ರಾಷ್ಟ್ರೀಯ

ಉಚಿತ ಅಕ್ಕಿಯಿಂದ ಜನ ಸೋಮಾರಿಗಳಾಗಿದ್ದಾರೆ: ಮದ್ರಾಸ್‌ ಹೈಕೋರ್ಟ್‌!

Pinterest LinkedIn Tumblr


ಚೆನ್ನೈ: ಸರಕಾರ ಉಚಿತವಾಗಿ ನೀಡುವ ಅಕ್ಕಿಯಿಂದ ತಮಿಳುನಾಡು ಜನರು ಸೋಮಾರಿಗಳಾಗಿದ್ದಾರೆ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

ಸರಕಾರದ ವಿವಿಧ ಯೋಜನೆಗಳು, ಉಚಿತ ಅಕ್ಕಿ ನೀಡುತ್ತಿರುವುದು ಜನರನ್ನು ಕೆಲಸ ಮಾಡಲು ಉತ್ತೇಜಿಸುತ್ತಿಲ್ಲ. ಹೀಗಾಗಿಯೇ ಕೆಲಸಕ್ಕಾಗಿ ದೇಶದ ಉತ್ತರ ಭಾಗದಿಂದ ಜನರನ್ನು ಕರೆತರುವ ಅನಿವಾರ್ಯತೆ ಎದುರಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಹಾಗೆಂದು ಕೋರ್ಟ್‌ ಬಡವರ ವಿರುದ್ಧವಾಗಿಲ್ಲ. ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಅಕ್ಕಿ ನೀಡುವುದು ತಪ್ಪಲ್ಲ. ಎಲ್ಲ ವರ್ಗದ ಜನರಿಗೆ ಈ ರೀತಿಯ ಯೋಜನೆಗಳು ಸಿಕ್ಕರೆ ಕಷ್ಟಕರ ಎಂದು ನ್ಯಾಯಮೂರ್ತಿ ಎನ್‌ ಕಿರುಬುಕರನ್‌ ಹಾಗೂ ನ್ಯಾಯಮೂರ್ತಿ ಅಬ್ದುಲ್‌ ಕುದ್ದೋಸ್‌ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಉಚಿತ ಅಕ್ಕಿಯನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದ ವಿಚಾರಣೆ ವೇಳೆ ಈ ರೀತಿ ಹೇಳಿದೆ.
2017-18ರಲ್ಲಿ 2,110 ಕೋಟಿ ರೂ. ಉಚಿತ ಅಕ್ಕಿ ವಿತರಣೆಗೆ ವ್ಯಯಿಸಲಾಗಿದೆ. ಇದು ರಾಜ್ಯ ತನ್ನ ಬೊಕ್ಕಸದಿಂದಲೇ ನೀಡಬೇಕಾದ ಹಣ. 2 ಸಾವಿರ ಕೋಟಿ ರೂ. ನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬಹುದಿತ್ತು ಎಂದು ಕೋರ್ಟ್‌ ಹೇಳಿದೆ.

ಬಡತನ ರೇಖೆಗಿಂತ ಕೆಳಗಿನವರಿಗೆ ಮಾತ್ರವೇ ಈ ಯೋಜನೆ ಬಳಕೆಯಾಗಬೇಕು. ಇಂತಹ ಕುಟುಂಬಗಳು ರಾಜ್ಯದಲ್ಲಿ ಎಷ್ಟಿವೆ ಎಂಬುದಕ್ಕೆ ಸಮೀಕ್ಷೆಗಳೇನಾದರೂ ನಡೆದಿವೆಯೇ? ಈ ವರ್ಗದ ಜನರಿಗೆ ಮಾತ್ರ ಅಕ್ಕಿ ವಿತರಣೆ ಮಾಡಬೇಕಾದರೆ ಬೇಕಾಗುವ ಪ್ರಮಾಣ, ಇದಕ್ಕಾಗು ಖರ್ಚು ಎಷ್ಟು ಎಂದು ಕೋರ್ಟ್‌ ಪ್ರಶ್ನಿಸಿದೆ.
ವಿವರ ನೀಡಲು ಅಡ್ವಕೇಟ್‌ ಜನರಲ್‌ ವಿಜಯ್‌ ನಾರಾಯಣ್‌, ಕಾಲಾವಕಾಶ ಕೇಳಿದ್ದಾರೆ.

ಯಾರಿಗೆ ಅಕ್ಕಿ ಹಾಗೂ ಇನ್ನಿತರ ವಸ್ತುಗಳು ಅಗತ್ಯವಿದೆಯೋ ಅಂತಹವರಿಗೆ ಯೋಜನೆಯ ಲಾಭ ಸಿಕ್ಕಬೇಕು. ರಾಜಕೀಯ ಲಾಭಕ್ಕಾಗಿ ಇದನ್ನು ಯೋಜನೆಯನ್ನು ಎಲ್ಲರಿಗೂ ವಿಸ್ತರಿಸಲಾಗುತ್ತಿದೆ. ಅಂತೆಯೇ ಜನರು ಹೀಗಾಗಿಯೇ ಸೋಮಾರಿಗಳಾಗಿ ಪರಿಚರ್ತನೆಯಾಗುತ್ತಿದ್ದು, ಉತ್ತರದಿಂದ ಕೆಲಸಕ್ಕೆ ಜನರು ಬರಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ ಕೋರ್ಟ್‌, ವಿಚಾರಣೆಯನ್ನು ನ.30ಕ್ಕೆ ಮುಂದೂಡಿದೆ.

Comments are closed.