ಕರ್ನಾಟಕ

ಜನಾರ್ದನ ರೆಡ್ಡಿಯ 100 ಕೋಟಿ ಆಫರ್‌ ಗೆ 20 ಕೋಟಿ ನೀಡಿದ ಆ್ಯಂಬಿಡೆಂಟ್‌ ಕಂಪನಿ ಮಾಲಿಕ!

Pinterest LinkedIn Tumblr


ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಶತಕೋಟಿ ಬಂಡವಾಳ ಹೂಡಿಕೆಯ ಆಸೆ ತೋರಿಸಿ ಆ್ಯಂಬಿಡೆಂಟ್‌ ಕಂಪನಿ ಮಾಲಿಕನಿಂದ 20 ಕೋಟಿ ರು.ಗಳನ್ನು ಪಡೆದಿದ್ದರು ಎಂಬ ಕುತೂಹಲಕಾರಿ ಸಂಗತಿ ಸಿಸಿಬಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಿಚಾರಣೆ ವೇಳೆ ‘ಇ.ಡಿ. ಡೀಲ್‌’ ಪ್ರಕರಣದ ಹಿಂದಿನ ಹಣಕಾಸು ವ್ಯವಹಾರ ಕೆದಕಿದಾಗ ಆ್ಯಂಬಿಡೆಂಟ್‌ ಕಂಪನಿ ಮಾಲಿಕ ಸೈಯದ್‌ ಅಹಮದ್‌ ಫರೀದ್‌, ತಾನು ಹೇಗೆ ಜನಾರ್ದನ ರೆಡ್ಡಿ ಬಲೆಗೆ ಬಿದ್ದೆ ಎಂಬ ವಿಷಯ ಬಾಯ್ಬಿಟ್ಟ. ಆಗಲೇ ರೆಡ್ಡಿ ಅವರ 100 ಕೋಟಿ ರು. ಬಂಡವಾಳದ ಕತೆಯೂ ಹೊರಬಂತು ಎಂದು ಸಿಸಿಬಿ ವಿಶ್ವಸನೀಯ ಮೂಲಗಳು ತಿಳಿಸಿವೆ.

‘ನಿಮ್ಮ ಕಂಪನಿ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ನಿಮ್ಮ ಮೇಲೆ ನನಗೆ ವಿಶ್ವಾಸ ಮೂಡಿದೆ. ಈ ಡೀಲ್‌ ಮುಗಿದ ನಂತರ ನಾನೇ ನಿಮ್ಮ ಕಂಪನಿಯಲ್ಲಿ 100 ಕೋಟಿ ರು. ಹಣ ತೊಡಗಿಸುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ದರು. ನಾನು ಅವರಿಗೆ 20 ಕೋಟಿ ರು. ನೀಡಿದರೂ ನಷ್ಟವಾಗುವುದಿಲ್ಲ. ಹೇಗಿದ್ದರೂ ಅವರಿಂದ 80 ಕೋಟಿ ರು. ಸಿಗಲಿದೆ ಎಂದು ಭಾವಿಸಿ ರೆಡ್ಡಿ ಅವರ ಡೀಲ್‌ಗೆ ಒಪ್ಪಿದೆ. ಅದರ ಅನ್ವಯ ಎರಡು ಕೋಟಿ ರು. ನಗದು ಹಾಗೂ 18 ಕೋಟಿ ರು.ಗಳನ್ನು 57 ಕೆ.ಜಿ. ಚಿನ್ನದ ರೂಪದಲ್ಲಿ ತಲುಪಿಸಿದ್ದೆ’ ಎಂದು ಫರೀದ್‌ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇ.ಡಿ. ಡೀಲ್‌ ಮುಗಿದ ನಂತರ ಜುಲೈನಲ್ಲಿ 100 ಕೋಟಿ ರು. ಬಂಡವಾಳ ವಿಚಾರವಾಗಿ ರೆಡ್ಡಿ ಅವರನ್ನು ಫರೀದ್‌ ಭೇಟಿಯಾಗಿದ್ದರು. ಆಗ ನನ್ನ ಬಳಿ ಹಣವಿಲ್ಲ. ಎಲ್ಲಾ ಖರ್ಚಾಗಿಹೋಗಿದೆ. ಮುಂದೆ ನೋಡೋಣ ಎಂದು ಸಬೂಬು ಹೇಳಿ ಆತನನ್ನು ರೆಡ್ಡಿ ಕಳುಹಿಸಿದ್ದರು. ಇದೇ ರೆಡ್ಡಿ ಮತ್ತು ಫರೀದ್‌ ನಡುವಿನ ಕೊನೆ ಭೇಟಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಲ್ಕು ಬಾರಿ ರೆಡ್ಡಿ ಜತೆ ಭೇಟಿ: ಜಾರಿ ನಿರ್ದೇಶನಾಲಯದ ತನಿಖೆ ಭೀತಿಯಲ್ಲಿದ್ದ ಆ್ಯಂಬಿಡೆಂಟ್‌ ಕಂಪನಿ ಮಾಲಿಕ ಸೈಯದ್‌ ಅಹಮದ್‌ ಫರೀದ್‌ ಹಾಗೂ ಆತನ ಪುತ್ರ ಅಫಕ್‌, ಸಹಾಯ ಕೋರಿ 2018ರ ಫೆಬ್ರವರಿ 27ರಂದು ಮೊದಲ ಬಾರಿಗೆ ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಗೆ ರಿಯಲ್‌ ಎಸ್ಟೇಟ್‌ ಉದ್ಯಮಿ ಬ್ರಿಜೇಶ್‌ ರೆಡ್ಡಿ ಹಾಗೂ ಅಲಿಖಾನ್‌ ಮಧ್ಯವರ್ತಿಗಳಾಗಿದ್ದರು. ಪ್ರಾಥಮಿಕ ಹಂತದ ಮಾತುಕತೆ ನಡೆದ ಬಳಿಕ ಮಾಚ್‌ರ್‍ನಲ್ಲಿ ಮತ್ತೆರಡು ಬಾರಿ ಅವರ ಭೇಟಿ ನಡೆದಿದೆ ಎಂದು ಸಿಸಿಬಿ ಅಧಿಕಾರಿಗಳು ವಿವರಿಸಿದ್ದಾರೆ.

ಮೂರನೇ ಸಲದ ಭೇಟಿಯಲ್ಲೇ ರೆಡ್ಡಿ ಜತೆ ಫರೀದ್‌ ವ್ಯವಹಾರ ಕುದುರಿದೆ. ಆಗಲೇ ಕೇಕ್‌ ಕತ್ತರಿಸಿ ಅವರು ಸಂಭ್ರಮಾಚರಣೆ ಮಾಡಿರಬಹುದು. ಈ ಮಾತುಕತೆ ವೇಳೆ ರೆಡ್ಡಿ, ಫರೀದ್‌ಗೆ ಆ್ಯಂಬಿಡೆಂಟ್‌ ಕಂಪನಿಯಲ್ಲಿ 100 ಕೋಟಿ ಬಂಡವಾಳ ತೊಡಗಿಸುವ ಭರವಸೆ ನೀಡಿರುವುದು. ಜುಲೈನಲ್ಲಿ ರೆಡ್ಡಿ ಅವರನ್ನು ಕೊನೆ ಬಾರಿಗೆ ಫರೀದ್‌ ಭೇಟಿಯಾಗಿದ. ಆಗ ಬಂಡವಾಳ ಕುರಿತು ವಿಚಾರಿಸಿದಾಗ ನನ್ನ ಬಳಿ ಹಣ ಎಲ್ಲಿದೆ ಎಂದು ರೆಡ್ಡಿ ಹೇಳಿದ್ದರು. ಹೀಗಾಗಿ ರೆಡ್ಡಿ ನಂಬಿ ನಾನು ಮೋಸ ಹೋದೆ ಎಂದು ಫರೀದ್‌ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.