ಕರ್ನಾಟಕ

ಗಜ ಚಂಡಮಾರುತ: ನವೆಂಬರ್ 21ರ ವರೆಗೆ ಕಡಲಿಗಿಳಿಯದಂತೆ ರಾಜ್ಯದ ಮೀನುಗಾರರಿಗೆ ಎಚ್ಚರಿಕೆ

Pinterest LinkedIn Tumblr


ಬೆಂಗಳೂರು: ತಮಿಳುನಾಡಿನಲ್ಲಿ ಸಾಕಷ್ಟು ಹಾನಿಯುಂಟು ಮಾಡಿರುವ ’ಗಜ’ ಚಂಡಮಾರುತ ಬಂಗಾಳಕೊಲ್ಲಿಯಿಂದ ಅರಬ್ಬೀ ಸಮುದ್ರ ಕಡೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳಲಿದ್ದು, ನ.21ರ ವರೆಗೆ ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪ ಪ್ರದೇಶದ ಮೀನುಗಾರರು ನ.17ರಿಂದ 21ರ ವರೆಗೆ ಸಮುದ್ರಕ್ಕಿಳಿದಂತೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಸಮುದ್ರ ಪ್ರಕ್ಷಬ್ಧಗೊಂಡಿದ್ದು, ನ.17ರಂದು ಮಂಗಳೂರಿನಿಂದ ಕಾರವಾದವರೆಗೆ ಸಮುದ್ರದಲ್ಲಿ ಸಂಜೆ 5.30ರಿಂದ ರಾತ್ರಿ 11.30ರ ವರೆಗೆ 2 ಮೀಟರ್‌ನಿಂದ 2.6 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಗಳಿವೆ. ಸಮುದ್ರದಲ್ಲಿ ಪ್ರತಿ ಸೆಕೆಂಡಿಗೆ 32ರಿಂದ 79 ಕಿಮೀ. ವೇಗದಲ್ಲಿ ಗಾಳಿ ಬೀಸಲಿದೆ. ನ.18ರಂದು ಅರಬ್ಬೀ ಸಮುದ್ರದ ಆಗ್ನೇಯ ಹಾಗೂ ಬಂಗಾಳ ಕೊಲ್ಲಿ ಮಧ್ಯ ಭಾಗದಿಂದ ಗಂಟೆಗೆ 75-85 ಕಿಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ನ.19ರಂದು ಅರಬ್ಬೀ ಸಮುದ್ರದ ಆಗ್ನೇಯ ದಿಕ್ಕಿನಿಂದ ನೈಋತ್ಯ ಕಡೆಗೆ ಮತ್ತು ನ. 20 ಮತ್ತು 21ರಂದು ಅರಬ್ಬೀ ಸಮುದ್ರದ ಆಗ್ನೇಯ ಹಾಗೂ ಬಂಗಾಳ ಕೊಲ್ಲಿಯ ನೈಋತ್ಯ ದಿಕ್ಕಿನಿಂದ ಗಂಟೆಗೆ 40-50 ಕಿಮೀ. ವೇಗದಲ್ಲಿ ಗಾಳಿ ಬೀಸಲಿದೆ.

ಲಕ್ಷದ್ವೀಪಕ್ಕೆ ಮಹಾಮಳೆ: ಲಕ್ಷದ್ವೀಪ ಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿಯಿಂದ ಅತೀ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಲಕ್ಷದ್ವೀಪದ ಇನ್ನೂ ಕೆಲವು ಪ್ರದೇಶಗಳಲ್ಲಿ ಮಹಾ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ: ಭಾರಿ ಮಳೆ ಸಾಧ್ಯತೆ
ಗಜ ಚಂಡಮಾರುತ ಅರಬ್ಬೀ ಸಮುದ್ರ ಕಡೆಗೆ ಸಾಗುತ್ತಿದ್ದು, ಈ ನಡುವೆ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರದಲ್ಲಿ ನ.19ರಿಂದ 23ರ ವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಬಂಗಾಳಕೊಲ್ಲಿಯಲ್ಲಿ ನ.19ರ ಬಳಿಕ ಮತ್ತೊಂದು ನಿಮ್ನ ಒತ್ತಡ ಪ್ರದೇಶ ಉಂಟಾಗಲಿದೆ. ಈ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಕುರಿತು ಈಗ ಏನೂ ಹೇಳಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ. ಎಸ್.ಎಸ್. ಎಂ ಗಾವಸ್ಕರ್ ಶನಿವಾರ ತಿಳಿಸಿದ್ದಾರೆ

Comments are closed.