ಕರ್ನಾಟಕ

ಸಾಲ ಮನ್ನಾ ಬಗ್ಗೆ ಯಾವುದೇ ಆತಂಕ ಬೇಡ: ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಮತ್ತೆ ಕೆಂಡಾಮಂಡಲ

Pinterest LinkedIn Tumblr


ಮಂಡ್ಯ : “ಇನ್ನೆಂದಿಗೂ ನಾನು ಭವಿಷ್ಯದಲ್ಲಿ ಸುದ್ದಿಗೋಷ್ಠಿ ನಡೆಸುವುದಿಲ್ಲ. ನಿಮಗೆ ಬೇಕಿದ್ದರೆ ಸುದ್ದಿ ಮಾಡಿಕೊಳ್ಳಿ, ಬೇಡವಾದರೆ ಬಿಡಿ,” ಎಂದು ನೆನ್ನೆಯಷ್ಟೇ ಮಾಧ್ಯಮಗಳ ವಿರುದ್ಧ ಹರಿಹಾಯ್ದು, ಸಿಎಂ ಗೃಹ ಕಚೇರಿ ಕೃಷ್ಣಗೂ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮತ್ತೆ ಮಾಧ್ಯಮಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಮಂಡ್ಯದ ದುದ್ದದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, “ಕೆಲ ದೃಶ್ಯ ಮಾಧ್ಯಮ ನನ್ನ ವಿರುದ್ಧ ಕಿಡಿ ಕಾರುತ್ತಿವೆ. ಜನ ಎಲ್ಲಿಯವರೆಗೆ ಪ್ರೀತಿಸುತ್ತಾರೆ ಅಲ್ಲಿಯವರೆಗೂ ನಾನಿರುತ್ತೇನೆ. ಪುಣ್ಯಾತ್ಮರ ಆಶೀರ್ವಾದ, ದೇವರು ಕೊಟ್ಟ ಅಧಿಕಾರ. ನೀವು ಸುದ್ದಿ ಮಾಡಿ ಅಧಿಕಾರದಿಂದಿ ಇಳಿಸಲು ಸಾಧ್ಯವಿಲ್ಲ. ಸಿಎಂ ಜಾಗ ಶಾಶ್ವತ ಅಲ್ಲ, ನಿಮ್ಮ ಹೃದಯದ ಪ್ರೀತಿ ಶಾಶ್ವತ,” ಎಂದು ಹೇಳುವ ಮೂಲಕ ಮಾಧ್ಯಮಗಳ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

ಕಬ್ಬು ಬೆಳಗಾರರ ಪ್ರತಿಭಟನೆ ವಿಚಾರವಾಗಿ ರೈತ ಮಹಿಳೆ ವಿಚಾರವಾಗಿ ಸಿಎಂ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರವನ್ನು ವಿರೋಧ ಪಕ್ಷ ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಂಡು, ದೋಸ್ತಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಇದರಿಂದ ಕೋಪಗೊಂಡ ಕುಮಾರಸ್ವಾಮಿ ಅವರು, ನೆನ್ನೆ ನಡೆದ ಕಾರ್ಯಕ್ರಮದಲ್ಲಿ “ಇನ್ನು ಮುಂದೆ ಭವಿಷ್ಯದಲ್ಲಿ ನಾನೆಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನಿಮಗೆ ಬೇಕಿದ್ದರೆ, ಸುದ್ದಿ ಮಾಡಿಕೊಳ್ಳಿ. ಬೇಡವಾದರೆ ಬಿಡಿ. ನಾನು ಸಣ್ಣ ಹೇಳಿಕೆ ನೀಡಿದರೂ ಒಂದು ಬಣಕ್ಕೆ ಸೇರಿದ ಮಾಧ್ಯಮದವರು ಅದನ್ನು ತಿರುಚಿ ಪ್ರಸಾರ ಮಾಡಿ, ನನ್ನ ಚಾರಿತ್ರವಧೆ ಮಾಡಲು ಯತ್ನಿಸುತ್ತಿದ್ದಾರೆ,” ಎಂದು ಹೇಳಿದ್ದರು.

ಸಾಲ ಮನ್ನಾ ಬಗ್ಗೆ ರೈತರಿಗೆ ಆತಂಕ ಬೇಡ. 45 ಸಾವಿರ ಕೋಟಿ ಸಾಲ ಮನ್ನಾಕ್ಕೆ ಸಿದ್ಧತೆ ನಡೆದಿದ್ದು, ಈ ತಿಂಗಳು ಸಹಕಾರಿ ಬ್ಯಾಂಕ್ ಮಾಹಿತಿ ಆಧರಿಸಿ ರೂ. 9455 ಕೋಟಿ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಮಂಡ್ಯ ಜಿಲ್ಲೆಯ ರೈತರ ರೂ 515 ಕೋಟಿ ಸಾಲ ಈ ವರ್ಷವೇ ಮನ್ನಾ ಆಗಲಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವೂ ಮನ್ನಾ ಮಾಡಲಾಗುವುದು. ರೈತರು ಮುಂದೆ ಸಾಲ ಮಾಡದೆ ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆ ಮಾಡಬೇಕು. ಯಾವುದೇ ಅಪಪ್ರಚಾರಕ್ಕೆ ರೈತರು ಕಿವಿಗೊಡಬಾರದು. ಮಂಡ್ಯ ಜಿಲ್ಲೆಯವರ ಪ್ರೀತಿ ನನ್ನ ಹೃದಯದಲ್ಲಿದೆ ಎಂದರು.

Comments are closed.