ಕರ್ನಾಟಕ

ಮಾರಮ್ಮ ಪ್ರಸಾದಕ್ಕೆ ವಿಷ: ಸತ್ತವರ ಸಂಖ್ಯೆ 11ಕ್ಕೇರಿಕೆ

Pinterest LinkedIn Tumblr


ಚಾಮರಾಜನಗರ: ಮಾರಮ್ಮನ ದೇವಸ್ಥಾನವೊಂದರ ಪ್ರಸಾದ ಸೇವನೆ ಮಾಡಿ 11 ಮಂದಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತಿ ಮಾರಮ್ಮ ದೇವಸ್ಥಾನದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪ್ರಸಾದ ತಿಂದ ಕೂಡಲೇ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬಳಿಕ 90 ಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಿಸಲಾಯಿತು. ಜೆಎಸ್​ಎಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ. ಇತ್ತ ಕೊಳ್ಳೇಗಾಲದ ಆಸ್ಪತ್ರೆಯಲ್ಲಿಯೂ ಮೂವರು ಮೃತರಾಗಿದ್ದಾರೆ. ಈಗಾಗಲೇ ಸಿಎಂ ಕುಮಾರಸ್ವಾಮಿ ಅವರು ಈ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಘೋಷಿಸಿದ್ಧಾರೆ. ದುರಂತಕ್ಕೆ ಹಲವರು ಕಂಬನಿ ಮಿಡಿದು ನೊಂದವರಿಗೆ ಸಾಂತ್ವನ ಹೇಳಿದ್ದಾರೆ.

ಹನೂರಿನ ಸುಲ್ವಾಡಿ ಗ್ರಾಮದ ದೇವಾಲಯದಲ್ಲಿ ಪ್ರಸಾದ ಸೇವಿಸಿ 10 ಮಂದಿ ಮೃತಪಟ್ಟಿದ್ದು ಕೇಳಿ ತೀವ್ರ ಬೇಸರ, ಆಶ್ಚರ್ಯವಾಗಿದೆ. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನೋವು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯ ಸಿಗಲಿ. ಇನ್ನೆಂದೂ ಉತ್ಸವಗಳಲ್ಲಿ‌ ಹೀಗಾಗದಂತೆ ಎಚ್ಚರ ವಹಿಸಬೇಕು. ಸದ್ಯ ಅಸ್ವಸ್ಥಗೊಂಡಿರುವವರು ಕ್ಷೇಮವಾಗಿರಲಿ.

ಕೆಆರ್ ಆಸ್ಪತ್ರೆಯಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದು, ಇನ್ನೂ ರೋಗಿಗಳು ಹರಿದುಬರುತ್ತಲೇ ಇದ್ದಾರೆ. ಇಲ್ಲಿ 20ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಯಲ್ಲಿದ್ಧಾರೆನ್ನಲಾಗಿದೆ. ಆದರೆ, ಅವರಿಗೆ ಚಿಕಿತ್ಸೆ ಕೊಡಲು ಕೆ.ಆರ್. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಹಲವು ಮಂದಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಜೆಎಸ್​ಎಸ್ ಆಸ್ಪತ್ರೆಯಲ್ಲಿ 6 ಮಂದಿಯನ್ನು ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರು ಅಸುನೀಗಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲೂ ಕೆಲವರು ಸಾವನ್ನಪ್ಪಿದ್ಧಾರೆ. ಹೀಗೆ ಒಟ್ಟು 11 ಮಂದಿ ಪ್ರಾಣ ಕಳೆದುಕೊಂಡಂತಾಗಿದೆ. ಪ್ರಸಾದ ಸೇವಿಸಿ 90ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಭಕ್ತರು ತಿಂದುಂಡ ಪ್ರಸಾದ ಎಲೆಯಲ್ಲಿ ಅಳಿದುಳಿದ ಅನ್ನ ತಿಂದ 60ಕ್ಕೂ ಹೆಚ್ಚು ಕಾಗೆಗಳೂ ಸಾವನ್ನಪ್ಪಿವೆ.

ಸುಲ್ವಾಡಿ ಘಟನೆ:ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಸಂಜೆ ಚೆನ್ನೈನಿಂದ ವಾಪಸಾದ ತಕ್ಷಣ ವಿಮಾನ ನಿಲ್ದಾಣದಲ್ಲಿಯೇ ಚಾಮರಾಜನಗರ ಜಿಲ್ಲೆಯ ಸುಲ್ವಾಡಿ ಗ್ರಾಮದ ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.ಮೃತಪಟ್ಟವರ ಕುಟುಂಬಕ್ಕೆ ತಲಾ 5ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು

ಮುಖ್ಯಮಂತ್ರಿಗಳು ಕೂಡಲೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಿ ಕೆ.ಆರ್. ಆಸ್ಪತ್ರೆ ಹಾಗೂ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಲಿದ್ದಾರೆ. ಮೈಸೂರಿನಿಂದ 15 ಅಂಬ್ಯುಲೆನ್ಸ್ ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.

ಈ ಘಟನೆಯಲ್ಲಿ ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದರು.

ಮೃತ ದುರ್ದೈವಿಗಳಲ್ಲಿ ವಡ್ಡರದೊಡ್ಡಿಯ ಗೋಪಿಯಮ್ಮ (35), ಶಾಂತಾ (20), ಎಂ.ಜಿ. ದೊಡ್ಡಿಯ ಪಾಪಣ್ಣ (50), ಅನಿಲ್​(12), ದೊಡ್ಡಾನೆಯ ಅಣ್ಣಯ್ಯಪ್ಪ ತಮಡಿ, ರಾಚಯ್ಯ, ಕೃಷ್ಣನಾಯಕ್, ದೊಡ್ಡಮಾದಯ್ಯ ಹಾಗೂ ಅನಿತಾ ಸುಲ್ವಾಡಿ(12) ಅವರೂ ಇದ್ದಾರೆ. ಅನಿತಾ ಸುಳ್ವಾಡಿ ಅವರು ದೇವಸ್ಥಾನದ ಅಡುಗೆ ಭಟ್ಟರ ಮಗಳೆನ್ನಲಾಗಿದೆ.

ಗೋಪುರ ಶಂಕುಸ್ಥಾಪನೆ ವೇಳೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಟಮೋಟೋ ಬಾತ್ ಹಾಗೂ ಪಂಚಾಮೃತ ಸೇವನೆ ಮಾಡಿದ ಅರ್ಧ ಗಂಟೆಯಲ್ಲಿ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗಳಾದ ಹನೂರು ಆಸ್ಪತ್ರೆ, ಕಾಮಗೆರೆ ಆಸ್ಪತ್ರೆ, ಕೊಳ್ಳೇಗಾಲ ಆಸ್ಪತ್ರೆ, ಮತ್ತು ಸುಲ್ವಾಡಿ ಆಸ್ಪತ್ರೆಗಳಲ್ಲಿ ದಾಖಲಿಸಲಾಯಿತು. ಅಲ್ಲಿ ನಾಲ್ಕೈದು ಮಂದಿ ಸಾವನ್ನಪ್ಪಿದರು. ಆ ನಂತರ ಕೆಆರ್ ಆಸ್ಪತ್ರೆ ಮತ್ತು ಜೆಎಸ್​ಎಸ್ ಆಸ್ಪತ್ರೆಗಳಿಗೆ ರೋಗಿಗಳನ್ನ ಕಳುಹಿಸಲಾಯಿತೆನ್ನಲಾಗಿದೆ. ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ B.B. ಕಾವೇರಿ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಸಚಿವ ಪುಟ್ಟರಾಜು ಕೂಡ ಮೈಸೂರಿನ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.

ಅಸ್ವಸ್ಥರಲ್ಲಿ ಸುಮಾರು 25 ಮಂದಿ ಅಯ್ಯಪ್ಪ ಮಾಲೆಧಾರಿಗಳೂ ಇದ್ದಾರೆ ಎನ್ನಲಾಗಿದೆ. ಚಾಮರಾಜನಗರ ಜಿಲ್ಲೆಯ ಬಿದರಹಳ್ಳಿ ಗ್ರಾಮದ 25 ಮಂದಿ ಪ್ರಸಾದ ಸೇವಿಸಿದ ಒಂದು ಗಂಟೆಯ ನಂತರ ಅಸ್ವಸ್ಥರಾದರು ಎಂದು ತಿಳಿದುಬಂದಿದೆ.

ಪ್ರಸಾದಕ್ಕೆ ವಿಷಪ್ರಾಶನ:

ಕಿಡಿಗೇಡಿಗಳು ಪ್ರಸಾದಕ್ಕೆ ವಿಷ ಹಾಕಿದ್ಧಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮಾರಮ್ಮ ದೇಗುಲದ ಆಡಳಿತ ಮಂಡಳಿಯಲ್ಲಿ 2 ಬಣಗಳಿದ್ದವು. ಗೋಪುರ ನಿರ್ಮಾಣಕ್ಕೆ 2 ಬಣಗಳಲ್ಲಿ ಪರ-ವಿರೋಧ ಇತ್ತು. ಇಬ್ಬರ ನಡುವಿನ ಕಿತ್ತಾಟದಿಂದಲೇ ಉದ್ದೇಶಪೂರ್ವಕವಾಗಿ ವಿಷ ಬೆರೆಸಲಾಗಿದೆ ಎನ್ನಲಾಗಿದೆ. ಮತ್ತೊಂದು ಮೂಲದ ಮಾಹಿತಿ ಪ್ರಕಾರ, ಮಾರಮ್ಮ ದೇಗುಲವಿರುವ ಜಮೀನಿನ ವಿಚಾರವಾಗಿ ಎರಡು ವರ್ಷಗಳಿಂದ ವಿವಾದವಿತ್ತು. ಎರಡು ಬಣಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಈಗ ಗೋಪುರ ನಿರ್ಮಾಣದ ಸಂದರ್ಭದಲ್ಲಿ ಒಂದು ಗುಂಪಿನವರು ತಮ್ಮ ಹಗೆಯನ್ನು ವಿಷಪ್ರಾಶನದ ಮೂಲಕ ತೀರಿಸಿಕೊಂಡಿರುವ ಶಂಕೆ ಇದೆ.

ಪ್ರಕರಣ ದಾಖಲಿಸಿರುವ ಪೊಲೀಸರು ಸುಲ್ವಾಡಿ ಗ್ರಾಮದ ಚಿನ್ನಪ್ಪಿ ಮತ್ತು ಮಾದೇಶ ಎಂಬಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಗಣ್ಯರ ಸಂತಾಪ: ಸುಲ್ವಾಡಿ ಗ್ರಾಮದಲ್ಲಿ ಪ್ರಸಾದ ಸ್ವೀಕರಿಸಿದವರಲ್ಲಿ ಇಲ್ಲಿಯವರೆಗೂ 12 ಮಂದಿ ಸಾವನ್ನಪ್ಪಿದ್ದು, ಮೃತ ಕುಟಂಬಗಳಿಗೆ ಮುಖ್ಯಮಂತ್ರಿ ತೀವ್ರ ಸಂತಾಪ ಸೂಚಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಚೆನ್ನೈಗೆ ತೆರಳಿದ್ದ ಮುಖ್ಯಮಂತ್ರಿಗಳು, ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಗಳೊಂದಿಗೆ ಮಾತನಾಡಿದರು. ಮಾಹಿತಿ ಪಡೆದುಕೊಂಡರು. ಘಟನೆಯ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿಚಾರಣೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದರು.

Comments are closed.