ರಾಷ್ಟ್ರೀಯ

ಮಕ್ಕಳಿಗೆ ಲೈಂಗಿಕ ಪಾಠ ಮಾಡಿದ ಮಧು ಕುಮಾರಿ ಬಂಧನ

Pinterest LinkedIn Tumblr


ಪಟನಾ: ಬಿಹಾರದ ಮುಜಫ್ಫರ್‌ನಗರ ಬಾಲಕಿಯರ ಆಶ್ರಯತಾಣದಲ್ಲಿ ನಡೆದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ‘ಲೈಂಗಿಕತೆ ಪಾಠ’ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಮಧು ಕುಮಾರಿಯನ್ನು ಮಂಗಳವಾರ ಸಿಬಿಐ ಬಂಧಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್‌ ಠಾಕೂರ್‌ಗೆ ಆಪ್ತರಾದ ಮಧು, ಆತ ನಡೆಸುವ ಎಲ್ಲ ಎನ್‌ಜಿಒಗಳ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಹೇಗೆ ಎಂಬುದರ ಬಗ್ಗೆ ಈಕೆ ಬಾಲಕಿಯರಿಗೆ ವಿವರವಾಗಿ ‘ಪಾಠ’ ಮಾಡುತ್ತಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ವಿಚಾರಣೆಗಾಗಿ ಮಧು ಅವರನ್ನು ಸಿಬಿಐ ವಿಭಾಗೀಯ ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು, ಅವರನ್ನು ಬಂಧಿಸಿದ್ದಾರೆ. ಅಲ್ಲದೆ, ತಪಾಸಣೆಯ ನೆಪದಲ್ಲಿ ಬಾಲಕಿಯರಿಗೆ ಮಾದಕ ದ್ರವ್ಯ ಹೊಂದಿದ ಚುಚ್ಚು ಮದ್ದು ನೀಡುತ್ತಿದ್ದ ಆರೋಪ ಎದುರಿಸುತ್ತಿರುವ ಡಾ.ಅಶ್ವನಿ ಕುಮಾರ್‌ ಅವರನ್ನೂ ಮಂಗಳವಾರ ಬಂಧಿಸಲಾಗಿದೆ. ಮುಜಫ್ಫರ್‌ನಗರದ ಕುದ್ನಿ ಪ್ರದೇಶದಿಂದ ಡಾ.ಅಶ್ವನಿ ಅವರನ್ನು ಬಂಧಿಸಲಾಯಿತು.

ಮಾಜಿ ಸಚಿವೆ ಶರಣಾಗತಿ: ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಸಚಿವೆ ಮಂಜು ವರ್ಮ ಮಂಗಳವಾರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಅವರಿಗೆ ಡಿಸೆಂಬರ್‌ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಜಫ್ಫರ್‌ನಗರದ ಬಾಲಿಕಾಗೃಹದಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ವರ್ಮ ಮನೆಗೆ ನಡೆದ ದಾಳಿ ವೇಳೆ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಬಳಿಕ ಅವರು ತಲೆಮರೆಸಿಕೊಂಡಿದ್ದರು. ಪ್ರಧಾನ ಆರೋಪಿ ಬೃಜೇಶ್‌ ಠಾಕೂರ್‌ ಅವರ ಪತ್ನಿ ವರ್ಮ, ಆಪಾದನೆ ಕೇಳಿಬಂದ ಬಳಿಕ ಸಮಾಜ ಕಲ್ಯಾಣ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Comments are closed.