ಕರ್ನಾಟಕ

ಸರ್ಕಾರ ಉರುಳಿಸಲು ಸಜ್ಜಾದ ಕಾಂಗ್ರೆಸ್​- ಜೆಡಿಎಸ್​ ಶಾಸಕರು

Pinterest LinkedIn Tumblr


ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಪ್ರತಿನಿತ್ಯ ಸರ್ಕಾರದ ಅಸ್ಥಿತ್ವವೇ ಪ್ರಶ್ನೆಯಾಗಿದೆ. ಆಪರೇಷನ್​ ಕಮಲ, ಆಂತರಿಕ ಕಲಹಗಳು ಮೈತ್ರಿ ಸರ್ಕಾರವನ್ನು ಪದೇ ಪದೇ ಕಾಡುತ್ತಿದೆ. ಸರ್ಕಾರದ ರಚನೆಗೂ ಮುನ್ನ ಆಪರೇಷನ್​ ಕಮಲದಿಂದ ತಮ್ಮ ಶಾಸಕರನ್ನು ಕಷ್ಟಪಟ್ಟು ಕಾಂಗ್ರೆಸ್​ ಮತ್ತು ಜೆಡಿಎಸ್​ ಉಳಿಸಿಕೊಂಡಿತ್ತು. ಆದರೆ ಅದಾದ ನಂತರವೂ ಬಿಜೆಪಿ ಪಾಳಯದಿಂದ ಆಪರೇಷನ್​ಗೆ ಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಂದೆಡೆ ಬಿಜೆಪಿ ಪಕ್ಷದ ಶಾಸಕರನ್ನು ತೆಕ್ಕೆಗೆ ಹಾಕಿಕೊಳ್ಳುವ ಸಾಧ್ಯತೆ ದೋಸ್ತಿ ಸರ್ಕಾರವನ್ನು ಕಾಡುತ್ತಿದೆ. ಆದರೆ ಅದಕ್ಕಿಂತಲೂ ದೊಡ್ಡ ಶಾಕ್​ ಬೆಳಗಾವಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಡೆಯಲಿದೆ ಎಂದು ಉನ್ನತ ಮೂಲಗಳಿಂದ ನ್ಯೂಸ್​ 18ಗೆ ಮಾಹಿತಿ ಲಭ್ಯವಾಗಿದೆ.

ದೋಸ್ತಿ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷದ ಶಾಸಕರೇ ಸನ್ನದ್ಧರಾಗಿದ್ದಾರೆ ಎನ್ನಲಾಗಿದೆ. ಇಷ್ಟು ದಿನಗಳ ಕಾಲ ಬಿಜೆಪಿಯಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಂಡರೆ ಸಾಕು ಅಂದುಕೊಂಡಿದ್ದ ಮೈತ್ರಿ ಪಕ್ಷಗಳಿಗೀಗ ತಮ್ಮ ತಮ್ಮ ಪಕ್ಷಗಳ ಶಾಸಕರೇ ಶತ್ರುಗಳಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಬೆಳಗಾವಿ ಅಧಿವೇಶನದ ವೇಳೆ ಸಿಡಿಯಲು ಬರೋಬ್ಬರಿ 27 ಶಾಸಕರು ಸಜ್ಜಾಗಿದ್ದಾರೆ. ಇದರಲ್ಲಿ ಬೆಂಗಳೂರಿನ 9 ಶಾಸಕರೂ ಇದ್ದಾರೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ಡಿಸೆಂಬರ್​ 10ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಹಾಜರಾಗದಿರಲು ಬಂಡಾಯ ಶಾಸಕರು ನಿರ್ಧರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಶಾಸಕರನ್ನೇ ಗೌರವಿಸುತ್ತಿಲ್ಲ, ನಿಗಮ ಮಂಡಳಿ ನೇಮಕಾತಿ ಮಾಡಿಲ್ಲ, ಶಾಸಕರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಬೇಸರವೇ ಬಂಡಾಯಕ್ಕೆ ಕಾರಣ ಎನ್ನಲಾಗಿದೆ.

ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಕೂಡ ಶಾಸಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಸಮಾಧಾನವೂ ಬಂಡಾಯ ಶಾಸಕರಲ್ಲಿದೆ ಎನ್ನಲಾಗುತ್ತಿದೆ. ಈ ಅಸಮಾಧಾನಗಳ ಬಗ್ಗೆ ಗೊತ್ತಿದ್ದೂ ದೇವೇಗೌಡರು ಮಧ್ಯಪ್ರವೇಶ ಮಾಡುತ್ತಿಲ್ಲ ಎಂಬುದೂ ಬೇಸರ ಮೂಡಿಸಿದೆ ಎನ್ನುತ್ತಿವೆ ಮೂಲಗಳು.

ಬಂಡಾಯ ಶಾಸಕರ್ಯಾರು ಗೊತ್ತೇ?:

ಬೆಂಗಳೂರಿನ ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜು, ಎಂ ಕೃಷ್ಣಪ್ಪ, ಆನೇಕಲ್ ಶಿವಣ್ಣ, ಎಂಟಿಬಿ ನಾಗರಾಜ್, ಕೋಲಾರ ನಾರಾಯಣಸ್ವಾಮಿ, ಮುನಿಯಪ್ಪ, ಸುಬ್ಬಾರೆಡ್ಡಿ, ಪಿರಿಯಾಪಟ್ಟಣ , ಶಿರಾ, ಕೋಲಾರ ಜೆಡಿಎಸ್ ಶಾಸಕರು. ಮತ್ತು ಉಳಿದವರಲ್ಲಿ ಪಿ ಟಿ ಪರಮೇಶ್ವರ್ ನಾಯಕ್, ಭೀಮಾ ನಾಯ್ಕ್, ಬಿ ನಾಗೇಂದ್ರ, ರಘುಮೂರ್ತಿ, ಡಾ. ಸುಧಾಕರ್, ಶಿವಳ್ಳಿ ಸಿ ಎಸ್, ಬಿ ಸಿ ಪಾಟೀಲ್, ಶ್ರೀಮಂತ ಪಾಟೀಲ್.

ಈ ಎಲ್ಲಾ ಶಾಸಕರೂ ಈಗಾಗಲೇ ಗುಪ್ತವಾಗಿ ಸಭೆ ಸೇರಿ ಬಂಡಾಯದ ಕಹಳೆ ಮೊಳಗಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿವೇಶನಕ್ಕೂ ಮುನ್ನ ದೋಸ್ತಿ ಪಕ್ಷದ ಮುಖಂಡರು ಭರವಸೆ ಕೊಟ್ಟರೆ ಸರಿ, ಇಲ್ಲವಾದಲ್ಲಿ ಬೆಳಗಾವಿ ಅಧಿವೇಶನದಿಂದ ದೂರ ಉಳಿಯೋ ಎಚ್ಚರಿಕೆಯನ್ನು ಈಗಾಗಲೇ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.

Comments are closed.