ರಾಷ್ಟ್ರೀಯ

ವಿಧಾನಸಭಾ ಚುನಾವಣೆ; ಮಧ್ಯಪ್ರದೇಶದಲ್ಲಿ ಶೇ.74, ಮಿಜೋರಾಂನಲ್ಲಿ ಶೇ.73 ಮತದಾನ

Pinterest LinkedIn Tumblr


ನವದೆಹಲಿ: ತೀವ್ರ ಕುತೂಹಲ ಸೃಷ್ಟಿಸಿರುವ ಪಂಚರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆಯ ಭಾಗವಾಗಿ ಇಂದು ನಡೆದ ಮಧ್ಯಪ್ರದೇಶ ಮತ್ತು ಮಿಜೋರಾಮ್ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ಎಎನ್​ಐ ವರದಿ ಪ್ರಕಾರ ಮಧ್ಯಪ್ರದೇಶದಲ್ಲಿ ಶೇ. 74.61ರಷ್ಟು ಮತದಾನವಾಗಿದೆ. ಪಿಟಿಐ ವರದಿ ಪ್ರಕಾರ, ಮಿಜೋರಾಮ್​ನಲ್ಲಿ ಶೇ. 73 ಮತದಾನವಾಗಿದೆ. ಮಧ್ಯಪ್ರದೇಶದಲ್ಲಿ ಬರೋಬ್ಬರಿ 1,146 ಇವಿಎಂ ಮೆಷಿನ್ ಹಾಗೂ 1,545 ವಿವಿಪ್ಯಾಟ್ ಮೆಷೀನ್​ಗಳು ಕೈಕೊಟ್ಟು, ಚುನಾವಣಾ ಆಯೋಗ ಹೊಸ ಯಂತ್ರಗಳನ್ನ ಅಳವಡಿಸಿ ಮತದಾನ ಪ್ರಕ್ರಿಯೆ ಮುಂದುವರಿಸಿತು.

‘ಪಕ್ಷ ಬಲವಾಗಿರುವ ಕಡೆಯೇ ಇವಿಎಂಗಳು ಕೆಟ್ಟಿವೆ. ಇದು ಬಿಜೆಪಿಯ ಕುತಂತ್ರ. ಹಾಗಾಗಿ ಮತಯಂತ್ರ ದೋಷಕಂಡು ಬಂದ ಮತಗಟ್ಟೆಗಳಲ್ಲಿ ಮರುಮತದಾನ ನಡೆಸಬೇಕೆಂದು’ ಮಧ್ಯಪ್ರದೇಶ ಕಾಂಗ್ರೆಸ್​ ನಾಯಕರು ಒತ್ತಾಯಿಸಿದ್ದಾರೆ.

ಮಧ್ಯಪ್ರದೇಶದಲ್ಲಿ 230 ಹಾಗೂ ಮಿಜೋರಾಂನಲ್ಲಿ 40 ವಿಧಾನಸಭಾ ಸ್ಥಾನಗಳಿಗೆ ಇವತ್ತು ಬುಧವಾರ ಮತದಾನ ನಡೆಯಿತು. ಮಧ್ಯಪ್ರದೇಶದಲ್ಲಿ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ವೇಳೆಯೇ ಮೂರು ಮತಗಟ್ಟೆ ಅಧಿಕಾರಿಗಳು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಮೃತರ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಮಧ್ಯಪ್ರದೇಶದ ಬಿಂದ್​ ಪ್ರದೇಶದಲ್ಲಿ ಗುಂಡಿನ ದಾಳಿ ಆಗಿರುವ ಬಗ್ಗೆ ವರದಿಯಾಗಿದೆ.

ಮಧ್ಯಪ್ರದೇಶದಲ್ಲಿ ಕಳೆದ 3 ಅವಧಿಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಅಂತ್ಯ ಮಾಡುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್​ ಇದೆ. ಇನ್ನು ಮಿಜೋರಾಂನಲ್ಲಿ ಕಾಂಗ್ರೆಸ್​ ನೇತೃತ್ವದ ಸರ್ಕಾರ ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹವಣಿಕೆಯಲ್ಲಿದೆ.

ಈಶಾನ್ಯದಲ್ಲಿ ಕಾಂಗ್ರೆಸ್​​ ಅಧಿಕಾರದಲ್ಲಿರುವ ಏಕೈಕ ರಾಜ್ಯ ಎಂದರೆ ಮಿಜೋರಾಂ. ಹಾಗಾಗಿ ಇಲ್ಲಿ ಅಧಿಕಾರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್​ಗಿದೆ. ಇನ್ನು ಮಿಜೋರಾಂನಲ್ಲಿ ಕಮಲ ಅರಳಿಸುವ ಮೂಲಕ ಈಶಾನ್ಯ ಪ್ರದೇಶದ ಮೇಲೆ ಸಂಪೂರ್ಣ ಅಧಿಪತ್ಯ ಸಾಧಿಸುವ ಉದ್ದೇಶ ಬಿಜೆಪಿಯದ್ದು.

ಮಧ್ಯಪ್ರದೇಶದಲ್ಲಿ ಈ ಬಾರಿಯ ಚುನಾವಣಾ ಅಖಾಡ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್​ ನಾಯಕರು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಪ್ರಚಾರ ನಡೆಸುವ ಮೂಲಕ ಪಕ್ಷಕ್ಕೆ ಗೆಲುವು ತಂದುಕೊಡಲು ಮುಂದಾಗಿದ್ದಾರೆ. 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹಾಗಾಗಿ ಈ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹಳ ಮಹತ್ವದ್ದಾಗಿದೆ. ಇದರ ಫಲಿತಾಂಶ ಸಾರ್ವತ್ರಿಕ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂಬುದು ತಜ್ಞರ ಅಭಿಪ್ರಾಯ.

Comments are closed.