ಕರ್ನಾಟಕ

ಪ್ರೀತಿಸಿ ಮದುವೆಯಾದ ನವದಂಪತಿಗೆ ಯುವತಿಯ ತಂದೆಯಿಂದ ಜೀವಬೆದರಿಕೆ

Pinterest LinkedIn Tumblr


ಹಾವೇರಿ: ಪರಸ್ಪರ ಪ್ರೀತಿಸಿ ಮದುವೆಯಾದ ನವ ಜೋಡಿಗೆ ಯುವತಿಯ ತಂದೆ ಜೀವ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನವದಂಪತಿ ಪೊಲೀಸ್ ರಕ್ಷಣೆ ಕೋರಿ ನಗರದ ಎಸ್​ಪಿ ಕಚೇರಿಗೆ ಬಂದ ಘಟನೆ ಬುಧವಾರ ಜರುಗಿತು.

ರಾಣೆಬೆನ್ನೂರ ತಾಲೂಕಿನ ಕೆರಿಮಲ್ಲಾಪುರ ಗ್ರಾಮದ ಜಯವರ್ಧನ (29) ಎಂಬುವವರು ಗದಗ ಜಿ.ಪಂ. ಮಾಜಿ ಸದಸ್ಯ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ನಿವಾಸಿ ಎಸ್.ಎಸ್. ಮಹಾಜನಶೆಟ್ಟರ ಮಗಳು ನಿಖಿತಾ (23) ಎಂಬುವವರನ್ನು ನ. 16ರಂದು ರಾಣೆಬೆನ್ನೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ.

ಮದುವೆ ವಿಚಾರ ತಿಳಿದ ನಿಖಿತಾಳ ತಂದೆ ದಂಪತಿಗೆ ಜೀವ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದಾರಂತೆ. ಈ ಕುರಿತು ಎಸ್​ಪಿ ಕಚೇರಿಗೆ ದೂರು ನೀಡಿ, ತಮಗೆ ರಕ್ಷಣೆ ನೀಡುವಂತೆ ಕೋರಿದ್ದೇವೆ ಎಂದು ನವದಂಪತಿ ಮಾಧ್ಯಮಗಳಿಗೆ ತಿಳಿಸಿದರು.

ಯುವತಿಯ ತಂದೆ ಕಾಂಗ್ರೆಸ್ ಮುಖಂಡರಾಗಿರುವುದರಿಂದ ಜಯವರ್ಧನ ಹಾಗೂ ಅವರ ಕುಟುಂಬದವರ ವಿರುದ್ಧ ನಿಖಿತಾಳ ಅಪಹರಣ ದೂರು ದಾಖಲಿಸಿ ವಿನಾಕಾರಣ ಕಿರುಕುಳ ಕೊಡಿಸುತ್ತಿದ್ದಾರೆ. ನಾವಿಬ್ಬರೂ ವಯಸ್ಕರಾಗಿರುವುದರಿಂದ ಕಾನೂನು ಪ್ರಕಾರ ರಿಜಿಸ್ಟರ್ ಮದುವೆಯಾಗಿದ್ದೇವೆ. ಆದರೂ ಜೀವ ಬೆದರಿಕೆ, ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನಾವು ತಲೆ ಮರೆಸಿಕೊಂಡು ತಿರುಗುವಂತಾಗಿದೆ. ನಮಗೆ ಸೂಕ್ತ ರಕ್ಷಣೆ ನೀಡುವಂತೆ ಎಸ್​ಪಿಯವರಲ್ಲಿ ಮನವಿ ಮಾಡಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ ಎಂದು ನವದಂಪತಿ ತಿಳಿಸಿದರು.

ಪ್ರೀತಿ ಹುಟ್ಟಿದ್ದು ಹೀಗೆ:

ಬಿಕಾಂ ಪದವೀಧರೆ ನಿಖಿತಾ ಬೆಳ್ಳಟ್ಟಿಯಲ್ಲಿ ವಾಸವಿದ್ದಳು. ಜಯವರ್ಧನ ವೃತ್ತಿಯಿಂದ ಗುತ್ತಿಗೆದಾರ. ತನ್ನ ತಾಯಿಯ ತವರು ಮನೆಯಾದ ಬೆಳ್ಳಟ್ಟಿಗೆ ಅಜ್ಜಿಯನ್ನು ನೋಡಲು ಆಗಾಗ ಹೋಗುತ್ತಿದ್ದನಂತೆ. ಪಕ್ಕದ ಮನೆಯಲ್ಲಿಯೇ ನಿಖಿತಾ ವಾಸವಾಗಿದ್ದಳು. ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಇದು ಮೂರು ವರ್ಷದಿಂದ ಇದೆಯಂತೆ. ಇವರ ಪ್ರೀತಿಯ ವಿಷಯ ಗೊತ್ತಾಗಿ ಯುವತಿಯ ತಂದೆಯು ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದರಂತೆ. ಇದನ್ನರಿತ ನಿಖಿತಾ, ಮನೆಬಿಟ್ಟು ಬಂದು ಜಯವರ್ಧನನ ಜೊತೆಗೆ ಮದುವೆಯಾಗಿದ್ದಾಳೆ. ಮದುವೆಯಾದ ವಿಷಯ ತಿಳಿದ ತಂದೆ ಹಾಗೂ ಅವರ ಕಡೆಯವರು ಹೇಗಾದರೂ ಮಾಡಿ ನಮ್ಮಿಬ್ಬರನ್ನು ಅಗಲಿಸಿ ನಿಖಿತಾಗೆ ಬೇರೆ ಮದುವೆ ಮಾಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಜಯವರ್ಧನ ತಿಳಿಸಿದರು. ನಮ್ಮ ಮದುವೆಗೆ ನಮ್ಮ ತಂದೆಯೇ ವಿಲನ್ ಆಗಿದ್ದಾರೆ ಎಂದು ನಿಖಿತಾ ದೂರಿದರು.

ಪತ್ರವನ್ನು ಬರೆದಿದ್ದಾರಂತೆ:

ನವದಂಪತಿ ಮದುವೆಯಾದ ದಿನದಿಂದಲೇ ಜೀವ ಬೆದರಿಕೆ ಆರಂಭವಾಗಿದ್ದು, ಈ ಕುರಿತು ಪೊಲೀಸ್ ಇಲಾಖೆಗೂ ಪತ್ರ ಬರೆದಿದ್ದಾರಂತೆ. ಆದರೂ ಶಿರಹಟ್ಟಿ ಠಾಣೆಯ ಪೊಲೀಸರು ನಿಖಿತಾ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯವರ್ಧನ ಕುಟುಂಬದವರನ್ನು ಕರೆಸುತ್ತಿದ್ದಾರಂತೆ. ನಾವು ವಯಸ್ಕರಾಗಿದ್ದೇವೆ. ಒಪ್ಪಿ ಮದುವೆಯಾಗಿದ್ದೇವೆ. ಆದರೂ ಕಿರುಕುಳ ಸಹಿಸಲು ಆಗುತ್ತಿಲ್ಲ. ಎಸ್​ಪಿಯವರು ನಮಗೆ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು ಎಂದು ದಂಪತಿ ವಿನಂತಿಸಿದರು.

ಜಾತಿಯ ಅಡ್ಡಿಯಿಲ್ಲ:

ಜಾತಿಯಲ್ಲಿ ಇಬ್ಬರೂ ಲಿಂಗಾಯತರೇ. ಇವರಿಗೆ ಬದುಕಲು ಸೂಕ್ತ ರಕ್ಷಣೆ ನೀಡಿ ಎಂದು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಈ ನವ ಜೋಡಿಯ ಬೆಂಬಲಕ್ಕೆ ನಿಂತಿದ್ದಾರೆ.

Comments are closed.