ಕರ್ನಾಟಕ

ವಿಷ್ಣು ಸ್ಮಾರಕ ಕುರಿತು ನಿಮಗನಿಸಿದ್ದನ್ನು ಮಾಡಿ: ಸರಕಾರಕ್ಕೆ ಭಾರತಿ ವಿಷ್ಣುವರ್ಧನ್

Pinterest LinkedIn Tumblr


ಬೆಂಗಳೂರು: ನಿಮಗೆ ಏನು ಎನಿಸುತ್ತದೆ ಹಾಗೆಯೇ ಮಾಡಿ ಎಂದು ಸರ್ಕಾರಕ್ಕೆ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಷ್ಣುಗೆ ಸ್ಮಾರಕವೇ ಬೇಕಿಲ್ಲ. ಕುಲಕೋಟಿ ಅಭಿಮಾನಿಗಳ ಪ್ರೀತಿ ಸಿಕ್ಕಿದೆ ಅಷ್ಟೇ ಸಾಕು ಎಂದು ಮಾತು ಶುರು ಮಾಡುತ್ತಲೇ ಭಾರತಿ ವಿಷ್ಣುವರ್ಧನ್ ಭಾವುಕರಾದರು.

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಸಂಸ್ಕಾರದ ಬಳಿಕ ಸ್ಮಾರಕದ ಬಗ್ಗೆ ಯಾರು ಮಾತನಾಡಿರಲಿಲ್ಲ. ಇದರಿಂದಾಗಿ ನನಗೆ ತುಂಬಾ ಸಂಕಟವಾಗಿತ್ತು. ಬಳಿಕ ನಾನೇ 7 ಲಕ್ಷ ರೂ, ಖರ್ಚು ಮಾಡಿ ಸ್ವಂತ ಹಣದಲ್ಲಿ ಪುಣ್ಯಭೂಮಿ ನಿರ್ಮಿಸಿದ್ದೇವು. ಅಲ್ಲಿ ಆರೋಗ್ಯ ಶಿಬಿರ, ಸಾಂಸ್ಕೃತಿಕ ಚಟುವಟಿಕೆ ನಡೆಸಿ ವಿಷ್ಣುವರ್ಧನ್ ಪುಣ್ಯಭೂಮಿ ಇದೆ ಅಂತಾ ಜನರಿಗೆ ಗೊತ್ತಾಯಿತು ಎಂದು ಹೇಳಿದರು.

ಅಭಿಮಾನಿಗಳು ಈಗ ಸ್ಮಾರಕದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರು ಹಿರಿಯ ಕಲಾವಿದರಿಗೆ ಗೌರವ ಸಲ್ಲಿಸಬೇಕು. ಹೀಗಾಗಿ ವಿಷ್ಣುವರ್ಧನ್ ಅವರ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ವಿಷ್ಣುಗೆ ಮೈಸೂರು ಅಂದರೆ ತುಂಬಾ ಇಷ್ಟ ಹೀಗಾಗಿ ಮೈಸೂರಿನಲ್ಲಿ ಸ್ಮಾರಕ ಮಾಡಿ ಅಂತ ಕೇಳಿಕೊಳುತ್ತಿದ್ದೇವೆ ಅಷ್ಟೇ. ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಸಿಗದ ಕಾರಣಕ್ಕೆ ಸರ್ಕಾರವೇ ಮೈಸೂರಿನಲ್ಲಿ ಜಾಗ ಗೊತ್ತುಪಡಿಸಿದೆ. ಹೀಗಾಗಿ ನಾವು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದೇವೆ. ಅಲ್ಲಿಯೂ ಕೂಡ ಅಡ್ಡಿಯಾಗುತ್ತಿದೆ. ಈ ಜಾಗ ನಮಗೆ ಜಾಗಬೇಕು ಎಂದು ರೈತರು ಅಂತಿದ್ದಾರೆ. ಯಾರೊಬ್ಬರೂ ಕಾಳಜಿ ತೆಗೆದುಕೊಳ್ಳದಿದ್ದರೆ ಹೇಗೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದರು.

ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿಕೊಡುವುದಕ್ಕೆ ಆಗಲ್ಲ ಅಂದರೆ ಅಭಿಮಾನ್ ಸ್ಟುಡಿಯೋದಲ್ಲಿಯೇ ಮಾಡಿ ತೊಂದರೆಯಿಲ್ಲ. ನಾನು ಯಾವುದೇ ಒತ್ತಾಯವನ್ನು ಸರ್ಕಾರದ ಮೇಲೆ ಹೇರುವುದಿಲ್ಲ. ಸರ್ಕಾರ ನಿಗದಿಪಡಿಸಿದ ಜಾಗದಲ್ಲೇ ಆಗಲಿ. ಸ್ಮಾರಕದ ವಿಚಾರದಲ್ಲಿ ನಾವು ವಾದ ಮಾಡುವುದಿಲ್ಲ. ಅವರ ಇಚ್ಚೆ ಭಗವಂತನ ಇಚ್ಚೆ ಏನಿದೆಯೋ ಹಾಗೆಯೇ ಆಗಲಿ. ನಿಜವಾದ ಅಭಿಮಾನಿಗಳು ನಮ್ಮ ಜೊತೆ ಇದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷ್ಣು ಸ್ಮಾರಕದ ಕುರಿತು ಉತ್ತಮ ಸ್ಪಂದನೆ ನೀಡುತ್ತಾರೆಂಬ ನಂಬಿಕೆಯಿದೆ ಅಂತ ಅಂದರು.

Comments are closed.