ಕರ್ನಾಟಕ

ದೇವೇಗೌಡರ ಕುಟುಂಬಕ್ಕೆ ಹೆದರಿ ರಾಜಕೀಯ ಜನ್ಮ ನೀಡಿದ ಕ್ಷೇತ್ರವನ್ನೇ ತೊರೆಯಲು ನಿರ್ಧರಿಸಿದ ನಾಯಕ!

Pinterest LinkedIn Tumblr


ಬೆಂಗಳೂರು: ರಾಜಕೀಯ ರಂಗದಲ್ಲಿ ಯಾವ ಘಟನೆ ಬೇಕಾದರೂ ಸಂಭವಿಸಬಹುದು. ಒಂದು ಪಕ್ಷದಲ್ಲಿ ಇದ್ದವರು ನಾಳೆ ಮತ್ತೊಂದು ಪಕ್ಷ ಸೇರಬಹುದು, ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿದವರು ನಾಳೆ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸಬಹುದು. ಅದರಂತೆ ಇಲ್ಲೊಬ್ಬ ರಾಜಕೀಯ ನಾಯಕರು ತಮ್ಮ ರಾಜಕೀಯ ಹುಟ್ಟಿಗೆ ಕಾರಣವಾದ, ಶಾಸಕ, ಮಂತ್ರಿ ಪದವಿಯಿಂದ ಹಿಡಿದು ಎಲ್ಲ ರೀತಿಯ ಹೆಸರು ಗಳಿಸಿಕೊಟ್ಟ ಕ್ಷೇತ್ರವನ್ನೇ ತೊರೆಯಲು ನಿರ್ಧರಿಸಿದ್ದಾರೆ.

ಇನ್ನು ರಾಜಕೀಯದಲ್ಲಿ ಉಳಿಗಾಲ ಇಲ್ಲ ಎಂಬ ಆತಂಕದಿಂದಲೋ ಅಥವಾ ಮತ್ತೆ ಇಲ್ಲಿ ಗೆಲ್ಲೋದು ಕಷ್ಟ ಎಂಬ ಕಾರಣದಿಂದಲೋ ತನ್ನದೇ ಭದ್ರಕೋಟೆ ಎನ್ನಲಾಗುತ್ತಿದ್ದ ಕ್ಷೇತ್ರದ ರಾಜಕೀಯ ಚದುರಂಗದಾಟಕ್ಕೆ ಅ ನಾಯಕ ಹೆದರಿ, ಇದೀಗ ತಮ್ಮ ಕ್ಷೇತ್ರವನ್ನೇ ಬದಲಿಸಲು ಚಿಂತನೆ ನಡೆಸಿದ್ದಾರೆ. ಆ ಒಂದೇ ಒಂದು ತಪ್ಪು ಈ ನಾಯಕನನ್ನು ರಾಜಕೀಯ ಸಂಕಷ್ಟಕ್ಕೆ ದೂಡಿದೆಯಾ? ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದತ್ತ ವಲಸೆ ಹೋಗಲು ಕಾರಣವೇನು? ಭಯ ಬೀಳಲು ಕಾರಣವೇನು? ಭಯಬಿದ್ದ ಆ ನಾಯಕ ಯಾರು? ಅವರು ವಲಸೆ ಹೋಗುತ್ತಿರುವ ಕ್ಷೇತ್ರ ಯಾವುದು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಹೀಗೆ ವಲಸೆ ಹೊರಟಿರುವ ನಾಯಕ ಬೇರಾರು ಅಲ್ಲ. ಎಚ್.ಡಿ.ಡಿ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ನಾಯಕ ಚೆಲುವರಾಯಸ್ವಾಮಿ. ಇವರು ಈಗಾಗಲೇ ಮಂಡ್ಯ ರಾಜಕೀಯಕ್ಕೆ ಗುಡ್ ಬೈ ಹೇಳಲು ತಯಾರಿ ನಡೆಸಿದ್ದಾರೆ. ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದೆ. ಇನ್ನು ಮುಂದೆ ಮಂಡ್ಯದಲ್ಲಿ ರಾಜಕೀಯ ಆಟ ಕಷ್ಟ. ಚುನಾವಣೆಗೆ ನಿಂತರೂ ಗೆಲ್ಲುವ ಗ್ಯಾರಂಟಿ ಇಲ್ಲ. ಚುನಾವಣೆಗೆ ನಿಂತರೂ ಗೌಡರ ಕುಟುಂಬ ಗೆಲ್ಲಲು ಬಿಡಲ್ಲ ಎನ್ನುವ ಭೀತಿಯಲ್ಲಿ ಚೆಲುವರಾಯಸ್ವಾಮಿ ಅವರು ತಮ್ಮ ಕ್ಷೇತ್ರವನ್ನೇ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇರುವ ಕ್ಷೇತ್ರವನ್ನು ತೊರೆದು, ಬೆಂಗಳೂರಯ ಉತ್ತರ ಲೋಕಸಭಾ ಕ್ಷೇತ್ರದ ಮೇಲೆ ಚೆಲುವರಾಯಸ್ವಾಮಿ ಕಣ್ಣಿಟ್ಟಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಕೇಳಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಬೆಂಗಳೂರು ಉತ್ತರ ಕ್ಷೇತ್ರದ ನಾಯಕರನ್ನು ಸಂಪರ್ಕ ಮಾಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರವನ್ನು ಚೆಲುವರಾಯಸ್ವಾಮಿ ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಈ ಕ್ಷೇತ್ರದಲ್ಲಿ 6 ಲಕ್ಷ ಒಕ್ಕಲಿಗ ಮತಗಳಿದ್ದು, ಚೆಲುವರಾಯಸ್ವಾಮಿ ಈ ಮತಗಳೇ ತಮ್ಮ ಬಲ ಎಂದು ನಂಬಿಕೊಂಡಿದ್ದಾರೆ. ಇನ್ನು ಎಸ್​ಸಿ, ಕುರುಬ, ಮುಸ್ಲಿಂ ಸಮುದಾಯದ 6 ಲಕ್ಷ ಮತಗಳು ಇರುವುದು ಚೆಲುವರಾಯಸ್ವಾಮಿಗೆ ವರದಾನವಾಗಿ ಕಂಡಿದೆ. ಹೀಗಾಗಿ ಇದೇ ಕ್ಷೇತ್ರದಿಂದ ಮುಂದಿನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಇವುಗಳಲ್ಲಿ ಐವರು ಕೈ ಶಾಸಕರು ಇದ್ದಾರೆ. ತಮ್ಮನ್ನು ಬೆಂಬಲಿಸುವಂತೆ ಚೆಲುವರಾಯಸ್ವಾಮಿ ಕೈ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಕೈ ಶಾಸಕರಿಂದಲೂ ಚೆಲುವರಾಯಸ್ವಾಮಿ ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇನ್ನು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಪರಮೇಶ್ವರ್, ಡಿಕೆಶಿ ಒಪ್ಪಿಸುವುದು ಒಂದೇ ಬಾಕಿ ಇದೆ. ಈಗಾಗಲೇ ಒಂದು ಸುತ್ತು ಸಿದ್ದರಾಮಯ್ಯ ಅವರ ಬಳಿ ಚರ್ಚೆಯೂ ಆಗಿದೆ. ಮಂಡ್ಯದಿಂದ ಬೆಂಗಳುರು ಉತ್ತರಕ್ಕೆ ವಲಸೆ ಹೋಗಲು ಕಾರಣ ಹೇಳಲಾಗಿದೆ. ಸಿದ್ದರಾಮಯ್ಯ ಅವರು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಚೆಲುವರಾಯಸ್ವಾಮಿಗೆ ಅಲ್ಲೂ ಚೆಕ್​ಮೇಟ್ ?

ಆದರೆ, ಚೆಲುವರಾಯಸ್ವಾಮಿ ಅವರ ಆಸೆಯೂ ಅಷ್ಟು ಸುಲಭವಾಗಿ ಕೈಗೂಡುವ ಸಾಧ್ಯತೆ ಇಲ್ಲ. ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಆಗುವ ಸಾಧ್ಯತೆಯೂ ಹೆಚ್ಚಿದೆ. ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಜೆಡಿಎಸ್​ ಕೂಡ ಕಣ್ಣಿಟ್ಟಿದೆ. ಹೀಗಾಗಿ ಈ ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಬೇಡಿಕೆಯನ್ನು ಇಡುವ ಸಾಧ್ಯತೆ ಇದೆ. ಚೆಲುವರಾಯಸ್ವಾಮಿ ಈ ಕ್ಷೇತ್ರದಿಂದ ಟಿಕೆಟ್ ಕೇಳಿದರೆ ಅದಕ್ಕೆ ಎಚ್.ಡಿ.ದೇವೇಗೌಡರು ಬಿಡುವುದಿಲ್ಲ. ಪಕ್ಷದಲ್ಲೆ ಇದ್ದು ಕೈ ಅಭ್ಯರ್ಥಿಗೆ ಮತ ಹಾಕಿದ್ದ ಚೆಲುವರಾಯಸ್ವಾಮಿ ಕೊನೆಗೆ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರಿದ್ದರು. ದೇವೇಗೌಡರಿಗೆ ಇನ್ನೂ ಆ ಸಿಟ್ಟು ಹೋಗಿಲ್ಲ. ಇನ್ನು ಕಾಂಗ್ರೆಸ್​ ಪಕ್ಷದಿಂದಲೂ ಈ ಕ್ಷೇತ್ರದಿಂದ ಸ್ಪರ್ಧಿಸಲು ಅಭ್ಯರ್ಥಿಗಳ ದಂಡೇ ಇದೆ. ಬಿ.ಎಲ್. ಶಂಕರ್ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಚೆಲುವರಾಯಸ್ವಾಮಿ ವಲಸೆ ಆಸೆಗೂ ಕಲ್ಲು ಬೀಳುವ ಸಾಧ್ಯತೆ ಇದೆ.

Comments are closed.