ಕರ್ನಾಟಕ

ಇಂಗ್ಲಿಷ್ ಬಳಸಿದ್ದಕ್ಕೆ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷರಿಗೆ ಕುಮಾರಸ್ವಾಮಿ ತರಾಟೆ

Pinterest LinkedIn Tumblr


ಬೆಂಗಳೂರು: ಒಂದೆಡೆ ಕಬ್ಬು ಬೆಳೆಗಾರರ ಕೋಪಕ್ಕೆ ತುತ್ತಾಗಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕೊಟ್ಟ ಭರವಸೆಯಂತೆ ಬಾಕಿ ಹಣವನ್ನು ರೈತರಿಗೆ ತಲುಪುವಂತೆ ಮಾಡುವ ಜವಾಬ್ದಾರಿ. ಇನ್ನೊಂದು ಕಡೆ ಕಬ್ಬು ಕಾರ್ಖಾನೆಗಳ ಸಂಘದ ಮನವೊಲಿಸುವ ಕಾರ್ಯ. ಇವೆರಡರ ನಡುವೆ ಸಿಲುಕಿಕೊಂಡಿರುವ ಕುಮಾರಸ್ವಾಮಿ, ಕರ್ತವ್ಯ ಪಾಲಿಸುವ ಜತೆಜತೆಗೆ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.

ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಭೆ ನಡೆಸಿದರು. ಸಭೆ ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ವಿಜಯ್​ ರೆಡ್ಡಿಯವರನ್ನು ಎಷ್ಟು ಹಣ ಬಾಕಿ ಉಳಿಸಿಕೊಂಡಿದ್ದೀರಿ ಮತ್ತು ಕಾರಣವೇನು ಎಂದು ಕುಮಾರಸ್ವಾಮಿ ಕೇಳಿದ್ದಾರೆ. ಇದಕ್ಕೆ ಉತ್ತರಿಸುವಾಗ ವಿಜಯ್​ ರೆಡ್ಡಿ ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಿಎಂ, ಕನ್ನಡದಲ್ಲಿ ಮಾತನಾಡಿ, ಇಂಗ್ಲೀಷ್​ನಲ್ಲಿ ಯಾಕೆ ಮಾತನಾಡುತ್ತಿದ್ದೀರಿ ಎಂದಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ವಿಜಯ್​ ರೆಡ್ಡಿ ತಮಗೆ ಕನ್ನಡ ಬರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದಾಗ ಕುಮಾರಸ್ವಾಮಿ ಇನ್ನಷ್ಟು ಕೋಪಗೊಂಡು, ಕನ್ನಡದಲ್ಲಿ ಮಾತನಾಡುವುದನ್ನು ಮೊದಲು ಕಲಿಯಿರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಜತೆಗೆ ಹೊರ ರಾಜ್ಯದವರನ್ನು ಕರ್ನಾಟಕ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷರನ್ನಾಗಿ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಹೊರ ರಾಜ್ಯದವರಿಗೆ ನಮ್ಮ ಭಾಷೆಯೂ ಬರುವುದಿಲ್ಲ, ನಮ್ಮ ರೈತರ ಕಷ್ಟಗಳೂ ಅರ್ಥವಾಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳುತ್ತಿವೆ. ಮುಂದಿನ ಬಾರಿ ಕನ್ನಡದವರನ್ನೇ ಸಂಘದ ಅಧ್ಯಕ್ಷ ಸ್ಥಾನಕ್ಕೇರಿಸಿ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ರೈತರ ಮತ್ತು ಮಾಲೀಕರ ಸಮಸ್ಯೆಗಳನ್ನು ಸರಿದೂಗಿಸಿ, ಸಮಸ್ಯೆಗೆ ಪರಿಹಾರ ಹುಡುಕುವ ಧಾವಂತದಲ್ಲಿಯೂ ಕನ್ನಡ ಪ್ರೇಮವನ್ನು ಕುಮಾರಸ್ವಾಮಿ ಮರೆತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

Comments are closed.