ಕರ್ನಾಟಕ

ಗೌರಿ ಲಂಕೇಶ್​ ಹತ್ಯೆ ಪ್ರಕರಣ; 9 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.

ಕಳೆದ ವರ್ಷ ಸೆ. 5ರಂದು ಗೌರಿ ಲಂಕೇಶ್​ ಅವರನ್ನು ಮನೆಯ ಮುಂದೆಯೇ ಹತ್ಯೆ ಮಾಡಲಾಗಿತ್ತು. ಆ ಪ್ರಕರಣದ ಕುರಿತು ಸುದೀರ್ಘ 14 ತಿಂಗಳು ತನಿಖೆ ನಡೆಸಿದ ಎಸ್​ಐಟಿ ಅಧಿಕಾರಿಗಳು 1ನೇ ಸೆಷನ್ಸ್​ ನ್ಯಾಯಾಲಯಕ್ಕೆ ಬರೋಬ್ಬರಿ 9,830 ಪುಟಗಳ ಬೃಹತ್ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ.

ಎಸ್​ಐಟಿ ಮುಖ್ಯ ತನಿಖಾಧಿಕಾರಿ ಅನುಚೇತ್​ ನೇತೃತ್ವದಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿದೆ. ಡಿವೈಎಸ್​ಪಿ ರಂಗಪ್ಪ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಆದರೆ, ಗೌರಿ ಲಂಕೇಶ್​ ಹತ್ಯೆಗೆ ಬಳಸಿದ್ದ ಪಿಸ್ತೂಲ್​ ಎಲ್ಲಿದೆ ಎಂದು ಪತ್ತೆಹಚ್ಚಲು ಎಸ್​ಐಟಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದರೂ ವಿಫಲವಾಗಿದೆ. ಇನ್ನೋರ್ವ ಆರೋಪಿ ಮುರಳಿ ಕೂಡ ಇನ್ನೂ ನಾಪತ್ತೆಯಾಗಿದ್ದಾನೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಆರೋಪಿಗಳನ್ನು ಬಂಧಿಸಲಾಗಿದೆ. ಹೊಟ್ಟೆ ಮಂಜ ಮತ್ತು ಪರಶುರಾಮ ವಾಗ್ಮೋರೆ ಅವರನ್ನು ಪ್ರಮುಖ ಆರೋಪಿಗಳಾಗಿ ಚಾರ್ಜ್​ಶೀಟ್​ನಲ್ಲಿ ಹೆಸರಿಸಿರುವ ಸಾಧ್ಯತೆಯಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಸುಮಾರು 450ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಚಾರ್ಜ್‌ಶೀಟ್​ನಲ್ಲಿ ದಾಖಲು ಮಾಡಲಾಗಿದೆ.

Comments are closed.