತಿಯಿಂದ ಮಾರ್ಕೆಟ್ ಕಡೆ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ರಾಜ ರಾಜೇಶ್ವರಿನಗರದ ಗೋಪಾಲನ್ ಆರ್ಕೇಡ್ ಬಳಿ ಬಸ್ ನ ಬ್ರೇಕ್ ಫೇಲ್ ಆಗಿ, ಫುಟ್ಪಾತ್ ಮೇಲೆ ಹತ್ತಿದೆ. ಈ ವೇಳೆ ಎದುರಿಗೆ ಬರುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ಕಾಂಪೌಂಡ್ಗೆ ಗುದ್ದಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮತ್ತಿಬ್ಬರು ಪಾದಚಾರಿಗಳು ಗಾಯಗೊಂಡಿದ್ದಾರೆ. ಇತ್ತ ಘಟನೆಯಿಂದಾಗಿ ಮೈಸೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.
10 ಲಕ್ಷ ಪರಿಹಾರ ಘೋಷಣೆ ಬಿಬಿಎಂಪಿ
ಅತ್ತ ಬಿಎಂಟಿಸಿ ಬಸ್ ಗೆ ಇಬ್ಬರು ಬಾಲಕರು ಬಲಿಯಾದ ವಿಚಾರ ತಿಳಿಯುತ್ತಲೇ ಬಿಬಿಎಂಪಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ ಧನ ಘೋಷಣೆ ಮಾಡಿದೆ. ಅಲ್ಲದೆ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಆದೇಶಿಸಿದೆ. ಪ್ರಸ್ತುತ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.
Comments are closed.